ಅಭಿಷೇಕ್ ಶರ್ಮಾಗೆ 25% ದಂಡದ ಬಿಸಿ.. ಅಷ್ಟಕ್ಕೂ ಎಸ್‌ಆರ್‌ಹೆಚ್ ಓಪನರ್ ಮೈದಾನದಲ್ಲಿ ಮಾಡಿದ ಆ ತಪ್ಪಾದರೂ ಏನು..? Abhishek Sharma

Abhishek Sharma (ಚಿತ್ರ X)
Abhishek Sharma (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಗುರುವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ರೋಚಕ ಪಂದ್ಯ
  • ಪಂದ್ಯದ ವೇಳೆ ಅಶಿಸ್ತಿನಿಂದ ವರ್ತಿಸಿದ ಎಸ್​ಆರ್​ಎಚ್​ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ
  • ಮೈದಾನದಲ್ಲಿ ಅಭಿಷೇಕ್​ ಅಶ್ಲೀಲ, ಅಸಭ್ಯ ಅಥವಾ ಆಕ್ಷೇಪಾರ್ಹ ಪದಗಳ ಬಳಕೆ ಮಾಡಿದ್ದಕ್ಕಾಗಿ ದಂಡ
Abhishek Sharma : ಗುರುವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ರೋಚಕ ಪಂದ್ಯದ ವೇಳೆ ಅಶಿಸ್ತಿನಿಂದ ವರ್ತಿಸಿದ ಎಸ್​ಆರ್​ಎಚ್​ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಐಪಿಎಲ್ ಶಿಸ್ತು ಸಮಿತಿಯು ಡಿಮೆರಿಟ್​ ಪಾಯಿಂಟ್​ ಮತ್ತು ಪಂದ್ಯದ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ.
ಐಪಿಎಲ್ ನಿಯಮಾವಳಿಯ ಪ್ರಕಾರ, ಆರ್ಟಿಕಲ್ 2.3 ಆಟಗಾರರ ಭಾಷೆ ಮತ್ತು ಮೈದಾನದ ಶಿಸ್ತಿಗೆ ಸಂಬಂಧಿಸಿದ್ದಾಗಿದೆ. ಆದಾಗ್ಯೂ, ಮೈದಾನದಲ್ಲಿ ಅಭಿಷೇಕ್​ ಅಶ್ಲೀಲ, ಅಸಭ್ಯ ಅಥವಾ ಆಕ್ಷೇಪಾರ್ಹ ಪದಗಳ ಬಳಕೆ ಮಾಡಿದ್ದಕ್ಕಾಗಿ ದಂಡವನ್ನು ಭರಿಸಬೇಕಾಗಿದೆ.

ಘಟನೆಯ ಹಿನ್ನಲೆ

ಮೊದಲ ಇನ್ನಿಂಗ್ಸ್‌ನ ಒಂಬತ್ತನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ವಿಕೆಟ್ ವಿವಾದಕ್ಕೆ ಕಾರಣವಾಗಿದ್ದು, ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಡೈವಿಂಗ್ ಮಾಡುವ ಮೂಲಕ ಶರ್ಮಾ ಕ್ಯಾಚ್ ಪಡೆದರು. ಆದರೆ, ಆ ಸಮಯದಲ್ಲಿ ಚೆಂಡು ನೆಲಕ್ಕೆ ತಗುಲಿರುವಂತೆ ದೃಶ್ಯಗಳಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಬ್ಯಾಟರ್ ಅಭಿಷೇಕ್ ಶರ್ಮಾ ಅಂಪೈರ್ ತೀರ್ಪಿನ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. 
ಮೈದಾನದ ಅಂಪೈರ್‌ಗಳು ಇದನ್ನು ಥರ್ಡ್​ ಅಂಪೈರ್ ಪರಿಶೀಲನೆಗೆ ಕಳುಹಿಸಿದರು. ಅವರು ಕೂಡ ಕ್ಯಾಚ್ ಕಾನೂನುಬದ್ಧವಾಗಿದೆ ಎಂದು ಪರಿಗಣಿಸಿ ಔಟ್ ಎಂದು ತೀರ್ಪು ನೀಡಿದರು. ಆದರೆ, ಈ ನಿರ್ಧಾರದಿಂದ ತೀವ್ರ ನಿರಾಶೆಗೊಂಡ ಅಭಿಷೇಕ್ ಶರ್ಮಾ, ಮೈದಾನದಿಂದ ಹೊರನಡೆಯುವಾಗ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಪ್ರದರ್ಶಿಸಿದರು. ಇದು ಐಪಿಎಲ್‌ನ ಶಿಸ್ತು ನಿಯಮಗಳ ಉಲ್ಲಂಘನೆಯೆಂದು ಪರಿಗಣಿಸಿ ಅವರಿಗೆ ದಂಡ ವಿಧಿಸಲಾಗಿದೆ.
ಇಲ್ಲಿ ನಿಖರವಾಗಿ ಯಾವ ಪದ ಬಳಸಲಾಗಿದೆ ಎಂದು ತಿಳಿಸಿಲ್ಲವಾದರೂ, ಆಟದ ಸಮಯದಲ್ಲಿ ಅಭಿಷೇಕ್​ ಅಸಭ್ಯ ಪದ ಬಳಸಿದ್ದು, ಸ್ಟಂಪ್ ಮೈಕ್ರೊಫೋನ್‌ನಲ್ಲಿ ಕೇಳಿಸಿದೆ ಎನ್ನಲಾಗಿದೆ. ಯುವ ಆಟಗಾರ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಐಪಿಎಲ್​ನಲ್ಲಿ ಲೆವೆಲ್ 1 ಅಪರಾಧಗಳು ಅತ್ಯಂತ ಕಡಿಮೆ ಗಂಭೀರವಾಗಿದ್ದರೂ ಪುನರಾವರ್ತಿತ ಉಲ್ಲಂಘನೆಗಳು ಕಂಡುಬಂದಲ್ಲಿ ಪಂದ್ಯದಿಂದ ಅಮಾನತು ಮತ್ತು ಕಠಿಣ ದಂಡಗಳಿಗೆ ಕಾರಣವಾಗಬಹುದು.

