ಕರೊನಾ ವೈರಸ್​ಗೆ ಕ್ರಿಕೆಟ್ ಜಗತ್ತು ತತ್ತರ!: ಕ್ರೀಡಾ ಚಾನಲ್, ಆಟಗಾರರಿಗೂ ಸಂಕಷ್ಟ

cricket 20 mar 20
Published on

ನವದೆಹಲಿ: ಮಾರಕ ಕರೊನಾ ಸೋಂಕಿನಿಂದ ಜಗತ್ತಿನ ಎಲ್ಲ ಕಡೆ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ, ಬಿಸಿಸಿಐ ಸಹಿತ ಎಲ್ಲ ಕ್ರಿಕೆಟ್ ಮಂಡಳಿಗಳು ಮುಂದಿನ ಪರಿಣಾಮಗಳನ್ನು ಎದುರಿಸಲು ಸಜ್ಜಾಗಬೇಕಿದೆ. ಅದುವೇ ಆರ್ಥಿಕ ನಷ್ಟ! ಇತ್ತೀಚೆಗಷ್ಟೇ ಮಹಿಳೆಯರ ಟಿ20 ವಿಶ್ವಕಪ್ ಯಶಸ್ವಿಯಾಗಿ ಮುಗಿದಿದ್ದು, ಐಸಿಸಿಗೆ ಮುಂದಿನ ಟೂರ್ನಿ ಇರುವುದು ಅಕ್ಟೋಬರ್-ನವೆಂಬರ್​ನಲ್ಲಿ (ಪುರುಷರ ಟಿ20 ವಿಶ್ವಕಪ್). ಹೀಗಾಗಿ ಐಸಿಸಿಗೆ ಸದ್ಯ ಯಾವುದೇ ರೀತಿಯ ನಷ್ಟವಿಲ್ಲ. ಆದರೆ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತಿತರ ಎಲ್ಲ ಪ್ರಮುಖ ಕ್ರಿಕೆಟ್ ದೇಶಗಳಲ್ಲಿ ದ್ವಿಪಕ್ಷೀಯ, ದೇಶೀಯ ಮತ್ತು ಟಿ20 ಲೀಗ್ ಟೂರ್ನಿಗಳು ರದ್ದು ಅಥವಾ ಮುಂದೂಡಿಕೆಯಾಗಿರುವುದರಿಂದ ಭಾರಿ ನಷ್ಟವಾಗಿದೆ.

ಹಾಲಿ ವಿತ್ತ ವರ್ಷದ ಆರ್ಥಿಕ ಹಿಂಜರಿತಗಳಿಂದಾಗಿ ಬಿಸಿಸಿಐ ಈಗಾಗಲೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಹುಮಾನ ಮೊತ್ತವನ್ನು ಅರ್ಧಕ್ಕೆ ಇಳಿಸಿದೆ. 51 ಸಾವಿರ ಕೋಟಿ ರೂ. ಬ್ರಾಂಡ್ ಮೌಲ್ಯದ ಐಪಿಎಲ್ ಟೂರ್ನಿ ಈ ವರ್ಷ ನಡೆಯದಿದ್ದರೆ ಬಿಸಿಸಿಐಗೆ ದೊಡ್ಡ ಹೊಡೆತವೇ ಬೀಳಲಿದೆ. ಟೂರ್ನಿಯ ನೇರಪ್ರಸಾರ ಹಕ್ಕು ಪಡೆದುಕೊಂಡಿರುವ ಸ್ಟಾರ್ ಸ್ಪೋರ್ಟ್ಸ್ ಕೂಡ ದೊಡ್ಡ ಮಟ್ಟದ ನಷ್ಟ ಎದುರಿಸಬೇಕಾಗುತ್ತದೆ.

‘ಸದ್ಯ ದೇಶದಲ್ಲಿ ಎಲ್ಲರಿಗೂ ನಷ್ಟವಾಗುತ್ತಿದೆ. ಇಂಥ ಸಮಯಗಳಲ್ಲಿ ಯಾವುದೇ ಆರ್ಥಿಕ ವಲಯದಲ್ಲಿ, ಅತಿ ಹೆಚ್ಚು ಲಾಭದಲ್ಲಿರುವವರೇ ಅತಿ ಹೆಚ್ಚಿನ ನಷ್ಟವನ್ನೂ ಅನುಭವಿಸಬೇಕಾಗುತ್ತದೆ’ ಎಂದು ಸ್ಪೋರ್ಟ್ಸ್  ಪವರ್ ಸಂಸ್ಥೆಯ ಸಹ-ಸ್ಥಾಪಕ ಥಾಮಸ್ ಅಬ್ರಾಹಂ ಅಭಿಪ್ರಾಯಪಟ್ಟಿದ್ದಾರೆ. ಈ ಸಂಸ್ಥೆ ಭಾರತದಲ್ಲಿ ಕ್ರೀಡಾ ಉದ್ಯಮವನ್ನು ವಿಶ್ಲೇಷಣೆ ಮಾಡುವ ಕೆಲಸ ನಿರ್ವಹಿಸುತ್ತದೆ.

