2023ರಲ್ಲಿ ಧೋನಿಯನ್ನು ನಿಂದಿಸಿದ CSK ಆಟಗಾರ: ಈ ವೇಳೆ ಮಾಹಿ ನಡೆದಕೊಂಡ ರೀತಿಗೆ ಆಕಾಶ್ ಚೋಪ್ರಾ ಸಲಾಂ! MS Dhoni

ಧೋನಿ ಅವರ ಈ ಅಪರೂಪದ ನಾಯಕತ್ವದ ಗುಣವು ಕೇವಲ ಕ್ರೀಡಾಂಗಣದಲ್ಲಷ್ಟೇ ಅಲ್ಲದೆ, ಡ್ರೆಸ್ಸಿಂಗ್ ರೂಮ್ ಒಳಗೆ ಯಾವ ರೀತಿಯ ಪ್ರಭಾವ ಬೀರಿತ್ತು ಎಂಬುದನ್ನು ಚೋಪ್ರಾ ವಿವರಿಸಿದ್ದಾರೆ.
MS Dhoni
2023ರಲ್ಲಿ ಧೋನಿಯನ್ನು ನಿಂದಿಸಿದ CSK ಆಟಗಾರ: ಈ ವೇಳೆ ಮಾಹಿ ನಡೆದಕೊಂಡ ರೀತಿಗೆ ಆಕಾಶ್ ಚೋಪ್ರಾ ಸಲಾಂ!
Published on: 

ನವದೆಹಲಿ: ಆಟಗಾರನಾಗಿ ಐಪಿಎಲ್​ಗೆ ವಿದಾಯ ಹೇಳಿರುವ ವಿಶ್ವ ಕಂಡ ಯಶಸ್ವಿ ನಾಯಕ ಎಂ.ಎಸ್​. ಧೋನಿ ( MS Dhoni ) ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮೆಂಟರ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಧೋನಿಯ ಐಪಿಎಲ್​ ನಿವೃತ್ತಿಯ ಬಗ್ಗೆ ಅನೇಕ ಹಿರಿಯ ಹಾಗೂ ಕಿರಿಯ ಕ್ರಿಕೆಟಿಗರು ಭಾವುಕ ಮಾತುಗಳನ್ನಾಡುತ್ತಿದ್ದಾರೆ. ಇದರ ನಡುವೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ರೋಚಕ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.

ಐಪಿಎಲ್ 2023ರ ಚಾಂಪಿಯನ್ಸ್ ಪಟ್ಟ ಅಲಂಕರಿಸುವ ಮುನ್ನ ತಂಡದೊಳಗೆ ನಡೆದ ಆಟಗಾರನೊಬ್ಬನ ಅಶಿಸ್ತಿನ ಘಟನೆಯನ್ನು ಸ್ಮರಿಸಿರುವ ಚೋಪ್ರಾ, ಧೋನಿ ಅವರು ತಮ್ಮ ವೈಯಕ್ತಿಕ ಅಹಂಗಿಂತ ತಂಡದ ಹಿತಾಸಕ್ತಿಗೆ ಹೇಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ. ಧೋನಿ ಅವರ ಈ ಅಪರೂಪದ ನಾಯಕತ್ವದ ಗುಣವು ಕೇವಲ ಕ್ರೀಡಾಂಗಣದಲ್ಲಷ್ಟೇ ಅಲ್ಲದೆ, ಡ್ರೆಸ್ಸಿಂಗ್ ರೂಮ್ ಒಳಗೆ ಯಾವ ರೀತಿಯ ಪ್ರಭಾವ ಬೀರಿತ್ತು ಎಂಬುದನ್ನು ಚೋಪ್ರಾ ವಿವರಿಸಿದ್ದಾರೆ.

