ಜೋಕೊವಿಕ್‌ಗೆ ಶಾಕ್ ನೀಡಿದ 19 ವರ್ಷದ ಫೋನ್ಸೆಕಾ: ಮುಂದಿನ ವರ್ಷ ಜೋಕೋ ಪ್ಯಾರಿಸ್‌ನಲ್ಲಿ ಆಡುವುದು ಡೌಟ್!

ಜೋಕೊವಿಕ್‌ಗೆ ಶಾಕ್ ನೀಡಿದ 19 ವರ್ಷದ ಫೋನ್ಸೆಕಾ
ಜೋಕೊವಿಕ್‌ಗೆ ಶಾಕ್ ನೀಡಿದ 19 ವರ್ಷದ ಫೋನ್ಸೆಕಾ
Published on
ಪ್ಯಾರಿಸ್: ಮುಕ್ತ ಟೆನಿಸ್ ಯುಗದಲ್ಲಿ ಮೊದಲ ಬಾರಿಗೆ ಹಾಲಿ-ಮಾಜಿ ಚಾಂಪಿಯನ್‌ಗಳು ಗ್ರಾಂಡ್ ಸ್ಲಾಂ ಟೂರ್ನಿಯ 4ನೇ ಸುತ್ತಿಗೇರಲು ವಿಲವಾಗಿದ್ದು, ಆವೆಮಣ್ಣಿನ ಅಂಕಣದ ಫ್ರೆಂಚ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗ ಈ ಬಾರಿ ಹೊಸ ಚಾಂಪಿಯನ್ ಉದಯಕ್ಕೆ ಸಾಕ್ಷಿಯಾಗಲಿದೆ. ವಿಶ್ವ ನಂ.1 ಜನ್ನಿಕ್ ಸಿನ್ನರ್, ಮಾಜಿ ಚಾಂಪಿಯನ್‌ಗಳಾದ ಸ್ಟಾನ್ ವಾವ್ರಿಂಕಾ, ಮರಿನ್ ಸಿಲಿಕ್ ಹೊರಬಿದ್ದ ಬೆನ್ನಲ್ಲೇ 24 ಗ್ರಾಂಡ್ ಸ್ಲಾಂ ಒಡೆಯ ನೊವಾಕ್ ಜೋಕೊವಿಕ್ ಸಹ ಮೂರನೇ ಸುತ್ತಿನಲ್ಲಿ ಅಚ್ಚರಿಯ ಸೋಲು ಕಂಡರು. ಇದರೊಂದಿಗೆ ಜೂನ್ 7ಕ್ಕೆ ಪ್ಯಾರಿಸ್‌ನಲ್ಲಿ ಗ್ರಾಂಡ್ ಸ್ಲಾಂ ವಿಜೇತರ ಪಟ್ಟಿಗೆ ಹೊಸ ಆಟಗಾರನೊಬ್ಬ ಸೇರ್ಪಡೆಯಾಗುವುದು ಖಚಿತಗೊಂಡಿದೆ.
ಡೆನ್ಮಾರ್ಕ್ ಕ್ಯಾಸ್ಪರ್ ರುಡ್, ರಷ್ಯಾದ ಆಂಡ್ರೆ ರುಬ್ಲೆವ್, ಅಲೆಕ್ಸಾಂಡರ್ ಜ್ವೆರೇವ್ 4ನೇ ಸುತ್ತಿಗೇರಿದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಯೂಕ್ರೇನ್‌ನ ಎಲೆನಾ ಸ್ವಿಟೋಲಿನಾ, ಜಪಾನ್‌ನ ನವೊಮಿ ಒಸಾಕಾ ಮತ್ತು ವಿಶ್ವ ನಂ. 1 ಅರಿನಾ ಸಬಲೆಂಕಾ ಮುನ್ನಡೆದರು.
.
ಜೋಕೋಗೆ 25ರ ಬರ
ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಗೈರಿನ ಜತೆಗೆ ವಿಶ್ವ ನಂ.1 ಜನ್ನಿಕ್ ಸಿನ್ನರ್ 2ನೇ ಸುತ್ತಿನಲ್ಲಿ ಹೊರಬಿದ್ದ ನಂತರ ದಾಖಲೆಯ 25ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸುವ ಅವಕಾಶ ವೃದ್ಧಿಸಿಕೊಂಡಿದ್ದ ಸೆರ್ಬಿಯಾ ತಾರೆ ನೊವಾಕ್ ಜೋಕೊವಿಕ್ 3ನೇ ಸುತ್ತಿನಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿದ್ದಾರೆ.
