ಜೀರೋ ರನ್​ 5 ವಿಕೆಟ್​...ಪಾಕ್​ ಮಾನ ಹರಾಜು ಹಾಕಿ ವಿಶ್ವ ದಾಖಲೆ ಬರೆದ ಜಸ್ಟಿನ್ ಗ್ರೀವ್ಸ್: ಟೆಸ್ಟ್ ಇತಿಹಾಸದಲ್ಲೇ ಇದು ಮೊದಲು! Justin Greaves

ಜೀರೋ ರನ್​ 5 ವಿಕೆಟ್​...ಪಾಕ್​ ಮಾನ ಹರಾಜು ಹಾಕಿ ವಿಶ್ವ ದಾಖಲೆ ಬರೆದ ಜಸ್ಟಿನ್ ಗ್ರೀವ್ಸ್: ಟೆಸ್ಟ್ ಇತಿಹಾಸದಲ್ಲೇ ಇದು ಮೊದಲು! Justin Greaves
ಜೀರೋ ರನ್​ 5 ವಿಕೆಟ್​...ಪಾಕ್​ ಮಾನ ಹರಾಜು ಹಾಕಿ ವಿಶ್ವ ದಾಖಲೆ ಬರೆದ ಜಸ್ಟಿನ್ ಗ್ರೀವ್ಸ್: ಟೆಸ್ಟ್ ಇತಿಹಾಸದಲ್ಲೇ ಇದು ಮೊದಲು! Justin Greaves
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನ ವಿರುದ್ಧ ಒಂದೂ ರನ್ ನೀಡದೆ 5 ವಿಕೆಟ್ ಕಬಳಿಸಿ 149 ವರ್ಷಗಳ ಕ್ರಿಕೆಟ್ ಇತಿಹಾಸ ಬದಲಿಸಿದ ಜಸ್ಟಿನ್ ಗ್ರೀವ್ಸ್
  • ಪಾಕಿಸ್ತಾನ ಬ್ಯಾಟರ್‌ಗಳ ಬೆನ್ನೆಲುಬು ಮುರಿದ ವಿಂಡೀಸ್ ಬೌಲರ್ ಜಸ್ಟಿನ್ ಗ್ರೀವ್ಸ್​ರಿಂದ ಕ್ರಿಕೆಟ್ ಇತಿಹಾಸದಲ್ಲೇ ಪ್ರಥಮ ಸಾಧನೆ
  • ಟೆಸ್ಟ್ ಕ್ರಿಕೆಟ್‌ನಲ್ಲಿ ಯಾರು ಮಾಡಿರದ ಅಸಾಧಾರಣ ದಾಖಲೆ ಬರೆದು ಪಾಕಿಸ್ತಾನಕ್ಕೆ ಧೂಳೆಬ್ಬಿಸಿದ ವೆಸ್ಟ್ ಇಂಡೀಸ್ ವೇಗಿ
Justin Greaves : ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ವೇಗಿ ಜಸ್ಟಿನ್ ಗ್ರೀವ್ಸ್ ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡಿರದ ಅಸಾಧಾರಣ ಹಾಗೂ ಐತಿಹಾಸಿಕ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಪಂದ್ಯದ ಮೂರನೇ ದಿನದಾಟದ ವೇಳೆ ಭರ್ಜರಿ ಬೌಲಿಂಗ್ ದಾಳಿ ಪ್ರದರ್ಶಿಸಿದ ಜಸ್ಟಿನ್​ ಗ್ರೇವ್ಸ್​, ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ 5 ವಿಕೆಟ್ ಮೇಡನ್ ಓವರ್‌ಗಳನ್ನು ಎಸೆಯುವ ಮೂಲಕ ಈ ಅಭೂತಪೂರ್ವ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
32 ವರ್ಷದ ಜಸ್ಟಿನ್ ಗ್ರೀವ್ಸ್ ಮಧ್ಯಾಹ್ನದ ಭೋಜನದ ವಿರಾಮಕ್ಕೂ ಮುನ್ನ ಹಾಗೂ ನಂತರ ನಡೆಸಿದ ಮೊನೆಚಾದ ಬೌಲಿಂಗ್ ದಾಳಿಯಿಂದ ಈ ವಿಶ್ವ ದಾಖಲೆ ನಿರ್ಮಾಣವಾಯಿತು. ಈ ಸ್ಮರಣೀಯ ಬೌಲಿಂಗ್​ ಮೂಲಕ ಗ್ರೀವ್ಸ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ ಚೊಚ್ಚಲ 5 ವಿಕೆಟ್‌ಗಳ ಗೊಂಚಲನ್ನು ಸಹ ಪಡೆದುಕೊಂಡರು. ಈ ಮುಂಚೆ ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ 2016 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸತತ 4 ವಿಕೆಟ್ ಮೇಡನ್ ಎಸೆದು ನಿರ್ಮಿಸಿದ್ದ ದಾಖಲೆಯನ್ನು ಗ್ರೀವ್ಸ್ ಇದೀಗ ಮುರಿದಿದ್ದಾರೆ.
