ನನ್ನ ಕ್ಯಾಪ್ಟನ್​​... ಪಂಜಾಬ್ ಕಿಂಗ್ಸ್ ಸೇರಿದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಹೇಳಿದ ಮೊದಲ ಮಾತಿದು | Hardik Pandya

Hardik Pandya
ನನ್ನ ಕ್ಯಾಪ್ಟನ್​ ಶ್ರೇಯಸ್​... ಪಂಜಾಬ್ ಕಿಂಗ್ಸ್ ಸೇರಿದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಹೇಳಿದ ಮೊದಲ ಮಾತಿದು | Hardik Pandya
Published on: 

ನವದೆಹಲಿ: ಐಪಿಎಲ್ 2027ರ ಹರಾಜು ಪ್ರಕ್ರಿಯೆಗೂ ಮುನ್ನವೇ ಮುಂಬೈ ಇಂಡಿಯನ್ಸ್ ತಮ್ಮ ತಂಡದ ಸ್ಟಾರ್​ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯರನ್ನು ಟ್ರೇಡ್​ ಮೂಲಕ ಪಂಜಾಬ್ ಕಿಂಗ್ಸ್​ಗೆ ಕಳುಹಿಸಿದ್ದು, ಅಲ್ಲಿಂದ ಅವರ ಬದಲಿಗೆ ವೇಗಿ ಅರ್ಷ್​ದೀಪ್​ ಸಿಂಗ್​​ರನ್ನು ಕರೆದುಕೊಂಡಿದೆ. ಸಾಕಷ್ಟು ವದಂತಿಗಳನ್ನು ಕೊನೆಗೂ ನಿಜವಾಗಿಸಿದ ಎಂಐ ನಡೆಗೆ ಇದೀಗ ಪಾಂಡ್ಯ ಕೊಟ್ಟಿರುವ ಫಸ್ಟ್​ ರಿಯಾಕ್ಷನ್​ ಕ್ರಿಕೆಟ್​ ಪ್ರೇಮಿಗಳ ಗಮನ ಸೆಳೆದಿದೆ.

ಮುಂಬೈ ಇಂಡಿಯನ್ಸ್ ಕ್ಯಾಪ್ಟನ್​ ಆಗಿದ್ದ ಹಾರ್ದಿಕ್​ರನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಿಸಿರುವ ಫ್ರಾಂಚೈಸಿ, ಪಂಜಾಬ್ ತಂಡದ ಸ್ಟಾರ್​ ಬೌಲರ್ ಅರ್ಷದೀಪ್ ಸಿಂಗ್​ರನ್ನು ಅವರ ಸ್ಥಾನಕ್ಕೆ ಟ್ರೇಡಿಂಗ್ ಪ್ರಕ್ರಿಯೆ ಮುಖಾಂತರ ಕರೆದುಕೊಂಡಿದೆ. ಇದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಪಂಜಾಬ್ ಕಿಂಗ್ಸ್ ಸೇರಿರುವ ಹಾರ್ದಿಕ್​ ತಮ್ಮ ಮೊದಲ ಪ್ರತಿಕ್ರಿಯೆನ್ನು ಸಾಮಾಜಿಕ ಜಾಲತಾಣದ ಖಾತೆ ಮೂಲಕ ಹಂಚಿಕೊಂಡಿದ್ದಾರೆ.

ನನ್ನ ನಾಯಕ ಶ್ರೇಯಸ್...

"ಸತ್ ಶ್ರೀ ಅಕಾಲ್. ನನ್ನ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್​, ನನ್ನ ಕೋಚ್ ರಿಕಿ ಪಾಂಟಿಂಗ್​, ನನ್ನ ತಂಡ, ಇಡೀ ಪಂಜಾಬ್ ಕಿಂಗ್ಸ್​. ಇನ್ಮುಂದೆ ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದು ಕ್ರಿಕೆಟ್​ ಪ್ರಿಯರ ಗಮನ ಸೆಳೆದಿದ್ದು, ತಮ್ಮನ್ನು ವದಂತಿಗಳಂತೆ ತಂಡದಿಂದ ಹೊರಗಟ್ಟಿದ ಮುಂಬೈ ಇಂಡಿಯನ್ಸ್​ಗೆ ಖಡಕ್ ತಿರುಗೇಟು ಇರಬಹುದು ಎಂದು ಕೆಲವರು ಊಹಿಸಿದ್ದಾರೆ.

