CRICKET: ಇಂದು ಅಫ್ಘಾನಿಸ್ತಾನ ವಿರುದ್ಧ ಕೊನೇ ಏಕದಿನ; ಕ್ಲೀನ್​ಸ್ವೀಪ್​ ಹಂಬಲದಲ್ಲಿ ಟೀಮ್​ ಇಂಡಿಯಾ

CRICKET: ಇಂದು ಅಫ್ಘಾನಿಸ್ತಾನ ವಿರುದ್ಧ ಕೊನೇ ಏಕದಿನ; ಕ್ಲೀನ್​ಸ್ವೀಪ್​ ಹಂಬಲದಲ್ಲಿ ಟೀಮ್​ ಇಂಡಿಯಾ
CRICKET: ಇಂದು ಅಫ್ಘಾನಿಸ್ತಾನ ವಿರುದ್ಧ ಕೊನೇ ಏಕದಿನ; ಕ್ಲೀನ್​ಸ್ವೀಪ್​ ಹಂಬಲದಲ್ಲಿ ಟೀಮ್​ ಇಂಡಿಯಾ
Published on
ಚೆನ್ನೈ: ನಾಲ್ವರು ಪ್ರಮುಖ ಆಟಗಾರರ (ಕೊಹ್ಲಿ, ಬುಮ್ರಾ, ಸಿರಾಜ್​, ಹಾರ್ದಿಕ್​) ಗೈರಿನಲ್ಲಿ ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧ ಸರಾಗವಾಗಿ ಏಕದಿನ ಸರಣಿ (CRICKET) ಗೆದ್ದಿರುವ ಆತಿಥೇಯ ಭಾರತ ತಂಡ ಇದೀಗ ಕ್ಲೀನ್​ಸ್ವೀಪ್​ ಸಾಧನೆಯತ್ತ ದೃಷ್ಟಿನೆಟ್ಟಿದೆ. ಭಾರತ ತಂಡ ಶನಿವಾರ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಆಡಲಿದ್ದು, ಅಫ್ಘಾನಿಸ್ತಾನ​ ವಿರುದ್ಧದ ಪ್ರಾಬಲ್ಯ ಮುಂದುವರಿಸುವ ನಿರೀಕ್ಷೆ ಇದೆ.
ಭಾರತ ತಂಡ ಲಖನೌದಲ್ಲಿ 400 ಪ್ಲಸ್​ ಮೊತ್ತ ಪೇರಿಸಿ ಬಲಿಷ್ಠ ಬ್ಯಾಟಿಂಗ್​ ನಿರ್ವಹಣೆ ತೋರಿತ್ತು. ಇದರ ನಡುವೆಯೂ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​, ವಿಕೆಟ್​ ಕೀಪರ್-ಬ್ಯಾಟರ್​ ಹಾಗೂ ಕನ್ನಡಿಗ ಕೆಎಲ್​ ರಾಹುಲ್​ ಮತ್ತು ಟಿ20 ಉಪನಾಯಕ ಶ್ರೇಯಸ್​ ಅಯ್ಯರ್​ ವೈಫಲ್ಯ ಕಂಡಿದ್ದರು. ಹೀಗಾಗಿ ಕೊನೇ ಪಂದ್ಯದಲ್ಲಿ ಈ ಮೂವರಿಂದ ದೊಡ್ಡ ಇನಿಂಗ್ಸ್​ನ ನಿರೀಕ್ಷೆ ಇಡಲಾಗಿದೆ. ಜೈಸ್ವಾಲ್​ ರನ್​ಬರ ನೀಗಿಸಿಕೊಂಡರೆ ಮುಂಬರುವ ಇಂಗ್ಲೆಂಡ್​ ಪ್ರವಾಸದ ಏಕದಿನ ಸರಣಿಯಲ್ಲೂ ಅವಕಾಶ ಪಡೆಯಬಹುದು.

ಭಾರತ ಈಗಾಗಲೆ ಸರಣಿಯಲ್ಲಿ 3 ಆಟಗಾರರಿಗೆ ಪದಾರ್ಪಣೆ (ಗುರುನೂರ್​, ಹರ್ಷ್​, ಪ್ರಿನ್ಸ್​) ಅವಕಾಶ ಕಲ್ಪಿಸಿದೆ. ಈ ಪೈಕಿ ವೇಗಿ ಗುರುನೂರ್​ ಬ್ರಾರ್​ ಎರಡೂ ಪಂದ್ಯಗಳಲ್ಲಿ ತಲಾ 3 ವಿಕೆಟ್​ ಕಬಳಿಸಿ ಗಮನಸೆಳೆದಿದ್ದಾರೆ. ಎಡಗೈ ಸ್ಪಿನ್ನರ್​ ಹರ್ಷ್​ ದುಬೆ ಕೂಡ ಪದಾರ್ಪಣೆಯ ಪಂದ್ಯದಲ್ಲಿ 3 ವಿಕೆಟ್​ ಕಬಳಿಸಿದ್ದರು. ಪ್ರಿನ್ಸ್​ ಯಾದವ್​ ಪದಾರ್ಪಣೆಯ ಪಂದ್ಯದಲ್ಲಿ ದುಬಾರಿಯಾದರೂ 2 ವಿಕೆಟ್​ ಪಡೆದಿದ್ದರು. ಸರಣಿಯ ಕೊನೇ ಪಂದ್ಯದಲ್ಲಿ ಈ ಮೂವರು ಇನ್ನೊಂದು ಅವಕಾಶ ಪಡೆಯುವ ನಿರೀಕ್ಷೆ ಇದೆ.
