ಬೆಂಗಳೂರು: ಭಾರತ ತಂಡ ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ (blind womens t20 cricket world cup) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧವೂ ಗೆಲುವಿನ ಓಟ ಮುಂದುವರಿಸಿದ್ದು, ಸತತ 5ನೇ ಜಯದೊಂದಿಗೆ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ ನಡೆದ ತನ್ನ 5ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 8 ವಿಕೆಟ್ಗಳಿಂದ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ಗೆ ಇಳಿದ ಪಾಕಿಸ್ತಾನ 8 ವಿಕೆಟ್ಗೆ 135 ರನ್ ಗಳಿಸಿತು. ಪ್ರತಿಯಾಗಿ ಭಾರತ 10.2 ಓವರ್ಗಳಲ್ಲೇ 2 ವಿಕೆಟ್ಗೆ 136 ರನ್ ಗಳಿಸಿ ಜಯಭೇರಿ ಬಾರಿಸಿತು. 64 ರನ್ (34 ಎಸೆತ, 7 ಬೌಂಡರಿ) ಸಿಡಿಸಿದ ಅನೇಖಾ ದೇವಿ ಪಂದ್ಯಶ್ರೇಷ್ಠ ಪ್ರಶಸ್ತಿ ಭಾಜನರಾದರು. ನಾಯಕಿ ದೀಪಿಕಾ ಟಿ.ಸಿ. (45) ಉಪಯುಕ್ತ ಕೊಡುಗೆ ನೀಡಿದರು.
ಏಷ್ಯಾಕಪ್, ಮಹಿಳಾ ವಿಶ್ವಕಪ್ನ "ನೋ ಹ್ಯಾಂಡ್ಶೇಕ್' ನಿಯಮವನ್ನು ಪಾಲಿಸದೆ, ಭಾರತ ತಂಡದ ಆಟಗಾರ್ತಿಯರು ಪಂದ್ಯದ ನಂತರ ಪಾಕ್ ಆಟಗಾರ್ತಿಯರಿಗೆ ಹಸ್ತಲಾಘವ ನೀಡಿದರು.