ಐಪಿಎಲ್ ಸಮಯದಲ್ಲಿ ಹಲವು ಕಂಪನಿಗಳು ತಮ್ಮ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಯಲ್ಲಿರುತ್ತವೆ. ಯಾಕೆಂದರೆ ಐಪಿಎಲ್ ಸಮಯದಲ್ಲಿ ಹೆಚ್ಚಿನ ಪ್ರಚಾರ ಪಡೆದುಕೊಳ್ಳಲು ಸುಲಭವಾಗುತ್ತದೆ. ಐಪಿಎಲ್ ರದ್ದಾದರೂ, ಉತ್ಪನ್ನ ಬಿಡುಗಡೆ ಮಾಡಬಹುದಾದರೂ, ನಿರೀಕ್ಷಿತ ಪ್ರಚಾರ ಪಡೆದುಕೊಳ್ಳುವುದು ಕಷ್ಟವಾಗುತ್ತದೆ.

ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿ ದಿಢೀರ್ ರದ್ದಾಗಿರುವುದರಿಂದ ಕೂಡ ಬಿಸಿಸಿಐ ಹಾಲಿ ವಿತ್ತ ವರ್ಷದಲ್ಲಿ ಗಳಿಸುವ ಲಾಭದ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಭವಿಷ್ಯದಲ್ಲಿ ಪರಿಸ್ಥಿತಿ ಸುಧಾರಿಸಿದಾಗ ಈ ಸರಣಿಯನ್ನು ಮರುನಿಗದಿ ಮಾಡಲು ಉಭಯ ಮಂಡಳಿಗಳು ಈಗಾಗಲೆ ನಿರ್ಧರಿಸುವುದರಿಂದ, ಮುಂದೊಂದು ದಿನ ಈ ಸರಣಿಯಿಂದ ಗಳಿಸಬಹುದಾಗಿದ್ದ ಲಾಭ ಬಿಸಿಸಿಐ ಖಜಾನೆ ಸೇರುವುದು ನಿಶ್ಚಿತ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ತಿಂಗಳು ಆಸ್ಟ್ರೇಲಿಯಾ- ನ್ಯೂಜಿಲೆಂಡ್ ಏಕದಿನ ಸರಣಿ ರದ್ದುಗೊಂಡಿದ್ದರೆ, ಇಂಗ್ಲೆಂಡ್ ತಂಡದ ಶ್ರೀಲಂಕಾ ಪ್ರವಾಸದ ಟೆಸ್ಟ್ ಸರಣಿ ಮುಂದೂಡಿಕೆಯಾಗಿದೆ. ಬಾಂಗ್ಲಾದೇಶ ತಂಡದ ಪಾಕಿಸ್ತಾನ ಪ್ರವಾಸ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಇದರಿಂದಾಗಿ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳು ನಷ್ಟ ಅನುಭವಿಸುವಂತಾಗಿದೆ.

ಢಾಕಾದಲ್ಲಿ ನಿಗದಿಯಾಗಿದ್ದ ಏಷ್ಯಾ ಇಲೆವೆನ್ ಮತ್ತು ವಿಶ್ವ ಇಲೆವೆನ್ ನಡುವಿನ 2 ಪಂದ್ಯಗಳ ಸರಣಿ ಮುಂದೂಡಿಕೆಯಾಗಿದ್ದರಿಂದ ಬಾಂಗ್ಲಾ ಕ್ರಿಕೆಟ್ ಮಂಡಳಿಗೂ ನಷ್ಟವಾಗಿದೆ.

