ಕ್ಯಾಪ್ ನಂಬರ್ 278 ಸೈನಿಂಗ್ ಆಫ್... ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಜಿಂಕ್ಯ ರಹಾನೆ! Ajinkya Rahane

ಕ್ಯಾಪ್ ನಂಬರ್ 278 ಸೈನಿಂಗ್ ಆಫ್... ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಜಿಂಕ್ಯ ರಹಾನೆ! Ajinkya Rahane
ಕ್ಯಾಪ್ ನಂಬರ್ 278 ಸೈನಿಂಗ್ ಆಫ್... ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಅಜಿಂಕ್ಯ ರಹಾನೆ! Ajinkya Rahane
Published on

ಪ್ರಮುಖ ಮುಖ್ಯಾಂಶಗಳು

  • ಅಜಿಂಕ್ಯ ರಹಾನೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಅಧಿಕೃತ ನಿವೃತ್ತಿ ಘೋಷಣೆ
  • ಭಾರತ ತಂಡದ ಪರ ದಶಕಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ ಅನುಭವಿ ಬ್ಯಾಟ್ಸ್‌ಮನ್ ರಹಾನೆ ವಿದಾಯ
  • ಬಾರ್ಡರ್ ಗವಾಸ್ಕರ್ ಟ್ರೋಫಿ ಸ್ಮರಣೀಯ ಗೆಲುವಿನ ನಾಯಕ ಅಜಿಂಕ್ಯ ರಹಾನೆ ಕ್ರಿಕೆಟ್ ವೃತ್ತಿಜೀವನ ಅಂತ್ಯ
  • ಕ್ಯಾಪ್ ನಂಬರ್ 278 ಸೈನಿಂಗ್ ಆಫ್ ಎಂದ ರಹಾನೆ ಇನ್ಸ್ಟಾಗ್ರಾಮ್ ವೀಡಿಯೊ ಮೂಲಕ ಭಾವನಾತ್ಮಕ ಸಂದೇಶ
ನವದೆಹಲಿ: ತಮ್ಮ ದೃಢವಾದ ಬ್ಯಾಟಿಂಗ್ ತಂತ್ರ, ಮೈದಾನದಲ್ಲಿನ ಶಾಂತ ಸ್ವಭಾವ ಮತ್ತು ಕಠಿಣ ಪರಿಸ್ಥಿತಿಗಳಲ್ಲಿಯೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಅಸಾಧಾರಣ ಸಾಮರ್ಥ್ಯ ಹೊಂದಿದ್ದ ಅನುಭವಿ ಆಟಗಾರ ಅಜಿಂಕ್ಯ ರಹಾನೆ ( Ajinkya Rahane ) ಅವರು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ತಮ್ಮ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ.​ ಭಾರತ ತಂಡದ ಪರ ದಶಕಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8,000ಕ್ಕೂ ಅಧಿಕ ರನ್‌ಗಳನ್ನು ಕಲೆಹಾಕಿದ್ದ ಈ ಸ್ಟಾರ್​ ಆಟಗಾರ ಇನ್ನು ಮುಂದೆ ಮಾಜಿ ಆಟಗಾರನೆಂದು ಕರೆಸಿಕೊಳ್ಳಲಿದ್ದಾರೆ.
ರಹಾನೆ ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಒಟ್ಟು 85 ಟೆಸ್ಟ್, 90 ಏಕದಿನ ಹಾಗೂ 20 ಟಿ20 ಪಂದ್ಯಗಳನ್ನು ಆಡಿದ್ದು, ಭಾರತದ ಪರ ಮೂರರಲ್ಲೂ ತಮ್ಮ ಅಮೋಘ ಆಟದ ಮೂಲಕ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ನಡೆದ 2020-21ರ ಐತಿಹಾಸಿಕ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಪ್ರಮುಖ ಆಟಗಾರರ ಗಾಯದ ಗೈರುಹಾಜರಿಯ ನಡುವೆಯೂ ತಂಡವನ್ನು ಮುಂಚೂಣಿಯಿಂದ ನಾಯಕನಾಗಿ ಸಮರ್ಥವಾಗಿ ಮುನ್ನಡೆಸಿ, ಮೆಲ್ಬೋರ್ನ್‌ನಲ್ಲಿ ಭರ್ಜರಿ ಶತಕ ಸಿಡಿಸುವುದರೊಂದಿಗೆ ಭಾರತಕ್ಕೆ 2-1ರ ಐತಿಹಾಸಿಕ ಜಯ ತಂದುಕೊಟ್ಟಿದ್ದು ಅವರ ನಾಯಕತ್ವದ ವೃತ್ತಿಜೀವನದ ಶ್ರೇಷ್ಠ ಕ್ಷಣವಾಗಿದೆ.