Also Read
ಐಪಿಎಲ್ ವೃತ್ತಿಜೀವನದಲ್ಲಿ ಕೋಟಿ ಕೋಟಿ ಸಂಪಾದಿಸಿದ ಧೋನಿ: 2008ರಿಂದ ಇಲ್ಲಿಯವರೆಗೆ ಮಹಿಗೆ ಸಿಕ್ಕ ವೇತನವೆಷ್ಟು? MS Dhoni
MS Dhoni

2023ರ ಐಪಿಎಲ್ ಟೂರ್ನಿಯ ಸಮಯದಲ್ಲಿ ಸಿಎಸ್‌ಕೆ ತಂಡದ ಆಟಗಾರನೊಬ್ಬ ಧೋನಿ ಜತೆಗೆ ಅತ್ಯಂತ ದುರ್ವರ್ತನೆ ತೋರಿ, ಏಕವಚನದಲ್ಲಿ ನಿಂದಿಸಿ ಆಕ್ರೋಶ ಹೊರಹಾಕಿದ್ದನು. ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ, ಧೋನಿ ಅವರ ಸುತ್ತಮುತ್ತ ಇದ್ದ ಕೆಲವರು ಆ ಆಟಗಾರನನ್ನು ತಕ್ಷಣವೇ ತಂಡದಿಂದ ಹೊರಹಾಕಿ ಮನೆಗೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದರು. ಅಷ್ಟೇ ಅಲ್ಲದೆ, ಆ ಆಟಗಾರನಿಲ್ಲದೆಯೂ ತಂಡವು ಗೆಲ್ಲಬಲ್ಲದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. ಆದರೆ, ಧೋನಿ ಮಾತ್ರ ಈ ವಿಚಾರದಲ್ಲಿ ವಿಭಿನ್ನವಾಗಿ ಆಲೋಚಿಸಿ ಅತಿ ದೊಡ್ಡ ನಿರ್ಧಾರ ಕೈಗೊಂಡರು.

ಆಟಗಾರನ ದುರ್ವರ್ತನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಧೋನಿ, ಅವನು ಮೂರ್ಖನಂತೆ ವರ್ತಿಸುತ್ತಿರಬಹುದು, ಆದರೆ ನಾನು ತಂಡದ ನಾಯಕ. ಒಂದು ವೇಳೆ ನನ್ನ ಅಹಂಕಾರಕ್ಕೆ ಮಣಿದು, ಅವನನ್ನು ಗಂಟು ಮೂಟೆ ಕಟ್ಟಿ ಮನೆಗೆ ಕಳುಹಿಸುವುದು ಸುಲಭ. ಆದರೆ ಈ ಟೂರ್ನಿಯಲ್ಲಿ ಆಟಗಾರ ನನಗೆ ಮುಖ್ಯ, ಅವನು ಚೆನ್ನೈ ತಂಡವನ್ನು ಗೆಲ್ಲಿಸಲು ಸಹಾಯ ಮಾಡುತ್ತಾನೆ. ಆದ್ದರಿಂದ ಪರವಾಗಿಲ್ಲ, ನಾನು ನನ್ನ ಹೆಮ್ಮೆ ಮತ್ತು ಅಹಂಕಾರವನ್ನು ನುಂಗಿಕೊಂಡು, ಅವನಿಂದ ಆಡಿಸುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾಗಿ ಆಕಾಶ್ ಚೋಪ್ರಾ ಹಂಚಿಕೊಂಡಿದ್ದಾರೆ. ಧೋನಿ ತೆಗೆದುಕೊಂಡ ಈ ಪ್ರಬುದ್ಧ ನಿರ್ಧಾರವು ಅಂತಿಮವಾಗಿ ತಂಡಕ್ಕೆ ಫಲ ನೀಡಿತು ಮತ್ತು ಸಿಎಸ್‌ಕೆ ಐದನೇ ಬಾರಿಗೆ ಟ್ರೋಫಿ ಜಯಿಸಲು ಸಾಧ್ಯವಾಯಿತು ಎಂದು ಚೋಪ್ರಾ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹೇಳಿದ್ದಾರೆ.