SRH ಭರ್ಜರಿ ಜಯ: ಕೆಕೆಆರ್ ಮಣಿಸಿದ ಹೈದರಾಬಾದ್ ಕಿಂಗ್ಸ್!

ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ಪಂದ್ಯವು ಅತ್ಯಂತ ರೋಚಕವಾಗಿ ಸಾಗಿತ್ತು. ಎಸ್‌ಆರ್‌ಹೆಚ್ ತಂಡಕ್ಕೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಜೋಡಿಯು ಮಿಂಚಿನ ಆರಂಭ ನೀಡಿತು. ಕೇವಲ 34 ಎಸೆತಗಳಲ್ಲಿ 82 ರನ್‌ಗಳ ಜೊತೆಯಾಟ ನಡೆಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು. ನಂತರ ಕ್ಲಾಸೆನ್ (52) ಮತ್ತು ನಿತೀಶ್ ಕುಮಾರ್ ರೆಡ್ಡಿ (39) ತಡವಾಗಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ 8 ವಿಕೆಟ್‌ಗೆ 226 ರನ್ ಗಳಿಸಲು ಸಹಾಯ ಮಾಡಿದರು.
ಇದಕ್ಕೆ ಉತ್ತರವಾಗಿ, ಕೆಕೆಆರ್ 16 ಓವರ್‌ಗಳಲ್ಲಿ 161 ರನ್‌ಗಳಿಗೆ ಆಲೌಟ್ ಆಯಿತು. ಅಂಗ್‌ಕ್ರಿಶ್ ರಘುವಂಶಿ 29 ಎಸೆತಗಳಲ್ಲಿ 52 ರನ್ ಗಳಿಸಿ ಗರಿಷ್ಟ ಸ್ಕೋರ್​ ಪಡೆದರೆ, ಕೆಕೆಆರ್​ ಪರ ಬ್ಲೆಸ್ಸಿಂಗ್​ ಮುಜುರಾಯಿ (4/41), ವೈಭವ್ ಅರೋರಾ (2/47), ಕಾರ್ತಿಕ್ ತ್ಯಾಗಿ (1/48), ಮತ್ತು ಅನುಕುಲ್ ರಾಯ್ (1/16) ವಿಕೆಟ್ ಪಡೆದರು. 
ಎಸ್‌ಆರ್‌ಎಚ್ ಬೌಲಿಂಗ್ ದಾಳಿಯನ್ನು ಜಯದೇವ್ ಉನದ್ಕತ್ (3/21) ಮುನ್ನಡೆಸಿದರೆ , ನಿತೀಶ್ ಕುಮಾರ್ ರೆಡ್ಡಿ (2/17) ಮತ್ತು ಎಶಾನ್ ಮಾಲಿಂಗ (2/14) ತಲಾ ಎರಡು ವಿಕೆಟ್ ಪಡೆದು ಭರ್ಜರಿ ಗೆಲುವು ಸಾಧಿಸಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net