ಬಿಸಿಬಿಗೆ ಬಾಂಗ್ಲಾ ಕ್ರಿಕೆಟಿಗರಿಂದ 5 ಬೇಡಿಕೆ! ಆಂತರಿಕ ಜಟಾಪಟಿ ತಾರಕಕ್ಕೇರಿದ ಬೆನ್ನಲ್ಲೇ ನಿರ್ದೇಶಕ ನಜ್ಮುಲ್​ಗೆ ಗೇಟ್​ಪಾಸ್​

ಬಾಂಗ್ಲಾ ಕ್ರಿಕೆಟಿಗರ ಐದು ಬೇಡಿಕೆ
ಬಾಂಗ್ಲಾ ಕ್ರಿಕೆಟಿಗರ ಐದು ಬೇಡಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ಟಿ-20 ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎಂದು ಪುನರುಚ್ಚರಿಸಿದ ಬಾಂಗ್ಲಾದೇಶ
  • ಬಾಂಗ್ಲಾ ಕ್ರಿಕೆಟ್​ ಮಂಡಳಿ ವಿರುದ್ಧವೇ ಆಟಗಾರರು ಕಿಡಿ
  • ಬಾಂಗ್ಲಾ ಆಟಗಾರರ ಆಕ್ರೋಶಕ್ಕೆ ಮಣಿದು ಬಿಸಿಬಿ ನಿರ್ದೇಶಕ ಹುದ್ದೆಯಿಂದ ನಜ್ಮುಲ್​ಗೆ ಗೇಟ್​ಪಾಸ್​
ಢಾಕಾ: ಫೆಬ್ರವರಿ ತಿಂಗಳು ಭಾರತದಲ್ಲಿ ಆರಂಭವಾಗಲಿರುವ ಟಿ-20 ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎಂದು ಬಾಂಗ್ಲಾದೇಶ (Bangladesh) ತನ್ನ ನಿಲುವನ್ನು ಪುನರುಚ್ಚರಿಸಿದೆ. ನಮ್ಮ ಭದ್ರತಾ ದೃಷ್ಟಿಯಿಂದ ಭಾರತದಲ್ಲಿ ಆಡುವುದಿಲ್ಲ ಎಂದು ವಿವರಿಸಿದ್ದರು ಕೂಡ ಐಸಿಸಿ ಇದಕ್ಕೆ ಕಿಂಚಿತ್ತು ಆಸ್ಪದ ನೀಡದಿರುವುದು ಸದ್ಯ ಬಾಂಗ್ಲಾ ಕ್ರಿಕೆಟ್​ ಮಂಡಳಿಗೆ ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿದೆ. ಅತ್ತ ತಮ್ಮ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಿ ಎಂದು ಐಸಿಸಿಗೆ ಮನವಿ ಸಲ್ಲಿಸಿದ್ದರೆ, ಇತ್ತ ಬಾಂಗ್ಲಾ ಕ್ರಿಕೆಟಿಗರು ಬಿಸಿಬಿ ವಿರುದ್ಧವೇ ತಿರುಗಿಬಿದ್ದಿರುವುದು ಸದ್ಯ ಅಚ್ಚರಿಯ ಬೆಳವಣಿಗೆಯಾಗಿದೆ.

ಬಿಸಿಬಿ ನಿರ್ದೇಶಕ ಹುದ್ದೆಯಿಂದ ನಜ್ಮುಲ್​ಗೆ ಗೇಟ್​ಪಾಸ್​

ಬಿಸಿಬಿ ನಿರ್ದೇಶಕ ಎಂ. ನಜ್ಮುಲ್ ಇಸ್ಲಾಂ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಕೆರಳಿದ ಬಾಂಗ್ಲಾದೇಶದ ಆಟಗಾರರು, ತಮ್ಮದೇ ಕ್ರಿಕೆಟ್ ಮಂಡಳಿಯ ವಿರುದ್ಧ ತಿರುಗಿಬಿದ್ದಿದ್ದಾರೆ. ಬಾಂಗ್ಲಾದೇಶ ಜಾಗತಿಕ ಪಂದ್ಯಾವಳಿಯಲ್ಲಿ ಭಾಗವಹಿಸದಿದ್ದರೆ ಅಂತಹ ನಷ್ಟವೇನು ಆಗೋದಿಲ್ಲ ಎಂದ ನಜ್ಮುಲ್, ನಮ್ಮ ತಂಡ ಆಡಿದರೂ ಅಥವಾ ಆಡದಿದ್ದರೂ ಯಾವುದೇ ಲಾಭ ಅಥವಾ ನಷ್ಟ ಸಂಭವಿಸಲ್ಲ ಎಂದರು.
ಇನ್ನು ಬಾಂಗ್ಲಾ ಆಟಗಾರರಿಗೆ ಮರುಪಾವತಿ ವಿಚಾರದ ಬಗ್ಗೆ ಮಾತನಾಡಿದ ಅವರು, ರೀ-ಪೇಮೆಂಟ್​ ಕೊಡುವ ಮಾತಿಲ್ಲ. ನಾವೇಕೆ ಪರಿಹಾರ ಕೊಡಬೇಕು? ಆಟಗಾರರು ಪ್ರದರ್ಶನ ನೀಡದಿದ್ದಾಗ, ವಾಪಾಸ್​ ಕೊಡುವುದು ಎಷ್ಟು ಸರಿ? ನಾವು ಅವರಿಗಾಗಿ ಖರ್ಚು ಮಾಡುವ ಕೋಟಿಗಟ್ಟಲೆ ಹಣವನ್ನು ಅವರು ಅದೇ ರೀತಿಯಲ್ಲಿ ನಮಗೆ ಹಿಂದಿರುಗಿಸಿ ಎಂದು ನಾವು ಕೇಳ್ತೀವಾ ಹೇಳಿ? ಎಂದು ನಾಲಿಗೆ ಹರಿಬಿಟ್ಟರು. ಈ ಮಾತುಗಳಿಂದ ಕೆರಳಿದ ಕ್ರಿಕೆಟಿಗರು, ನಜ್ಮುಲ್​ ರಾಜೀನಾಮೆಗೆ ಆಗ್ರಹಿಸಿದರು. ಅಂತೆಯೇ, ಇದೀಗ ಆಟಗಾರರ ಒತ್ತಡ ಹಾಗೂ ಐದು ಬೇಡಿಕೆಗಳ ಪೈಕಿ ಒಂದನ್ನು ಬಿಸಿಬಿ ಕಡೆಗೂ ಈಡೇರಿಸಿದೆ.

