ಮಹಾರಾಜ ಟ್ರೋಫಿ ಟಿ20: ಹುಬ್ಬಳ್ಳಿ ಟೈಗರ್ಸ್​ಗೆ ಅನೀಶ್ವರ್ ಗೌತಮ್ ನಾಯಕರಾಗಿ ನೇಮಕ

ಮಹಾರಾಜ ಟ್ರೋಫಿ ಟಿ20: ಹುಬ್ಬಳ್ಳಿ ಟೈಗರ್ಸ್​ಗೆ ಅನೀಶ್ವರ್ ಗೌತಮ್ ನಾಯಕರಾಗಿ ನೇಮಕ
ಮಹಾರಾಜ ಟ್ರೋಫಿ ಟಿ20: ಹುಬ್ಬಳ್ಳಿ ಟೈಗರ್ಸ್​ಗೆ ಅನೀಶ್ವರ್ ಗೌತಮ್ ನಾಯಕರಾಗಿ ನೇಮಕ
Published on

ಪ್ರಮುಖ ಮುಖ್ಯಾಂಶಗಳು

  • ಹೊಸ ಸೀಸನ್​​ಗೆ ಮುನ್ನ ತಂಡದ ಜೆರ್ಸಿ ಅನಾವರಣ ಮತ್ತು ಅಧಿಕೃತ ಗೀತೆಯ ಬಿಡುಗಡೆ
ಬೆಂಗಳೂರು: ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 (Maharaja Trophy KSCA T20) ಟೂರ್ನಿಯ ಐದನೇ ಆವೃತ್ತಿಗೆ ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕನಾಗಿ ಅನೀಶ್ವರ್ ಗೌತಮ್ (Aneeshwar Gautam) ಅವರನ್ನು ಗುರುವಾರ ಘೋಷಿಸಲಾಯಿತು. ಇದೇ ಸಂದರ್ಭದಲ್ಲಿ ತಂಡದ ಅಧಿಕೃತ ಜೆರ್ಸಿಯನ್ನು ಅನಾವರಣಗೊಳಿಸಿ, ಹುಬ್ಬಳ್ಳಿ ಟೈಗರ್ಸ್ (Hubli Tigers) ತಂಡದ ಗೀತೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೆಎಸ್​ಸಿಎ ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎಸ್. ಕೇಶವ, ಕೆಎಸ್​​ಸಿಎ ಖಜಾಂಚಿ ಬಿ.ಎನ್. ಮಧುಕರ್, ಹುಬ್ಬಳ್ಳಿ ಟೈಗರ್ಸ್ ಮಾಲೀಕ ಶಿವೇಕ್ ಜಿಂದಾಲ್ ಹಾಗೂ ಸುಶೀಲ್ ಕುಮಾರ್ ಜಿಂದಾಲ್, ಆಟಗಾರರು, ತರಬೇತಿ ಸಿಬ್ಬಂದಿ ಮತ್ತು ತಂಡದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ಬಳಿಕ ಮಾತನಾಡಿದ ಅನೀಶ್ವರ್ ಗೌತಮ್, “ನಾಯಕತ್ವದ ಬಗ್ಗೆ ಮೊದಲ ಬಾರಿ ಮಾತುಕತೆ ನಡೆದಾಗ ಸ್ವಲ್ಪ ಆತಂಕವಿತ್ತು. ಆದರೆ ವಿನಯ್ ಕುಮಾರ್ ಹಾಗೂ ತರಬೇತಿ ಸಿಬ್ಬಂದಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ತಂಡದ ಎಲ್ಲರಿಂದಲೂ ಉತ್ತಮ ಬೆಂಬಲ ದೊರೆಯಿತು. ಈ ತಂಡವನ್ನು ಮುನ್ನಡೆಸುವುದು ನನಗೆ ಗೌರವ ಹಾಗೂ ಹೆಮ್ಮೆಯ ವಿಷಯ. ಪ್ರತಿ ಹರಾಜಿನಲ್ಲೂ ಹುಬ್ಬಳ್ಳಿ ಟೈಗರ್ಸ್ ನನ್ನನ್ನು ಆಯ್ಕೆ ಮಾಡಲಿ ಎಂಬ ಆಶಯ ಇತ್ತು. ಈಗ ಇದೇ ತಂಡದ ನಾಯಕನಾಗಿರುವುದು ವಿಶೇಷ ಅನುಭವ” ಎಂದರು.