ಆಸ್ಟ್ರೇಲಿಯಾ ತಂಡ ವರ್ಷಾಂತ್ಯದಲ್ಲಿ ಭಾರತ ತಂಡಕ್ಕೆ ಆತಿಥ್ಯ ವಹಿಸಬೇಕಾಗಿದ್ದು, ಈ ಸರಣಿಯಿಂದ ಬರೋಬ್ಬರಿ 1,300 ಕೋಟಿ ರೂ. ಆದಾಯ ನಿರೀಕ್ಷಿಸುತ್ತಿದೆ. ಒಂದು ವೇಳೆ ಈ ಸರಣಿಯ ವರೆಗೂ ಕರೊನಾ ಕಾಟ ಕಡಿಮೆಯಾಗದಿದ್ದರೆ ಕ್ರಿಕೆಟ್ ಆಸ್ಟ್ರೇಲಿಯಾ ದೊಡ್ಡ ಪ್ರಮಾಣದ ನಷ್ಟ ಅನುಭವಿಸಬೇಕಾಗುತ್ತದೆ.

ಅಂತಾರಾಷ್ಟ್ರೀಯ ಕ್ರಿಕೆಟಿಗರ ಸಂಸ್ಥೆಗಳ ಒಕ್ಕೂಟದ ಮುಖ್ಯಸ್ಥ ಟಾಮ್ ಮಾಫೆಟ್ ಕೂಡ ಹಾಲಿ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿರುವುದು ಈಗಿನ ಅಗತ್ಯವೂ ಆಗಿದೆ ಎಂದಿದ್ದಾರೆ. -ಪಿಟಿಐ/ಏಜೆನ್ಸೀಸ್

ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ಗೂ ಪೆಟ್ಟು?

ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ (ಡಬ್ಲ್ಯುಟಿಸಿ) 2019ರ ಆಗಸ್ಟ್ 1ರಂದು ಆರಂಭವಾಗಿದ್ದು, 2021ರ ಜೂನ್ 14ರವರೆಗೆ ಸಾಗಬೇಕಿದೆ. ಆದರೆ ಹಾಲಿ ಪರಿಸ್ಥಿತಿಯಲ್ಲಿ ಡಬ್ಲ್ಯುಟಿಸಿಯ ಹಲವು ಸರಣಿಗಳಿಗೂ ಹೊಡೆತ ಬೀಳುವ ಲಕ್ಷಣಗಳು ಸ್ಪಷ್ಟವಾಗಿವೆ. ಇದರಿಂದಾಗಿ ಡಬ್ಲ್ಯುಟಿಸಿ ಅಂಕಪಟ್ಟಿಯ ಅಗ್ರ 2 ತಂಡಗಳ ನಡುವೆ 2021ರ ಜೂನ್ 10ರಿಂದ 14ರವರೆಗೆ ಲಾರ್ಡ್ಸ್ ನಲ್ಲಿ ನಡೆಯಬೇಕಿರುವ ಫೈನಲ್ ಪಂದ್ಯ ವಿಳಂಬಗೊಂಡರೂ ಅಚ್ಚರಿ ಇಲ್ಲ. ಸದ್ಯ ಡಬ್ಲ್ಯುಟಿಸಿಯಲ್ಲಿ ಪಾಕಿಸ್ತಾನ-ಬಾಂಗ್ಲಾದೇಶ ಮತ್ತು ಶ್ರೀಲಂಕಾ-ಇಂಗ್ಲೆಂಡ್ ತಂಡಗಳ ಸರಣಿ ಮುಂದೂಡಲ್ಪಟ್ಟಿದೆ. ಇನ್ನು ಜೂನ್​ನಲ್ಲಿ ಇಂಗ್ಲೆಂಡ್-ವೆಸ್ಟ್ ಇಂಡೀಸ್, ಬಾಂಗ್ಲಾದೇಶ-ಆಸ್ಟ್ರೇಲಿಯಾ, ಜುಲೈನಲ್ಲಿ ಶ್ರೀಲಂಕಾ-ಬಾಂಗ್ಲಾದೇಶ, ವೆಸ್ಟ್ ಇಂಡೀಸ್-ದಕ್ಷಿಣ ಆಫ್ರಿಕಾ ಸರಣಿಗಳು ನಿಗದಿಯಾಗಿದ್ದು, ಈ ಸರಣಿಗಳೂ ಮುಂದೂಡಲ್ಪಟ್ಟರೆ ಒಟ್ಟಾರೆ ಡಬ್ಲ್ಯುಟಿಸಿ ವೇಳಾಪಟ್ಟಿಯೇ ಅಸ್ತವ್ಯಸ್ತವಾಗುತ್ತದೆ.

