ಆ 50 ಸೆಕೆಂಡ್​​ ಮೀಟಿಂಗ್​... ಭರ್ಜರಿ ಶತಕದ ಹಿಂದಿನ ರೋಚಕ ಸಂಗತಿ ಬಿಚ್ಚಿಟ್ಟ ಸಂಜು ಸ್ಯಾಮ್ಸನ್​! Sanju Samson

ಆ 50 ಸೆಕೆಂಡ್​​ ಮೀಟಿಂಗ್​... ಭರ್ಜರಿ ಶತಕದ ಹಿಂದಿನ ರೋಚಕ ಸಂಗತಿ ಬಿಚ್ಚಿಟ್ಟ ಸಂಜು ಸ್ಯಾಮ್ಸನ್​! Sanju Samson
ಆ 50 ಸೆಕೆಂಡ್​​ ಮೀಟಿಂಗ್​... ಭರ್ಜರಿ ಶತಕದ ಹಿಂದಿನ ರೋಚಕ ಸಂಗತಿ ಬಿಚ್ಚಿಟ್ಟ ಸಂಜು ಸ್ಯಾಮ್ಸನ್​! Sanju Samson
Published on

ಪ್ರಮುಖ ಮುಖ್ಯಾಂಶಗಳು

  • 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಸತತ ಮೂರು ಸೋಲುಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್‌ಗಳ ಭರ್ಜರಿ ಜಯ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್
  • ಕೇವಲ 56 ಎಸೆತಗಳಲ್ಲಿ ಅಜೇಯ 115 ರನ್ ಸಿಡಿಸಿ ತಂಡದ ಗೆಲುವಿನ ರೂವಾರಿಯಾದ ಸಂಜು ಸ್ಯಾಮ್ಸನ್ 'ಪಂದ್ಯ ಪುರುಷ' ಪ್ರಶಸ್ತಿಗೆ ಭಾಜನರಾದರು
  • ಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರಿಗೆ ಸಂಜು ಸ್ಯಾಮ್ಸನ್ ತಮ್ಮ ಶತಕವನ್ನು ಅರ್ಪಿಸಿದರು
  • ಜೇಮಿ ಓವರ್‌ಟನ್ (4 ವಿಕೆಟ್) ಮತ್ತು ಅಂಶುಲ್ ಕಾಂಬೋಜ್ (3 ವಿಕೆಟ್) ಅವರ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ 189 ರನ್‌ಗಳಿಗೆ ಆಲೌಟ್ ಆಯಿತು
Sanju Samson : ಐದು ಬಾರಿ ಐಪಿಎಲ್​ ಚಾಂಪಿಯನ್​ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯಲ್ಲಿ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಈ ಸೀಸನ್​ ಅನ್ನು ಸೋಲಿನಿಂದ ಆರಂಭಿಸಿದ ಸಿಎಸ್​ಕೆ, ಸತತ ಮೂರು ಸೋಲುಗಳ ಬಳಿಕ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಶನಿವಾರ ನಡೆದ ಪಂದ್ಯದಲ್ಲಿ ಸಿಎಸ್​ಕೆ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್‌ಗಳಿಂದ ಜಯಗಳಿಸಿತು. ಭರ್ಜರಿ ಶತಕ ಗಳಿಸಿದ ಸಂಜು ಸ್ಯಾಮ್ಸನ್ ಅವರಿಗೆ ಮ್ಯಾನ್​ ಆಫ್​​ ದಿ ಮ್ಯಾಚ್​ ಪ್ರಶಸ್ತಿ ನೀಡಲಾಯಿತು.
ಸಿಎಸ್​ಕೆ ಗೆಲುವಿನ ಬೆನ್ನಲ್ಲೇ ಮಾತನಾಡಿದ ಸಂಜು ಸ್ಯಾಮ್ಸನ್​, ಸತತ ಮೂರು ಸೋಲುಗಳ ನಂತರ ಶತಕದೊಂದಿಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಂತೋಷವಾಗುತ್ತಿದೆ ಎಂದರು. ಸತತ ವೈಫಲ್ಯಗಳ ಹೊರತಾಗಿಯೂ ತಂಡದ ಆಡಳಿತ ಮಂಡಳಿ ನನ್ನ ಮೇಲೆ ನಂಬಿಕೆ ಇಟ್ಟಿರುವುದು ದೊಡ್ಡ ವಿಷಯ. ಹೀಗಾಗಿ, ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್‌ಗೆ ನನ್ನ ಶತಕವನ್ನು ಅರ್ಪಿಸುತ್ತಿದ್ದೇನೆ ಎಂದು ಸ್ಯಾಮ್ಸನ್ ಹೇಳಿದರು.
