ಅವರಿಬ್ಬರೂ ಮಾತ್ರ... ಆರ್​ಸಿಬಿ ಎದುರು ಅತ್ಯಂತ ಕಳಪೆ ಪ್ರದರ್ಶನ ಬೆನ್ನಲ್ಲೇ ಅಕ್ಷರ್​ ಪಟೇಲ್​ ಹೇಳಿಕೆ ವೈರಲ್​ | RCB vs DC

 RCB vs DC ಪಂದ್ಯ, ಅಕ್ಷರ್ ಪಟೇಲ್​
RCB vs DC ಪಂದ್ಯ, ಅಕ್ಷರ್ ಪಟೇಲ್​
Published on

ಪ್ರಮುಖ ಮುಖ್ಯಾಂಶಗಳು

  • ನಿನ್ನೆ (ಏ.27) ನಡೆದ ಐಪಿಎಲ್​ ಪಂದ್ಯದಲ್ಲಿ ಆರ್‌ಸಿಬಿ ಎದುರು ಹೀನಾಯ ಸೋಲುಂಡ ಡೆಲ್ಲಿ ಕ್ಯಾಪಿಟಲ್ಸ್
  • ಇಡೀ ಟೂರ್ನಿಯಲ್ಲೇ ಈ ಮಟ್ಟಿಗಿನ ಕಳಪೆ ಪ್ರದರ್ಶನ ಯಾರೂ ನೀಡಿರಲಿಲ್ಲ
  • ಸೋಲಿನ ಬೆನ್ನಲ್ಲೇ ಮಾತನಾಡಿದ ಡಿಸಿ ಕ್ಯಾಪ್ಟನ್ ಅಕ್ಷರ್​ ಪಟೇಲ್
RCB vs DC: ನಿನ್ನೆ (ಏ.27) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ಆರ್​ಸಿಬಿ ಎದುರು ಡೆಲ್ಲಿ ಕ್ಯಾಪಿಟಲ್ಸ್‌ ಹೀನಾಯ ಸೋಲುಂಡಿತು. ಕೇವಲ ಸೋಲು ಎನ್ನವುದಕ್ಕಿಂತ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದು, ಫ್ರಾಂಚೈಸಿಯ ಅಭಿಮಾನಿಗಳಿಗೆ ಮತ್ತು ಕ್ರಿಕೆಟ್​ ಪ್ರಿಯರಿಗೆ ಭಾರೀ ನಿರಾಶೆ ಮೂಡಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 9 ವಿಕೆಟ್‌ಗಳ ಅವಮಾನಕರ ಸೋಲನ್ನು ಅನುಭವಿಸಿದ ಅಕ್ಷರ್​ ಪಟೇಲ್​ ಪಡೆ, ಉತ್ತಮ ಬ್ಯಾಟಿಂಗ್​ ಮತ್ತು ಬೌಲಿಂಗ್​ ಪ್ರದರ್ಶನ ನೀಡುವಲ್ಲಿ ಸಂಪೂರ್ಣವಾಗಿ ಎಡವಿತು. ಈ ಸೀಸನ್​ನಲ್ಲಿ ಇಲ್ಲಿಯವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ದೆಹಲಿಯ ಐದನೇ ಸೋಲು ಇದಾಗಿದೆ. ಈ ತಲೆತಗ್ಗಿಸುವ ಪ್ರದರ್ಶನದ ಬಳಿಕ ಮಾತನಾಡಿದ ಡಿಸಿ ನಾಯಕ ಅಕ್ಷರ್ ಪಟೇಲ್​, ಈಗಲೂ ನನಗೆ ಏನಾಯಿತು ಅಂತ ಅರ್ಥವೇ ಆಗುತ್ತಿಲ್ಲ ಎಂದು ಹೇಳಿದರು. 
ಈ ಪಂದ್ಯದಲ್ಲಿ ಅಷ್ಟಕ್ಕೂ ಏನಾಯಿತು ಎಂದು ಇನ್ನೂ ನನಗೆ ಅರ್ಥವಾಗುತ್ತಿಲ್ಲ. ಕ್ರಿಕೆಟ್‌ನಲ್ಲಿ, ಪ್ರತಿ ಬಾರಿಯೂ ಎಚ್ಚರವಾಗಿರಬೇಕು. ಸಾಧ್ಯವಾದಷ್ಟು ಇಂತಹ ಸೋಲಿನಿಂದ ಮರೆತು, ಮುಂದಿನ ಪಂದ್ಯಗಳ ಬಗ್ಗೆ ಎಚ್ಚರದಿಂದ ಆಡಬೇಕು. ಮುಖ್ಯವಾಗಿ, ನಾವು ಪ್ರತಿದಿನ ಜಾಗರೂಕರಾಗಿರಬೇಕು. ಐಪಿಎಲ್ ಒಂದು ಕಠಿಣ ಲೀಗ್​. ಯಾವುದೇ ಪಂದ್ಯದಲ್ಲಿ ಗೆಲುವು ಸುಲಭವಾಗಿ ದಕ್ಕುವುದಿಲ್ಲ. ನೀವು ಪ್ರತಿ ಪಂದ್ಯದಲ್ಲೂ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರೆ ಮಾತ್ರ ಇದು ಸಾಧ್ಯ ಎಂದರು. 
ಇಂದು ನಮಗೆ ಕೆಟ್ಟ ದಿನವಾಗಿತ್ತು. ಇಲ್ಲಿ ನಾನು ತಂಡದ ಯಾರನ್ನೂ ದೂಷಿಸುವುದಿಲ್ಲ. ಅದು ಸರಿಯೂ ಅಲ್ಲ. ಕಳೆದ ಆರು ಅಥವಾ ಏಳು ಪಂದ್ಯಗಳಲ್ಲಿ ನಾವು ಮಾಡಿದ್ದನ್ನು ಪಾಸಿಟಿವ್ ಆಗಿ ಯೋಚಿಸುವುದನ್ನು ಮುಂದುವರಿಸಬೇಕು ಮತ್ತು ಮಾಡಬೇಕು. ಈ ಪಂದ್ಯದ ಆರಂಭದಲ್ಲಿ ಚೆಂಡು ಹೇಗೆ ಸ್ವಿಂಗ್ ಆಯ್ತು ಎಂಬುದನ್ನು ನೋಡಿ ತುಂಬಾ ಆಶ್ಚರ್ಯವಾಯಿತು. ಅವರಿಬ್ಬರೂ (ಭುವನೇಶ್ವರ್ ಕುಮಾರ್​ ಮತ್ತು ಹೇಜಲ್‌ವುಡ್) ವಿಶ್ವ ದರ್ಜೆಯ ಬೌಲರ್‌ಗಳು ಮತ್ತು ಅವರು ಚೆಂಡನ್ನು ಜಗತ್ತಿನ ಎಲ್ಲಿ ಬೇಕಾದರೂ ಸ್ವಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು. 