ಅಂದಹಾಗೆ, ಎಂ.ಎಸ್. ಧೋನಿ ತಮ್ಮ ಅದ್ಭುತ ನಾಯಕತ್ವದ ಮೂಲಕ ಭಾರತ ತಂಡವನ್ನು 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟಿರುವ ಏಕೈಕ ನಾಯಕ ಎಂಬ ಐತಿಹಾಸಿಕ ದಾಖಲೆ ಹೊಂದಿದ್ದಾರೆ. ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯನ್ನೂ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿ 5 ಐಪಿಎಲ್ ಕಿರೀಟಗಳು ಹಾಗೂ 2 ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 278 ಪಂದ್ಯಗಳಲ್ಲಿ 5,439 ರನ್ಗಳನ್ನು ಗಳಿಸಿರುವ ಧೋನಿ, ಕೇವಲ ಅಂಕಿಅಂಶಗಳಿಗಿಂತ ಮಿಗಿಲಾಗಿ ಲೀಗ್‌ನ ಸಾಂಸ್ಕೃತಿಕ ರೂವಾರಿಯಾಗಿ ಹೊರಹೊಮ್ಮಿದ್ದಾರೆ.

Also Read
ಐಪಿಎಲ್​ಗೆ ಧೋನಿ ವಿದಾಯ: ಗಂಡನ ಬಗ್ಗೆ ಭಾವುಕ ಮಾತುಗಳನ್ನಾಡಿದ ಸಾಕ್ಷಿ ಅಭಿಮಾನಿಗಳಿಗೆ ಹೇಳಿದ್ದೇನು? MS Dhoni
MS Dhoni

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜತೆಗೆ ಐಪಿಎಲ್ ಅನ್ನು ಜಾಗತಿಕ ಮಟ್ಟದ ಒಂದು ದೊಡ್ಡ ಕ್ರೀಡೆಯನ್ನಾಗಿ ಮಾಡುವಲ್ಲಿ ಧೋನಿ ಅವರ ಪಾತ್ರ ಹಿರಿದಾದದ್ದು ಎಂದು ಚೋಪ್ರಾ ಬಣ್ಣಿಸಿದ್ದಾರೆ. ಮೈದಾನದಲ್ಲಿ ಧೋನಿ ಬ್ಯಾಟಿಂಗ್ ಮಾಡಲು ಬಂದಾಗ ಪ್ರೇಕ್ಷಕರಿಂದ ವ್ಯಕ್ತವಾಗುವ ಅಪಾರ ಸಂಭ್ರಮ ಹಾಗೂ ಜನಸಾಗರವೇ ಅವರ ಮೇಲಿನ ಗೌರವ ಮತ್ತು ಪ್ರೀತಿಗೆ ಸಾಕ್ಷಿಯಾಗಿದೆ. ಧೋನಿ ಇಲ್ಲದ ಐಪಿಎಲ್ ಖಂಡಿತವಾಗಿಯೂ ತನ್ನ ವಿಶೇಷ ಕಳೆ ಕಳೆದುಕೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆಟಗಾರನಾಗಿ ಐಪಿಎಲ್‌ಗೆ ವಿದಾಯ ಹೇಳಿರುವ ಎಂ.ಎಸ್. ಧೋನಿ, ಮುಂಬರುವ 2027ರ ಹಂಗಾಮಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಲ್ಲದಿದ್ದರೂ 'ಮಾರ್ಗದರ್ಶಕ' (Mentor) ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ವಿವಾದಗಳು ಮತ್ತು ಬಿಕ್ಕಟ್ಟುಗಳು ಎದುರಾದಾಗಲೂ ಕೋಪಗೊಳ್ಳದೆ, ತಂಡದ ಗೆಲುವಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುವ ಅವರ ತಾಳ್ಮೆ ಮತ್ತು ದೂರದೃಷ್ಟಿಯೇ ಅವರನ್ನು ವಿಶ್ವದ ಶ್ರೇಷ್ಠ ನಾಯಕನನ್ನಾಗಿ ರೂಪಿಸಿದೆ ಎಂಬುದಕ್ಕೆ ಈ ಘಟನೆಯೇ ಜೀವಂತ ಉದಾಹರಣೆಯಾಗಿದೆ, (ಏಜೆನ್ಸೀಸ್​).