ಈ ಶತಕ ನನಗೆ ಬಹಳ ಮುಖ್ಯವಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಚೆನ್ನೈ ಫ್ರಾಂಚೈಸಿ ನನ್ನನ್ನು ಟ್ರೇಡ್​ ವಿಂಡೋ ಮೂಲಕ ಖರೀದಿಸಿತು. ಏಕೆಂದರೆ, ಅವರು ನನ್ನ ಮೇಲೆ ನಂಬಿಕೆ ಇಟ್ಟರು. ಮೊದಲ ಮೂರು ಪಂದ್ಯಗಳಲ್ಲಿ ನಾನು ವಿಫಲವಾದಾಗ, ನಾನು ಅವರ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ನನಗೆ ಅನಿಸಿತು. ಆದರೆ ಇಂದು, ನಾನು ಜವಾಬ್ದಾರಿಯುತವಾಗಿ ಆಡಿದೆ ಮತ್ತು ಶತಕ ಗಳಿಸಿದೆ ಮತ್ತು ನನ್ನಲ್ಲಿ ಇಟ್ಟಿದ್ದ ನಂಬಿಕೆಯನ್ನು ನಿಜವಾಗಿಸಿದೆ ಎಂದು ಸಂಜು ಹೇಳಿದರು.
ಇಷ್ಟು ದಿನ ಒಂದು ಫ್ರಾಂಚೈಸಿಯನ್ನು ಪ್ರತಿನಿಧಿಸಿ ಈಗ ಇನ್ನೊಂದು ಫ್ರಾಂಚೈಸಿ ಪರ ಆಡುವುದು ಸ್ವಲ್ಪ ಕಷ್ಟ. ಆದರೆ, ಚೆನ್ನೈನಲ್ಲಿ ನನಗೆ ಎಂದಿಗೂ ಹಾಗೆ ಅನಿಸಲಿಲ್ಲ. ನಾನು ಚೆನ್ನೈ ಪರ ಆಡುವಾಗ, ನಾನು ನನ್ನ ಸ್ವಂತ ಮನೆಗೆ ಬಂದಿದ್ದೇನೆ ಎಂದು ನನಗೆ ಅನಿಸುತ್ತದೆ. ಇಲ್ಲಿನ ಜನರು ತುಂಬಾ ಒಳ್ಳೆಯವರು. ಎಲ್ಲರೂ ಶಾಂತವಾಗಿ ಕಾಣುತ್ತಾರೆ ಎಂದು ಸಂಜು ಹೇಳಿದರು.
ನಾವು ಸತತ ಮೂರು ಸೋಲುಗಳನ್ನು ಅನುಭವಿಸಿದರೂ, ಇಂದು ಪಂದ್ಯದ ಮೊದಲು ನಾವೆಲ್ಲರೂ ಕೇವಲ 50 ಸೆಕೆಂಡುಗಳ ಕಾಲ ಸಭೆ ನಡೆಸಿದೆವು. ಆ ಐವತ್ತು ಸೆಕೆಂಡುಗಳು ನಾನು ತಂಡದೊಂದಿಗೆ ಎಷ್ಟು ಕನೆಕ್ಟ್​​ ಆಗಿದ್ದೇನೆ ಎಂಬುದನ್ನು ತೋರಿಸಿತು. ನಾನು ಹಿಂದೆ ಹಲವು ಬಾರಿ ವಿಫಲನಾಗಿದ್ದೇನೆ. ಆಗ ನನ್ನ ಮನಸ್ಸು ಏನೇನೋ ಯೋಚನೆ ಮಾಡುತ್ತಿತ್ತು. ಆದರೆ, ನನ್ನ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಮತ್ತು ಅವುಗಳನ್ನು ಅನುಸರಿಸುವುದು ಮುಖ್ಯವಾಗಿತ್ತು. ಅದಕ್ಕಾಗಿ, ನಾನು ನಮ್ಮ ಸಹಾಯಕ ಸಿಬ್ಬಂದಿಯೊಂದಿಗೆ ಕೆಲವು ಉತ್ತಮ ತರಬೇತಿ ಅವಧಿಯಲ್ಲಿ ಭಾಗವಹಿಸಿದೆ ಎಂದು ಸಂಜು ತಿಳಿಸಿದರು.
ಪಂದ್ಯದಲ್ಲಿ ಉತ್ತಮ ಜೊತೆಯಾಟಗಳನ್ನು ರೂಪಿಸುವುದು ಬಹಳ ಮುಖ್ಯ. ಆಯುಷ್ ಮಾತ್ರೆ ಪ್ರಬುದ್ಧತೆಯಿಂದ ಆಡಿದರು. ನಮ್ಮ ಕೋಚ್ ಸ್ಟೀಫನ್ ಫ್ಲೆಮಿಂಗ್‌ಗಾಗಿ ನಾನು ನನ್ನ ಶತಕವನ್ನು ಆಚರಿಸಿದೆ. ಪರಿಸ್ಥಿತಿಗಳು ಎಷ್ಟು ಸವಾಲಿನದ್ದಾಗಿರಬಹುದು ಎಂದು ನನಗೆ ತಿಳಿದಿದೆ. ಅದಕ್ಕಾಗಿಯೇ ನಾನು ಈ ಇನ್ನಿಂಗ್ಸ್ ಅನ್ನು ಅವರಿಗೆ ಅರ್ಪಿಸಲು ಬಯಸಿದೆ ಎಂದು ಸಂಜು ಪಂದ್ಯದ ಬಳಿಕ ಮಾತನಾಡುವಾಗ ಹೇಳಿದರು.