ಪಂದ್ಯದ ವಿವರ

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 16.3 ಓವರ್‌ಗಳಲ್ಲಿ 75 ರನ್‌ಗೆ ಆಲೌಟ್ ಆಯಿತು. ಅಭಿಷೇಕ್ ಪೊರೆಲ್ (30 ರನ್​, 33 ಎಸೆತಗಳಲ್ಲಿ 3 ಬೌಂಡರಿ), ಡೇವಿಡ್ ಮಿಲ್ಲರ್ (19 ರನ್​, 18 ಎಸೆತಗಳಲ್ಲಿ 3 ಬೌಂಡರಿ), ಮತ್ತು ಕೈಲ್ ಜೇಮಿಸನ್ (12 ರನ್​, 1 ಬೌಂಡರಿ, 13 ಎಸೆತಗಳಲ್ಲಿ 1 ಸಿಕ್ಸ್) ಮಾತ್ರ ಎರಡಂಕಿ ಗಳಿಸಿದರು. ಆರ್​ಸಿಬಿ ಪರ ಕಮಾಲ್​ ಮಾಡಿದ ಬೌಲರ್‌ಗಳಲ್ಲಿ ಜೋಶ್ ಹೇಜಲ್‌ವುಡ್ 4, ಭುವನೇಶ್ವರ್ ಕುಮಾರ್ 3, ರಸಿಕ್ ಸಲಾಂದಾರ್, ಸುಯಾಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಈ ಸುಲಭ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ, ಕೇವಲ 6.3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 76 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ದೇವದತ್ ಪಡಿಕ್ಕಲ್ (ಅಜೇಯ 34 ರನ್​, 13 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್), ವಿರಾಟ್ ಕೊಹ್ಲಿ (ಅಜೇಯ 23  ರನ್​, 15 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್), ಮತ್ತು ಜಾಕೋಬ್ ಬೆಥೆಲ್ (20 ರನ್​, 11 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್) ಅವರ ಉತ್ತಮ ಬ್ಯಾಟಿಂಗ್​ ಪ್ರದರ್ಶನದಿಂದ ರಜತ್ ಪಡೆ ಪಂದ್ಯ ಗೆದ್ದು ಬೀಗಿತು,(ಏಜೆನ್ಸೀಸ್). ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net