ಈ ಪಂದ್ಯದಲ್ಲಿ ಅತ್ಯಂತ ಶಿಸ್ತುಬದ್ಧ ದಾಳಿ ನಡೆಸಿದ ಗ್ರೀವ್ಸ್, ಪಾಕಿಸ್ತಾನದ ಶಾನ್ ಮಸೂದ್, ಮೊಹಮ್ಮದ್ ರಿಜ್ವಾನ್, ಆಮಿರ್ ಜಮಾಲ್, ಅಲಿ ಉಸ್ಮಾನ್ ಹಾಗೂ ಮೊಹಮ್ಮದ್ ಅಬ್ಬಾಸ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಒಟ್ಟು 11 ಓವರ್‌ಗಳಲ್ಲಿ 6 ಮೇಡನ್ ಸಹಿತ ಕೇವಲ 27 ರನ್ ನೀಡಿ 5 ವಿಕೆಟ್ ಕಬಳಿಸಿದ ಅವರ ಮಾರಕ ದಾಳಿಗೆ ನಲುಗಿದ ಪಾಕಿಸ್ತಾನ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 282 ರನ್‌ಗಳಿಗೆ ಆಲ್ ಔಟ್ ಆಯಿತು.
ತಮ್ಮ ಈ ಐತಿಹಾಸಿಕ ಸಾಧನೆಯ ಕುರಿತು ಮಾತನಾಡಿದ ಗ್ರೀವ್ಸ್, ನಾಯಕ ರೋಸ್ಟನ್ ಚೇಸ್ ಅವರ ಸಲಹೆಯಂತೆ ಸರಿಯಾದ ಲೈನ್ ಮತ್ತು ಲೆಂತ್‌ನಲ್ಲಿ ಸತತವಾಗಿ ಬೌಲಿಂಗ್ ಮಾಡಿದ್ದೇ ಈ ಯಶಸ್ಸಿಗೆ ಕಾರಣ ಎಂದಿದ್ದಾರೆ. ಚೆಂಡು ಉತ್ತಮವಾಗಿ ಸ್ವಿಂಗ್ ಮತ್ತು ಸೀಮ್ ಆಗುತ್ತಿತ್ತು, ಇದರಿಂದ ತನಗೆ ಪ್ರತಿಫಲ ಸಿಕ್ಕಿದೆ ಎಂದು ಹೇಳಿದ ಅವರು, ಟೆಸ್ಟ್‌ನಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದಿರುವುದು ಅತ್ಯಂತ ಸಂತಸ ತಂದಿದೆ, ಆದರೆ ಪಂದ್ಯದಲ್ಲಿ ಇನ್ನು ಸಾಕಷ್ಟು ಕೆಲಸ ಬಾಕಿ ಇದೆ ಎಂದು ತಮ್ಮ ಸರಳತೆಯನ್ನು ಮೆರೆದಿದ್ದಾರೆ.
ಇದಕ್ಕೂ ಮುನ್ನ 3 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿ ಬೃಹತ್ ಮುನ್ನಡೆಯತ್ತ ಸಾಗುತ್ತಿದ್ದ ಪಾಕಿಸ್ತಾನಕ್ಕೆ ಗ್ರೀವ್ಸ್ ಶಾಕ್ ನೀಡಿದರು. ಶತಕ ಬಾರಿಸಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಮಾಜಿ ನಾಯಕ ಶಾನ್ ಮಸೂದ್ ಅವರ ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ತಂಡದ ದಿಢೀರ್ ಕುಸಿತಕ್ಕೆ ಕಾರಣರಾದರು. ಅಲ್ಲಿಯವರೆಗೆ ಸುಲಭವಾಗಿ ರನ್ ಗಳಿಸುತ್ತಿದ್ದ ಪಾಕ್ ಬ್ಯಾಟರ್‌ಗಳು ಗ್ರೀವ್ಸ್ ದಾಳಿಗೆ ತತ್ತರಿಸಿ ಹೋದರು.
ಆದಾಗ್ಯೂ, ದಿನದಾಟದ ಅಂತ್ಯದ ವೇಳೆಗೆ ತಿರುಗೇಟು ನೀಡಿದ ಪಾಕಿಸ್ತಾನ ಬೌಲರ್‌ಗಳು ವೆಸ್ಟ್ ಇಂಡೀಸ್ ತಂಡವನ್ನು 126 ರನ್‌ಗಳಿಗೆ 7 ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು. ಮೂರನೇ ದಿನದ ಆಟ ಮುಕ್ತಾಯದ ವೇಳೆಗೆ ವೆಸ್ಟ್ ಇಂಡೀಸ್ ತಂಡವು ಒಟ್ಟಾರೆ 155 ರನ್‌ಗಳ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದು, ಪಂದ್ಯ ರೋಚಕ ಹಂತ ತಲುಪಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net