ಮುಖ್ಯ ಕೋಚ್ ವಿನಯ್ ಕುಮಾರ್ ತಂಡದ ಸಮತೋಲನ ಮತ್ತು ಫ್ರಾಂಚೈಸಿಯ ಬೆಂಬಲವನ್ನು ಶ್ಲಾಘಿಸಿದರು. “ಈ ಫ್ರಾಂಚೈಸಿ ಐಪಿಎಲ್ ತಂಡದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೆಮ್ಮೆಯಿಂದ ಹೇಳಬಹುದು. ನಿರ್ವಹಣಾ ಮಂಡಳಿ ತರಬೇತಿ ಸಿಬ್ಬಂದಿಗೆ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಅಗತ್ಯ ಬೆಂಬಲ ಒದಗಿಸುತ್ತದೆ. ಆರಂಭದಿಂದಲೂ ಅವರು ಈ ಫ್ರಾಂಚೈಸಿಯ ಬೆನ್ನೆಲುಬಾಗಿದ್ದಾರೆ. ಈ ಬಾರಿ ಅನುಭವ ಮತ್ತು ಯುವ ಪ್ರತಿಭೆಗಳ ಉತ್ತಮ ಮಿಶ್ರಣವಿರುವ ಬಲಿಷ್ಠ ತಂಡವನ್ನು ನಾವು ಕಟ್ಟಿದ್ದೇವೆ. ಈಗ ಆಟಗಾರರು ತಮ್ಮ ಶ್ರೇಷ್ಠ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಗೆಲ್ಲಲು ಪ್ರಯತ್ನಿಸಬೇಕು” ಎಂದು ಹೇಳಿದರು.
ಹುಬ್ಬಳ್ಳಿ ಟೈಗರ್ಸ್ ಸಹ-ಮಾಲೀಕ ಸುಶೀಲ್ ಕುಮಾರ್ ಜಿಂದಾಲ್ ಮಾತನಾಡಿ, “ಈ ಜೆರ್ಸಿ ನಮ್ಮ ಗುರಿಯನ್ನು ಪ್ರತಿನಿಧಿಸಿದರೆ, ಈ ಗೀತೆ ನಮ್ಮ ಧ್ವನಿಯನ್ನು ಪ್ರತಿನಿಧಿಸುತ್ತದೆ. ಇವೆರಡೂ ಸೇರಿ ಉತ್ತರ ಕರ್ನಾಟಕದ ಹೆಮ್ಮೆ, ಹೋರಾಟದ ಮನೋಭಾವ ಮತ್ತು ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತವೆ. ಕರ್ನಾಟಕವು ಪ್ರತಿಭೆಗಳ ಖನಿಜ ಭಂಡಾರವಾಗಿದೆ. ಸ್ಥಳೀಯ ಪ್ರತಿಭಾವಂತ ಆಟಗಾರರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ವೇದಿಕೆ ಕಲ್ಪಿಸುವುದೇ ನಮ್ಮ ಉದ್ದೇಶ” ಎಂದು ಹೇಳಿದರು.
2023ರಲ್ಲಿ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಪ್ರಶಸ್ತಿ ಗೆದ್ದಿದ್ದ ಹುಬ್ಬಳ್ಳಿ ಟೈಗರ್ಸ್, ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವ ಗುರಿಯೊಂದಿಗೆ ಹೊಸ ಸೀಸನ್​​ಗೆ ಕಾಲಿಡುತ್ತಿದೆ. ಸೀಸನ್ 5 ಆಟಗಾರರ ಹರಾಜಿನಲ್ಲಿ ಅಭಿನವ್ ಮನೋಹರ್ ಮತ್ತು ಮಯಾಂಕ್ ಅಗರ್ವಾಲ್ ಸೇರಿದಂತೆ ಹಲವು ಅನುಭವಿ ಹಾಗೂ ಉದಯೋನ್ಮುಖ ಆಟಗಾರರನ್ನು ತಂಡ ಸೇರಿಸಿಕೊಂಡಿದೆ.
ಮಹಾರಾಜ ಟ್ರೋಫಿ ಕೆಎಸ್​​ಸಿಎ ಟಿ20 ಟೂರ್ನಿಯ ಐದನೇ ಆವೃತ್ತಿಯು ಜೂನ್ 20ರಿಂದ ಜುಲೈ 12ರವರೆಗೆ ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ನಡೆಯಲಿದ್ದು, ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಜೂನ್ 27ರಿಂದ ಜುಲೈ 3ರವರೆಗೆ ಹುಬ್ಬಳ್ಳಿಯಲ್ಲಿ 12 ಪಂದ್ಯಗಳು ನಡೆಯಲಿವೆ.
ಇದಕ್ಕೂ ಮುನ್ನ ಮೈಸೂರು ವಾರಿಯರ್ಸ್ ತಂಡವು ತನ್ನ ಅಧಿಕೃತ ಜೆರ್ಸಿಯನ್ನು ಅನಾವರಣಗೊಳಿಸಿ, ಸೀಸನ್ 5ಕ್ಕೆ ನಾಯಕನಾಗಿ ವ್ಯಶಾಕ್ ವಿಜಯಕುಮಾರ್ ಅವರನ್ನು ಘೋಷಿಸಿತು.
ಹುಬ್ಬಳ್ಳಿ ಟೈಗರ್ಸ್ ತಂಡವು ಜೂನ್ 21ರಂದು ಕೋಸ್ಟಲ್ ಕಿಂಗ್ಸ್ ಮಂಗಳೂರು ವಿರುದ್ಧದ ಪಂದ್ಯದಿಂದ ತನ್ನ ಮಹಾರಾಜ ಟ್ರೋಫಿ ಕೆಎಸ್​​ಸಿಎ ಟಿ20 ಸೀಸನ್ 5ರ ಅಭಿಯಾನವನ್ನು ಆರಂಭಿಸಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net