ಟೀಮ್​ ನ್ಯೂಸ್​:
ಭಾರತ: ತೊಡೆ ನೋವಿನಿಂದಾಗಿ ಲಖನೌ ಏಕದಿನ ತಪ್ಪಿಸಿಕೊಂಡಿದ್ದ ಯುವ ವೇಗದ ಬೌಲಿಂಗ್​ ಆಲ್ರೌಂಡರ್​ ನಿತೀಶ್​ ರೆಡ್ಡಿ ಅಂತಿಮ ಪಂದ್ಯದಲ್ಲಿ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಶುಕ್ರವಾರ ಚೆಪಾಕ್​ನಲ್ಲಿ ಅವರು ಪೂರ್ಣ ಪ್ರಮಾಣದಲ್ಲಿ ಅಭ್ಯಾಸ ನಡೆಸಿದ್ದು ಇದರ ಸೂಚನೆ ನೀಡಿದೆ. ಯಶಸ್ವಿ ಜೈಸ್ವಾಲ್​ ಇನ್ನೊಂದು ಅವಕಾಶ ಪಡೆಯಬಹುದು. ಈಗಾಗಲೆ ಸರಣಿ ವಶಪಡಿಸಿಕೊಂಡಿರುವುದರಿಂದ ಭಾರತ 2027ರ ವಿಶ್ವಕಪ್​ ಪೂರ್ವಸಿದ್ಧತೆಯಾಗಿ ಆಡುವ 11ರ ಬಳಗದಲ್ಲಿ ಕೆಲ ಪ್ರಯೋಗ ನಡೆಸುವ ಸಾಧ್ಯತೆಯೂ ಇದೆ.
ಅಫ್ಘಾನಿಸ್ತಾನ: ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಮೊಹಮದ್​ ನಬಿ ಮತ್ತು ಒಮರ್ಜಾಯಿ ಆಡುವ 11ರ ಬಳಗಕ್ಕೆ ಮರಳಬಹುದು. ಈ ಬಗ್ಗೆ ಅಫ್ಘಾನಿಸ್ತಾನ ತಂಡದ ಫೀಲ್ಡಿಂಗ್​ ಕೋಚ್​ ಜಾನ್​ ಮೂನಿ ಭರವಸೆ ವ್ಯಕ್ತಪಡಿಸಿದ್ದಾರೆ.
ಹರ್ಷಿತ್​ ರಾಣಾ ಸೇರ್ಪಡೆ
ವೇಗಿ ಹರ್ಷಿತ್​ ರಾಣಾ ಮೊಣಕಾಲು ಗಾಯದ ಬಳಿಕ ಪುನಶ್ಚೇತನ ಪೂರ್ಣಗೊಳಿಸಿ, ಅಫ್ಘಾನಿಸ್ತಾನ ವಿರುದ್ಧದ ಕೊನೇ ಏಕದಿನ ಪಂದ್ಯಕ್ಕೆ ಮುನ್ನ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಹರ್ಷಿತ್​ ವರ್ಷಾರಂಭದಲ್ಲಿ ಟಿ20 ವಿಶ್ವಕಪ್​ ಟೂರ್ನಿಯ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದರು. ಬಳಿಕ ಫೆಬ್ರವರಿಯಲ್ಲಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. 24 ವರ್ಷದ ಹರ್ಷಿತ್​ ಈ ಗಾಯದಿಂದಾಗಿ ಟಿ20 ವಿಶ್ವಕಪ್​ ಮತ್ತು ಐಪಿಎಲ್​ ಎರಡನ್ನೂ ತಪ್ಪಿಸಿಕೊಂಡಿದ್ದರು. ಅವರು ಈಗ ತಂಡ ಸೇರಿಕೊಂಡಿದ್ದರೂ, 11ರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನವೆನಿಸಿದೆ.
*15: ಭಾರತ ತಂಡ ಚೆಪಾಕ್​ನಲ್ಲಿ ಇದುವರೆಗೆ ಆಡಿರುವ 15 ಏಕದಿನ ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, 6ರಲ್ಲಿ ಸೋತಿದೆ. 1 ಪಂದ್ಯ ರದ್ದುಗೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net