ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಅಗರ್ಕರ್ ಔಟ್!: ರೇಸ್​ನಲ್ಲಿ ಆರ್​ಸಿಬಿ ಮಾಜಿ ಆಟಗಾರ, ಐಪಿಎಲ್ 20ನೇ ವರ್ಷಾಚರಣೆಗೆ ಯೋಜನೆ

ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಅಗರ್ಕರ್ ಔಟ್!: ರೇಸ್​ನಲ್ಲಿ ಆರ್​ಸಿಬಿ ಮಾಜಿ ಆಟಗಾರ, ಐಪಿಎಲ್ 20ನೇ ವರ್ಷಾಚರಣೆಗೆ ಯೋಜನೆ
ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಅಗರ್ಕರ್ ಔಟ್!: ರೇಸ್​ನಲ್ಲಿ ಆರ್​ಸಿಬಿ ಮಾಜಿ ಆಟಗಾರ, ಐಪಿಎಲ್ 20ನೇ ವರ್ಷಾಚರಣೆಗೆ ಯೋಜನೆ
Published on
ಮುಂಬೈ: ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ಹೊಸಬರ ನೇಮಕಗೊಳಿಸಲು ಭಾರತೀಯ ಕ್ರಿಕೆಟ್ ಮಂಡಳಿ ಸಜ್ಜಾಗಿದೆ. ಹಾಲಿ ಮುಖ್ಯಸ್ಥ ಅಜಿತ್ ಅಗರ್ಕರ್, ತಾವೂ ಈ ಹುದ್ದೆಯಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ ಎಂದು ಬಿಸಿಸಿಐ ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಅಗರ್ಕರ್ ಹಾಲಿ ಅವಧಿ ಅ.4ಕ್ಕೆ ಕೊನೆಯಾಗಲಿದೆ.
ಅಗರ್ಕರ್ ಅವರ ಅವಧಿ ವಿಸ್ತರಿಸಬೇಕೇ, ಬೇಡವೇ ಎಂದು ನಿರ್ಧರಿಸುವ ಅಂತಿಮ ಅಧಿಕಾರವನ್ನು ಬಿಸಿಸಿಐ ಪದಾಧಿಕಾರಿಗಳಿಗೆ ನೀಡಲಾಗಿದ್ದು, ಶುಕ್ರವಾರ ನಡೆದ ಬಿಸಿಸಿಐನ 95ನೇ ವಾರ್ಷಿಕ ಮಹಾಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಜೂನಿಯರ್ ಆಯ್ಕೆ ಸಮಿತಿಯ ಎಲ್ಲ ಐದು ಹುದ್ದೆಗಳನ್ನು ಭರ್ತಿ ಮಾಡುವ ಪಕ್ರಿಯೆಯನ್ನು ಬಿಸಿಸಿಸಿ ಆರಂಭಿಸಿದ್ದು, ಮುಂಬರುವ 15 ದಿನದೊಳಗೆ ಈ ಪಕ್ರಿಯೆ ಪೂರ್ಣಗೊಳಿಸುವ ಗುರಿಇದೆ ಎಂದು ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಅಗರ್ಕರ್ ಹುದ್ದೆಯಲ್ಲಿ ಮುಂದುವರಿಯದಿದ್ದರೆ ಟೀಮ್​​ಇಂಡಿಯಾ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಪಾರ್ಥಿವ್ ಪಟೇಲ್ ಆಯ್ಕೆ ಸಮಿತಿಯ ಹೊಸ ಸದಸ್ಯ ಮತ್ತು ಅಧ್ಯಕ್ಷರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪಾರ್ಥಿವ್​ ಪಟೇಕ್ ಐಪಿಎಲ್​​ನಲ್ಲಿ ಆರ್​ಸಿಬಿ, ಸಿಎಸ್​ಕೆ ತಂಡ ಸೇರಿ ಒಟ್ಟು 6 ತಂಡಗಳನ್ನು ಪ್ರತಿನಿಧಿಸಿದ್ದು, ಹಾಲಿ ಗುಜರಾತ್ ಟೈಟಾನ್ಸ್ ತಂಡದ ತರಬೇತಿ ಬಳಗದಲ್ಲಿದ್ದಾರೆ.
ಬಿಸಿಸಿಐ ಸಭೆಯಲ್ಲಿ ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ ಮತ್ತು ವೆಂಕಟೇಶ್ ಪ್ರಸಾದ್ ಕ್ರಮವಾಗಿ ಬಂಗಾಳ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರತಿನಿಧಿಗಳಾಗಿ ಭಾಗವಹಿಸಿದರು. 2026-27ರ ಸಾಲಿನ ಬಜೆಟ್ ಮತ್ತು 2025-26ರ ಲೆಕ್ಕಪತ್ರವನ್ನೂ ಸಭೆಯಲ್ಲಿ ಅಂಗೀಕರಿಸಲಾಯಿತು. ನಿರೀಕ್ಷೆಯಂತೆಯೇ ಅರುಣ್ ಧುಮಾಲ್ ಐಪಿಎಲ್ ಆಡಳಿತ ಮಂಡಳಿ ಚೇರ್ಮನ್ ಆಗಿ ಅವಿರೋಧ ಆಯ್ಕೆಯಾದರು. ಇದೇ ವೇಳೆ ಮುಂಬೈ ಕ್ರಿಕೆಟ್ ಸಂಸ್ಥೆ ಮುಂಬರುವ ದಿನಗಳಲ್ಲಿ ತನಗೆ ಪ್ರಮುಖವಾದ ಪಂದ್ಯಗಳ ಆತಿಥ್ಯ ನೀಡಬೇಕೆಂದು ಮನವಿ ಸಲ್ಲಿಸಿತು. ಕಳೆದ 2 ವರ್ಷಗಳಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಒಂದೂ ಟೆಸ್ಟ್ ನಡೆದಿಲ್ಲ.
ಬಿಸಿಸಿಐ ಶತಮಾನೋತ್ಸವ, ಐಪಿಎಲ್
20ನೇ ವರ್ಷಾಚರಣೆಗೆ ಯೋಜನೆ
ಮುಂದಿನ ವರ್ಷದ ಐಪಿಎಲ್ 20ನೇ ಆವೃತ್ತಿಯನ್ನು ಅದ್ದೂರಿಯಾಗಿ ಸಂಭ್ರಮಿಸಲು ಬಿಸಿಸಿಐ ಎಜಿಎಂನಲ್ಲಿ ನಿರ್ಧರಿಸಲಾಗಿದೆ. ಜತೆಗೆ ಬಿಸಿಸಿಐಗೆ 2028ಕ್ಕೆ ನೂರು ವರ್ಷ ಪೂರೈಸುವುದರಿಂದ 2027ರ ಡಿಸೆಂಬರ್‌ನಿಂದಲೇ ಒಂದು ವರ್ಷ ಕಾಲ ವಿಶೇಷ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಆಯೋಜಿಲಾಗುವುದು. ದೇಶೀಯ ಕ್ರಿಕೆಟ್‌ನಲ್ಲಿ ಕಾರ್ಯನಿರ್ವಹಿಸುವ ಅಂಪೈರ್‌ಗಳು ಮತ್ತು ಮ್ಯಾಚ್ ರೆಫ್ರಿಗಳ ವೇತನವನ್ನು ಹೆಚ್ಚಿಸಲು ಕೂಡ ನಿರ್ಧರಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net