ಹಾರ್ದಿಕ್‌ಗೆ ಹೆಚ್ಚಿದ ಸಂಭಾವನೆ

ಈ ಆಟಗಾರರ ಟ್ರೇಡಿಂಗ್​ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಸಂಭಾವನೆಯೂ ಹೆಚ್ಚಾಗಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾಗ ಅವರಿಗೆ 16.35 ಕೋಟಿ ರೂ. ಸಂಭಾವನೆ ಫಿಕ್ಸ್ ಆಗಿತ್ತು. ಆದರೀಗ, ಪಂಜಾಬ್ ಕಿಂಗ್ಸ್ ತಂಡ ಸೇರ್ಪಡೆಗೊಂಡ ಹಿನ್ನೆಲೆ 18 ಕೋಟಿ ರೂ.ಗೆ ಡೀಲ್​ ಆಗಿದೆ. ಅಲ್ಲಿಗೆ, ಸ್ಟಾರ್​ ಆಲ್​ರೌಂಡರ್​ ಸಂಭಾವನೆಯಲ್ಲಿ 1.65 ಕೋಟಿ ಹೆಚ್ಚಳವಾಗಿದೆ.

ಮುಂಬೈ ಜತೆಗಿನ ಒಡನಾಟ

ಹಾರ್ದಿಕ್ ಪಾಂಡ್ಯ 2015ರಲ್ಲಿ ಮುಂಬೈ ಇಂಡಿಯನ್ಸ್ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಸ್ಟಾರ್​ ಆಲ್​ರೌಂಡರ್​. ಎಂಐ ಜತೆಗೆ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಅನುಭವ ಅವರಿಗಿದೆ. 2022ರಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಸೇರ್ಪಡೆಯಾಗಿ ನಾಯಕತ್ವ ವಹಿಸಿದ್ದ ಅವರು, ಮೊದಲನೇ ಸೀಸನ್‌ನಲ್ಲೇ ತಂಡಕ್ಕೆ ಪ್ರಶಸ್ತಿ ತಂದುಕೊಟರು. 2024ರಲ್ಲಿ ಮತ್ತೆ ಮುಂಬೈಗೆ ಮರಳಿದ ಪಾಂಡ್ಯ, ನೇರವಾಗಿ ತಂಡದ ನಾಯಕನಾಗಿ ಅಧಿಕಾರ ವಹಿಸಿಕೊಂಡರು. ಈ ಸಮಯದಲ್ಲಿ, ರೋಹಿತ್​ರನ್ನು ಕೆಳಗಿಳಿಸಿ ಕ್ಯಾಪ್ಟನ್ಸಿ ವಹಿಸಿದ್ದು ಅನೇಕರ ಅಸಮಾಧಾನಕ್ಕೆ ಕಾರಣವಾಯಿತು.

Also Read
ಯಾರೀ ಎವೆಲಿನ್ ಡಿಕ್? ಪತಿ ಕೇಸ್​ನಲ್ಲಿ ಖುಲಾಸೆ, ಶಿಶುವಿನ ಕೊಲೆಗೆ ಜೀವಾವಧಿ ಶಿಕ್ಷೆ ಪಡೆದು ಕಣ್ಮರೆಯಾದ ನಿಗೂಢ ಮಹಿಳೆ
Hardik Pandya

ಮತ್ತೊಂದೆಡೆ, ಅರ್ಷದೀಪ್ ಸಿಂಗ್ 2019ರಲ್ಲಿ ಪಂಜಾಬ್ ಕಿಂಗ್ಸ್ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಸ್ಟಾರ್​ ವೇಗಿ. ಎಂಟು ಸೀಸನ್‌ಗಳ ಕಾಲ ಪಂಜಾಬ್ ತಂಡದ ಪರ ಆಡಿರುವ ಅವರು, 96 ಪಂದ್ಯಗಳಲ್ಲಿ 111 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಹೊಸ ತಂಡದ ಪರ ತಮ್ಮ ಆಟ ಮುಂದುವರಿಸಲಿದ್ದು, ಮುಂಬೈ ಪರ ಹೇಗೆ ಕಮಾಲ್ ಮಾಡಲಿದ್ದಾರೆ ಎಂಬುದನ್ನು 20ನೇ ಆವೃತ್ತಿಯಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).