ಕ್ರೀಡಾ ಚಾನಲ್​ಗಳಿಗೂ ದೊಡ್ಡ ಹೊಡೆತ

ಕ್ರೀಡಾ ಜಗತ್ತು ಕರೊನಾದಿಂದ ತತ್ತರಿಸಿದಾಗ ಅದನ್ನೇ ನಂಬಿಕೊಂಡಿರುವ ಕ್ರೀಡಾ ಚಾನಲ್​ಗಳೂ ಅದರ ಪರಿಣಾಮಗಳನ್ನು ಎದುರಿಸಬೇಕಾಗಿದೆ. ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ಮತ್ತು ವಿವಿಧ ಕ್ರೀಡಾಕೂಟಗಳ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದ್ದ ಕ್ರೀಡಾ ಚಾನಲ್​ಗಳು ಸದ್ಯ ಹೈಲೈಟ್ಸ್​ಗಳನ್ನು ಹಾಕುತ್ತ ಖಾಲಿ ಕುಳಿತಿವೆ. ಇದರಿಂದಾಗಿ ಜಾಹೀರಾತುಗಳ ಮೂಲಕ ಆದಾಯವೇ ನಿಂತುಹೋಗಿದ್ದು, ಕ್ರೀಡಾ ಚಟುವಟಿಕೆಗಳ ಸ್ಥಗಿತ ಮುಂದುವರಿದರೆ ಕ್ರೀಡಾ ಚಾನಲ್​ಗಳು ದಿವಾಳಿಯಾಗುವ ಹಂತ ತಲುಪಲಿವೆ.

ಆಟಗಾರರಿಗೂ ನಷ್ಟ!

ಐಪಿಎಲ್ ರದ್ದಾದರೆ ಸಹಜವಾಗಿಯೇ ಆಟಗಾರರಿಗೆ ಕೋಟಿಕೋಟಿ ಲೆಕ್ಕದ ಸಂಭಾವನೆ ಸಿಗುವುದಿಲ್ಲ. ಇದಲ್ಲದೆ ಬಿಸಿಸಿಐ ಅನುಭವಿಸುವ ನಷ್ಟ ಆಟಗಾರರ ಆದಾಯಕ್ಕೂ ಹೊಡೆತ ನೀಡುತ್ತದೆ. ಬಿಸಿಸಿಐ ಆದಾಯ ಕುಸಿದಾಗ ಅದು ತನ್ನ ವಾರ್ಷಿಕ ಆದಾಯದಲ್ಲಿ ಆಟಗಾರರಿಗೆ ನೀಡುವ ಪಾಲಿನ ಪ್ರಮಾಣವೂ ಕಡಿಮೆಯಾಗುತ್ತದೆ.

ದಿ ಹಂಡ್ರೆಡ್ ಅನುಮಾನ

ಯುರೋಪ್​ನಲ್ಲಿ ಪ್ರತಿಷ್ಠಿತ ಯುರೋಕಪ್ ಜತೆಗೆ ವಿವಿಧ ಕ್ಲಬ್ ಫುಟ್​ಬಾಲ್ ಟೂರ್ನಿಗಳು ಮುಂದೂಡಿಕೆಯಾಗಿವೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೊಸದಾಗಿ ಆರಂಭಿಸಲಿರುವ ದಿ ಹಂಡ್ರೆಡ್ (ತಲಾ 100 ಎಸೆತಗಳ ಪಂದ್ಯ) ಟೂರ್ನಿಯ ಬಗ್ಗೆಯೂ ಅನುಮಾನ ಮೂಡಿದೆ. ಟೂರ್ನಿ ಜು. 17ರಂದು ಆರಂಭವಾಗಬೇಕಿದೆ.

ಕರೊನಾದಿಂದ ಎಲ್ಲ ಉದ್ಯಮ ಗಳಿಗೂ ಹೊಡೆತ ಬಿದ್ದಿವೆ. ಕ್ರಿಕೆಟ್ ಕೂಡ ಈ ಅನಿರೀಕ್ಷಿತ ಬೆಳವಣಿಗೆಯಿಂದ ತತ್ತರಿಸಿದೆ. ಇದರಿಂದ ಚೇತರಿಸಿಕೊಳ್ಳ ಬೇಕಾದರೆ ಎಲ್ಲ ಕ್ರಿಕೆಟ್ ಸಂಸ್ಥೆಗಳೂ ಒಗ್ಗೂಡಿ ಕೆಲಸ ಮಾಡಬೇಕಾಗಿರುವುದು ಅಗತ್ಯ. | ಟಾಮ್ ಮೊಫಟ್, ಎಫ್​ಐಸಿಎ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net