

ಪ್ರಮುಖ ಮುಖ್ಯಾಂಶಗಳು
ಆಮ್‌ಸ್ಟೆಲ್ವೀನ್ (ನೆದರ್ಲ್ಯಾಂಡ್ಸ್): ಎಫ್ಐಎಚ್ ಹಾಕಿ ವಿಶ್ವಕಪ್‌ನಲ್ಲಿ ಶುಭಾರಂಭ ಕಂಡಿರುವ ಭಾರತದ ಪುರುಷರ ತಂಡ ಗುಂಪು ಹಂತದಲ್ಲಿ ನಿರ್ಣಾಯಕ ಕಠಿಣ ಪರೀಕ್ಷೆಗೆ ಸಜ್ಜಾಗಿದ್ದು, ಡಿ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸೋಮವಾರ ಎದುರಿಸಲಿದೆ. ಗೆಲುವಿನೊಂದಿಗೆ ಅಭಿಯಾನ ಆರಂಭಿಸಿರುವ ಉಭಯ ತಂಡಗಳು ಗುಂಪಿನ ಅಗ್ರಸ್ಥಾನದ ಜತೆಗೆ ನಾಕೌಟ್ ರೇಸ್‌ನಲ್ಲಿ ಅನುಕೂಲ ಪಡೆಯಲು ಈ ಪಂದ್ಯ ಮಹತ್ವದಾಗಿರಲಿದೆ.
51 ವರ್ಷಗಳ ವಿಶ್ವಕಪ್ ಪ್ರಶಸ್ತಿ ಬರ ನೀಗಿಸುವ ಸವಾಲು ಹೊಂದಿರುವ ಭಾರತ ತಂಡ ಕಳೆದ 32 ವರ್ಷಗಳಿಂದ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಎದುರು ಗೆದ್ದಿಲ್ಲ. ಮೊದಲು ಈ ಸೋಲಿನ ಸರಪಳಿಯನ್ನು ಮುರಿಯಬೇಕಿದೆ. ಹರ್ಮಾನ್‌ಪ್ರೀತ್ ಪಡೆ ವೇಲ್ಸ್ ಎದುರು 3-1 ಹಾಗೂ ಇಂಗ್ಲೆಂಡ್ ತನ್ನ ಆರಂಭಿಕ ಪಂದ್ಯದಲ್ಲಿ ಪಾಕ್ ವಿರುದ್ಧ 4-1ರಿಂದ ಗೆಲುವು ದಾಖಲಿಸಿವೆ. ಟೂರ್ನಿಯ ಹೊಸ ಸ್ವರೂಪದಲ್ಲಿ ಗುಂಪು ಹಂತದ ಫಲಿತಾಂಶಗಳು ಪರಿಗಣಿಸುವುದರಿಂದ ಪಂದ್ಯದ ಫಲಿತಾಂಶವು ಎರಡೂ ತಂಡಗಳ ನಾಕೌಟ್ ಹಾದಿಯ ಮೇಲೆ ಪರಿಣಾಮ ಬೀರಲಿದೆ.
ವಿಶ್ವ ನಂ.3 ಇಂಗ್ಲೆಂಡ್ ಉತ್ತಮ ಲಯದಲ್ಲಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ಪ್ರೊ ಲೀಗ್‌ನಲ್ಲಿ ಆಡಿದ 16ರಲ್ಲಿ 2 ಪಂದ್ಯ ಮಾತ್ರ ಸೋತಿದೆ. ಜತೆಗೆ 9 ತಂಡಗಳ ಲೀಗ್‌ನಲ್ಲಿ ರನ್ನರ್‌ಅಪ್ ಎನಿಸಿದರೆ, ಭಾರತ ತಂಡ 8ನೇ ಸ್ಥಾನ ಪಡೆದಿತ್ತು. ವಿಶ್ವಕಪ್‌ಗೆ ಮುನ್ನ ನಡೆದ ಪ್ರೊ ಲೀಗ್‌ನ ಲಂಡನ್ ಚರಣದಲ್ಲಿ ಎರಡೂ ತಂಡಗಳು ಪೆನಾಲ್ಟಿ ಶೂಟೌಟ್‌ನಲ್ಲಿ ತಲಾ ಒಂದರಲ್ಲಿ ಜಯಿಸಿದವು. ಾರ್ವರ್ಡ್ ಜತೆಗೆ ಫಿನಿಶಿಂಗ್‌ನಲ್ಲಿ ಭಾರತ ಸುಧಾರಿಸಬೇಕಿದ್ದು, ಇಂಗ್ಲೆಂಡ್ ಎದುರು ನೈಜ ಸವಾಲು ಎದುರಾಗಲಿದೆ. ಮಹತ್ವದ ಪಂದ್ಯದಲ್ಲಿ ಒತ್ತಡ ನಿಭಾಯಿಸಲು ಟೂರ್ನಿಗೆ ಮುನ್ನ ಸ್ವಿಜರ್ಲೆಂಡ್ಸ್‌ನಲ್ಲಿ ನಡೆದ 3 ದಿನಗಳ ಶಿಬಿರವೂ ಭಾರತಕ್ಕೆ ನೆರವಾಗುವ ಸಾಧ್ಯತೆಗಳಿವೆ. 2006ರಿಂದಲೂ ಸತತ ಐದು ಆವೃತ್ತಿಗಳಲ್ಲಿ ಅಗ್ರ ಐದರಲ್ಲಿ ಸ್ಥಾನ ಪಡೆದಿರುವ ಬಲ ಇಂಗ್ಲೆಂಡ್ ತಂಡಕ್ಕಿದೆ.