2023ರ ಯುಎಸ್ ಓಪನ್‌ನಲ್ಲಿ ಕೊನೆಯದಾಗಿ ಚಾಂಪಿಯನ್ ಎನಿಸಿರುವ 39 ವರ್ಷದ ಜೋಕೊವಿಕ್ ಶುಕ್ರವಾರ ರಾತ್ರಿ ನಡೆದ 3ನೇ ಸುತ್ತಿನಲ್ಲಿ 6-4, 6-4, 3-6, 5-7, 5-7 ಸೆಟ್‌ಗಳ ಕಠಿಣ ಹೋರಾಟದಲ್ಲಿ 19 ವರ್ಷದ ಬ್ರೆಜಿಲ್‌ನ ಜೋವೊ ಫೋನ್ಸೆಕಾ ವಿರುದ್ಧ ಪರಾಭವಗೊಂಡರು. 4 ಗಂಟೆ 53 ನಿಮಿಷಗಳ ಸುದೀರ್ಘ ಹೋರಾಟದಲ್ಲಿ ಆರಂಭಿಕ ಎರಡು ಸೆಟ್‌ಗಳ ಮುನ್ನಡೆಯ ನಡುವೆಯೂ ಜೋಕೊವಿಕ್ ಸೋಲು ಕಂಡ 2ನೇ ದೃಷ್ಟಾಂತ ಇದಾಗಿದೆ. ಜೋಕೋ 2023ರ ಯುಎಸ್ ಓಪನ್ ಬಳಿಕ ಒಂದೂ ಗ್ರಾಂಡ್ ಸ್ಲಾಂ ಗೆಲ್ಲದ ಬರ ಮುಂದುವರಿದಿದೆ. 2008ರಲ್ಲಿ ಜೋಕೋ ತನ್ನ ಚೊಚ್ಚಲ ಗ್ರಾಂಡ್ ಸ್ಲಾಂ ಜಯಿಸಿದಾಗ ಫೋನ್ಸೆಕಾ ಕೇವಲ ಒಂದೂವರೆ ವರ್ಷದ ಮಗುವಾಗಿದ್ದರು.
ಐದನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ 6-6 ಬ್ರೇಕ್ ಪಾಯಿಂಟ್ ಹೊಂದಿದ್ದ ಜೋಕೋ ಎದುರು ಫೋನ್ಸೆಕಾ ಸತತ ಮೂರು ಏಸ್ ಸಿಡಿಸುವ ಮೂಲಕ ಗ್ರಾಂಡ್ ಸ್ಲಾಂನಲ್ಲಿ ಜೋಕೋ ವಿರುದ್ಧ ಗೆದ್ದ ಕಿರಿಯ ಆಟಗಾರ ಎನಿಸಿದರು. ಬಿಸಿಲಿನ ಝಳದಿಂದ ದಣಿದಿದ್ದ ಜೋಕೋ, ಫೋನ್ಸೆಕಾ ವೇಗದ ಸರ್ವ್‌ಗಳಿಗೆ ನಿರುತ್ತರಗೊಂಡರು. ಫೋನ್ಸೆಕಾ, ಪ್ರೇಕ್ಷಕರ ಸಾಲಿನಲ್ಲಿದ್ದ ತನ್ನ ತಾಯಿಯ ಜನ್ಮದಿನಕ್ಕೆ ಗೆಲುವಿನ ಉಡುಗೊರೆ ನೀಡಿದರು. ಫೋನ್ಸೆಕಾ ಈ ಗೆಲುವಿಗೆ ಅರ್ಹರು. ಅವರ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜೋಕೋ, ಮುಂದಿನ ವರ್ಷವೂ ಪ್ಯಾರಿಸ್‌ನಲ್ಲಿ ಆಡುವ ಬಗ್ಗೆ ‘ನನಗೆ ಗೊತ್ತಿಲ್ಲ’ ಎಂದು ಉತ್ತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net