ಅಂದಹಾಗೆ, ಅಜಿಂಕ್ಯ ರಹಾನೆ ಅವರು 2023ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದೇ ಭಾರತದ ಪರ ಅವರ ಅಂತಿಮ ಟೆಸ್ಟ್ ಪಂದ್ಯವಾಗಿದೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಅವರು ಕೊನೆಯ ಬಾರಿಗೆ 2018ರಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಿದ್ದರು. ಅವರ ಟಿ20 ವೃತ್ತಿಜೀವನವು ತುಸು ಚಿಕ್ಕದಾಗಿದ್ದು, 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವೇ ರಾಷ್ಟ್ರೀಯ ತಂಡದ ಪರ ಅವರು ಆಡಿದ ಕೊನೆಯ ಟಿ20 ಪಂದ್ಯವಾಗಿದೆ.
ಜೀವನದಲ್ಲಿ ಎಲ್ಲದಕ್ಕೂ ಒಂದು ಆರಂಭ ಮತ್ತು ಅಂತ್ಯವಿರುತ್ತದೆ ಎಂದು ತಿಳಿಸಿರುವ ಅಜಿಂಕ್ಯ ರಹಾನೆ, ಬ್ಯಾಟಿಂಗ್‌ನಲ್ಲಿ ತಾವು ಯಾವ ರೀತಿ ನಿಖರವಾದ ಟೈಮಿಂಗ್‌ಗೆ ಪ್ರಾಮುಖ್ಯತೆ ನೀಡುತ್ತಿದ್ದೊ ಅದೇ ರೀತಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಎಲ್ಲಾ ಮಾದರಿಯ ಆಟದಿಂದ ನಿವೃತ್ತಿ ಘೋಷಿಸಲು ಇದುವೇ ಸರಿಯಾದ ಸಮಯ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಭಾವನಾತ್ಮಕ ವಿಡಿಯೋ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಕ್ಯಾಪ್ ನಂಬರ್ 278 ಸೈನಿಂಗ್ ಆಫ್ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಂಡಿರುವ ಅವರು, ಕಳೆದ ಹತ್ತು ವರ್ಷಗಳಿಗೂ ಅಧಿಕ ಕಾಲ ತಮ್ಮ ಬೆಂಬಲಕ್ಕೆ ನಿಂತು ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದು, ಈ ಸುದೀರ್ಘ ಪಯಣದಲ್ಲಿ ತಮಗೆ ಸಿಕ್ಕ ಪ್ರೀತಿ ಮತ್ತು ಬೆಂಬಲಕ್ಕೆ ಸದಾ ಕೃತಜ್ಞರಾಗಿರುವುದಾಗಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರೂ ಅಜಿಂಕ್ಯ ರಹಾನೆ ಅವರು ಟಿ20 ಕ್ರಿಕೆಟ್‌ನಲ್ಲಿ ಮುಂದುವರಿದು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ. ಕೋಲ್ಕತ ನೈಟ್ ರೈಡರ್ಸ್ ತಂಡದ ನಾಯಕನಾಗಿ ಕಳೆದ ಕೆಲವು ಸೀಸನ್‌ಗಳಲ್ಲಿ ತಂಡವನ್ನು ಮುನ್ನಡೆಸಿದರಾದರೂ, ತಂಡವನ್ನು ಪ್ಲೇಆಫ್ ಹಂತಕ್ಕೇರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ದೇಶೀಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ಕಾಯಂ ಆಟಗಾರನಾಗಿ ಮುಂದುವರಿದಿರುವ ಅವರ ಕುರಿತು ಮುಂಬೈ ಕ್ರಿಕೆಟ್ ಸಂಘದ ಅಧ್ಯಕ್ಷ ಅಜಿಂಕ್ಯ ನಾಯಕ್ ಗೌರವ ಸಲ್ಲಿಸಿ ಮಾತನಾಡಿದ್ದಾರೆ.
ಅಜಿಂಕ್ಯ ರಹಾನೆ ಅವರ ನಿವೃತ್ತಿಯು ಭಾರತೀಯ ಕ್ರಿಕೆಟ್‌ನ ಒಂದು ಅದ್ಭುತ ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ ಎಂದು ಬಣ್ಣಿಸಿರುವ ಅಜಿಂಕ್ಯ ನಾಯಕ್, ಅವರ ಸಮರ್ಪಣಾ ಮನೋಭಾವ ಮತ್ತು ಸಂಯಮವು ಮುಂಬೈ ಕ್ರಿಕೆಟ್‌ನ ಅತ್ಯುತ್ತಮ ರಾಯಭಾರಿಯನ್ನಾಗಿಸಿದೆ ಎಂದು ಶ್ಲಾಘಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net