ಕೊನೇ ಅವಕಾಶದಲ್ಲಿ ಒಲಿದ ಪ್ರಶಸ್ತಿಗೆ ಅನಾಹತ್ ಸಂತಸ: ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ಪದಕ ಕನಸಿಗೆ ಬಲ

ಅನಾಹತ್ ಸಿಂಗ್
ಅನಾಹತ್ ಸಿಂಗ್
Published on
ನವದೆಹಲಿ: ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಷಿಪ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿರುವ 18 ವರ್ಷದ ಅನಾಹತ್ ಸಿಂಗ್, ‘ಈ ಪ್ರಶಸ್ತಿಯೂ ನನಗೆ ಪ್ರಪಂಚವಾಗಿದ್ದು, ನಿಜಕ್ಕೂ ಇನ್ನೂ ಕನಸು ಕನಸಿನಲ್ಲಿದ್ದೇನೆ’ ಎಂದು ಗೆಲುವಿನ ಸಂಭ್ರಮ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಸಹಿತ ಹಲವರು ದೆಹಲಿಯ ಅನಾಹತ್ ಸಿಂಗ್ ಸಾಧನೆಗೆ ಹರ್ಷವ್ಯಕ್ತಪಡಿಸಿ, ಶುಭಹಾರೈಸಿದ್ದಾರೆ.
ಶನಿವಾರ ಒಂಟಾರಿಯೊದಲ್ಲಿ ನಡೆದ ಮಹಿಳಾ ಫೈನಲ್‌ನಲ್ಲಿ ಈಜಿಪ್ಟ್‌ನ ರುಖಯ್ಯ ಸಲೆಮ್ ವಿರುದ್ಧ 11-3, 11-7, 11-9 ಸೆಟ್‌ಗಳಿಂದ ಅನಾಹತ್ ಗೆಲುವು ಸಾಧಿಸಿದರು. ಕಳೆದ ನಾಲ್ಕು ವರ್ಷಗಳಿಂದ ಸೆಮಿಫೈನಲ್ ಮತ್ತು ಕ್ವಾರ್ಟರ್‌ ಫೈನಲ್‌ಗಳಲ್ಲಿ ಸೋಲುತ್ತಿದ್ದೆ. ಆದ್ದರಿಂದ ಈ ಟೂರ್ನಿ ಒಂದು ಶಾಪ ಎಂದು ಯಾವಾಗಲೂ ಹೇಳುತ್ತಿದ್ದೆ. ಆದರೆ, ಜೂನಿಯರ್ ವಿಭಾಗದಲ್ಲಿ ಕೊನೆಯ ವರ್ಷವಾಗಿದ್ದರಿಂದ ಈ ಗೆಲುವು ಇನ್ನಷ್ಟು ವಿಶೇಷವಾಗಿದೆ. ಪ್ರಶಸ್ತಿ ಜಯಿಸಲಿದ್ದ ಏಕೈಕ ಅವಕಾಶವೂ ಇದಾಗಿತ್ತು. ಟೂರ್ನಿಯ ಫೈನಲ್ ಆಡುವ ಅನುಭವವನ್ನು ಯಾವಾಗಲೂ ಆನಂದಿಸುತ್ತೇನೆ ಎಂದು ಎಂದು ಅನಾಹತ್ ತಿಳಿಸಿದ್ದಾರೆ.
ಕಳೆದ ವರ್ಷ ಕಂಚು ಜಯಿಸಿದ್ದ ಅನಾಹತ್ ಸಿಂಗ್, ಈ ಬಾರಿ ಸ್ವರ್ಣ ಪದಕ ಜಯಿಸಿ ಜೂನಿಯರ್ ಸ್ಕ್ವಾಷ್‌ನಲ್ಲಿ ಈಜಿಪ್ಟ್‌ನ ಸುದೀರ್ಘ ಪ್ರಾಬಲ್ಯಕ್ಕೂ ತೆರೆ ಎಳೆದರು. 2011ರಿಂದ ಸತತ 13 ಆವೃತ್ತಿಗಳಲ್ಲಿ ಈಜಿಪ್ಟ್ ಆಟಗಾರ್ತಿಯರೇ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು. 2010ರಲ್ಲಿ ಅಮೆರಿಕದ ಅಮಾಂಡಾ ಸೋಭಿ ಬಳಿಕ ವಿಶ್ವ ಜೂನಿಯರ್ ಚಾಂಪಿಯನ್ ಪಟ್ಟ ಗೆದ್ದ ಈಜಿಪ್ಟ್‌ಯೇತರ ಆಟಗಾರ್ತಿ ಎಂಬ ಹೆಗ್ಗಳಿಕೆಯೂ ಅನಾಹತ್ ಅವರದ್ದಾಗಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸ್ಕ್ವಾಷ್ ಸಹ ಪದಕ ಸ್ಪರ್ಧೆಯಾಗಿ ಸೇರ್ಪಡೆಯಾಗಿದ್ದು, ವಿಶ್ವ ಚಾಂಪಿಯನ್‌ಷಿಪ್ ಗೆಲುವು ಭಾರತದ ಪದಕ ಕನಸಿಗೆ ಅನಾಹತ್ ಬಲ ತುಂಬುವ ನಿರೀಕ್ಷೆ ಹರಡಿದೆ.
"

ಚಿನ್ನದ ಪದಕ ಗೆದ್ದ ಮತ್ತು ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್ ಬಗ್ಗೆ ಹೆಮ್ಮೆಯಿದೆ. ಈ ಸಾಧನೆಯು ಯುವಜನತೆಯಲ್ಲಿ ಸ್ಕ್ವಾಷ್ ಅನ್ನು ಮತ್ತಷ್ಟು ಜನಪ್ರಿಯಗೊಳಿಸಲಿದೆ.

— ನರೇಂದ್ರ ಮೋದಿ, ಪ್ರಧಾನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net