ಆಟಗಾರರ ಐದು ಬೇಡಿಕೆಯೇನು?

1. ಢಾಕಾ ಫಸ್ಟ್ ಡಿವಿಷನ್ ಕ್ರಿಕೆಟ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟಿಗೆ ಸೂಕ್ತ ಪರಿಹಾರ
2. ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಕ್ರಿಕೆಟ್ ಮಂಡಳಿಯಿಂದ ಸರಿಯಾದ ಪ್ರತಿಕ್ರಿಯೆ ಅಗತ್ಯ
3. ಬಿಸಿಬಿ ನಿರ್ದೇಶಕ ಹುದ್ದೆಗೆ ನಜ್ಮುಲ್ ರಾಜೀನಾಮೆ ಘೋಷಿಸಬೇಕು
4. ಮಹಿಳಾ ಕ್ರಿಕೆಟಿಗರಿಗೆ ಉತ್ತಮ ಸೌಲಭ್ಯಗಳು
5. ಮಹಿಳಾ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶಗಳು ಕೊಡಬೇಕು,(ಏಜೆನ್ಸೀಸ್).
ಇಷ್ಟೆಲ್ಲ ಗೊಂದಲ, ಜಟಾಪಟಿಗೆ ಮೂಲ ಕಾರಣವೇನು?
ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಹತ್ಯೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ ತಂಡ ಕೋಲ್ಕತ ನೈಟ್ ರೈಡರ್ಸ್‌ನಿಂದ ಕೈಬಿಡುವಂತೆ ಬಿಸಿಸಿಐ ಕೇಳಿತ್ತು. ರೆಹಮಾನ್​ ಏನಾದರೂ ಭಾರತದಲ್ಲಿ ಆಡಿದರೆ ಕ್ರೀಡಾಂಗಣದ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕೆಲವು ಹಿಂದೂ ಸಂಘಟನೆಗಳು ಎಚ್ಚರಿಸಿದ್ದರಿಂದ ಬಿಸಿಸಿಐ ಅವರನ್ನು ತಂಡದಿಂದ ಕೈಬಿಡುವಂತೆ ಸೂಚನೆ ನೀಡಿತು. ಅಂತಿಮವಾಗಿ ಕೆಕೆಆರ್ ತಂಡ ಆಟಗಾರನನ್ನು ಬಿಡುಗಡೆ ಮಾಡಿತು.
ಯಾವಾಗ ರೆಹಮಾನ್​ರನ್ನು ಐಪಿಎಲ್​​ನಿಂದ ಹೊರಗೆ ಹಾಕಿದರೋ ಇದು ನಮ್ಮ ದೇಶಕ್ಕೆ ಮಾಡಿದ ಅವಮಾನ ಎಂದು ಬಾಂಗ್ಲಾದೇಶ ಭಾವಿಸಿದೆ. ಹೀಗಾಗಿ, ಟಿ20 ವಿಶ್ವಕಪ್​ ಆಡಲು ಭಾರತಕ್ಕೆ ಬರುವುದಿಲ್ಲ ಎಂಬ ಹಠಕ್ಕೆ ಬಿದ್ದಿದೆ. ಅವರ ಮನವಿಗೆ ಐಸಿಸಿ ಸ್ಪಂದಿಸದಿರುವುದು ಬಿಸಿಬಿಯನ್ನು ತೀರ ಕೆರಳಿಸಿದೆ. ಇದು ಅಲ್ಲಿನ ಆಡಳಿತದ ಆಂತರಿಕ ಸಮಸ್ಯೆಗೆ ದೊಡ್ಡ ಮುಳುವಾಗಿ ಪರಿಣಮಿಸಿದೆ.ಇದು ಯಾವ ಹಂತಕ್ಕೆ ಹೋಗಿ ತಲುಪಲಿದೆ? ಮುಂದೇನಾಗುತ್ತೆ ಅಂತ ಕಾದು ನೋಡಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net