ಪಂದ್ಯದ ಸಾರಾಂಶ ಇಲ್ಲಿದೆ...

ನಿನ್ನೆ (ಏಪ್ರಿಲ್ 11, 2026) ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2026ರ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 23 ರನ್‌ಗಳಿಂದ ಗೆದ್ದು ತನ್ನ ಮೊದಲ ವಿಜಯವನ್ನು ಸಾಧಿಸಿತು. ಸಂಜು ಸ್ಯಾಮ್ಸನ್ ಅವರ ಅಜೇಯ 56 ಎಸೆತಗಳ 115 ರನ್‌ಗಳ ಶತಕ ಮತ್ತು ಆಯುಷ್ ಮಾತ್ರೆಯ 59 ರನ್‌ಗಳ ನೆರವಿನೊಂದಿಗೆ ಸಿಎಸ್‌ಕೆ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದು 212 ರನ್‌ಗಳ ಭಾರೀ ಮೊತ್ತ ಕಟ್ಟಿತು. ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪಥುಮ್ ನಿಸ್ಸಾಂಕ (41) ಮತ್ತು ಟ್ರಿಸ್ಟನ್ ಸ್ಟಬ್ಸ್ (60) ಅವರ ಪ್ರಯತ್ನಗಳ ಹೊರತಾಗಿಯೂ 189 ರನ್‌ಗಳಿಗೆ ಆಲೌಟ್ ಆಗಿ ಸೋಲುಂಡಿತು. ಜೇಮಿ ಓವರ್‌ಟನ್ ಅವರ 4 ವಿಕೆಟ್‌ಗಳ (4-18) ಮತ್ತು ಅಂಶುಲ್ ಕಾಂಬೋಜ್ ಅವರ 3 ವಿಕೆಟ್‌ಗಳ ಪ್ರಭಾವಿ ಬೌಲಿಂಗ್ ಸಿಎಸ್‌ಕೆಯ ಗೆಲುವಿಗೆ ನೆರವಾಯಿತು. ಈ ಗೆಲುವಿನೊಂದಿಗೆ ಸಿಎಸ್‌ಕೆ ಪಾಯಿಂಟ್ಸ್ ಟೇಬಲ್‌ನಲ್ಲಿ ತನ್ನ ಖಾತೆ ತೆರೆದರೆ, ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸೋಲು ಅನುಭವಿಸಿತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net