ಕ್ರಿಕೆಟ್ ಅಂಪೈರ್​ಗಳಿಗೆ ಸಂಕಷ್ಟ ಕೋವಿಡ್-19 ಅಬ್ಬರಕ್ಕೆ ತತ್ತರ, ನಿರುದ್ಯೋಗಿಗಳಾದ ಸ್ಕೋರರ್​ಗಳು

page 10 8
Published on

ಬೆಂಗಳೂರು: ಕಳೆದ ಎರಡೂ ತಿಂಗಳಿಂದ ಇಡೀ ವಿಶ್ವವನ್ನೇ ಮಹಾಮಾರಿ ಕೋವಿಡ್-19 ತಲ್ಲಣಗೊಳಿಸಿದೆ. ಇದರ ಆರ್ಭಟದ ಎದುರು ಜಾಗತಿಕ ಕ್ರೀಡಾ ಲೋಕವೂ ಸ್ತಬ್ಧಗೊಂಡಿದೆ. ಇದರಿಂದಾಗಿ ಪ್ರತಿಷ್ಠಿತ ಕ್ರೀಡಾಕೂಟಗಳೆಲ್ಲ ಮುಂದೂಡಿಕೆಯಾದರೆ, ಕ್ರೀಡೆ ಯನ್ನೇ ನಂಬಿರುವ ಅದೆಷ್ಟೋ ಜನರ ಜೀವನ ಕೂಡ ಅಷ್ಟೇ ದುಸ್ತರವಾಗಿದೆ. ಕ್ರಿಕೆಟ್ ಅಂಪೈರ್​ಗಳ ಸ್ಥಿತಿಯೂ ಅದೇ ಆಗಿದೆ. ಕ್ರಿಕೆಟಿಗರು ಮೈದಾನದಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿ ಮಿಂಚಿದರೆ, ಅಷ್ಟೇ ಉತ್ತಮವಾದ ತೀರ್ಪಗಳನ್ನು ನೀಡುವ ಮೂಲಕ ಅಂಪೈರ್ ಕೂಡ ಗಮನಸೆಳೆಯುತ್ತಾರೆ.

ಅಂಪೈರಿಂಗ್ ವೃತ್ತಿಯನ್ನೇ ನಂಬಿರುವ ಕರ್ನಾಟಕದ ನೂರಾರು ಅಂಪೈರ್​ಗಳ ಸ್ಥಿತಿ ಇಂದು ಕೇಳುವವರು ಇಲ್ಲದಂತಾಗಿದೆ. ಬೇಸಿಗೆ ಬಂತು ಎಂದರೆ ಕೈತುಂಬಾ ಕೆಲಸ, ಸಂಪಾದನೆ ಹೊಂದಿರುತ್ತಿದ್ದ ಅಂಪೈರ್​ಗಳು ಇಂದು ಬಹುತೇಕ ನಿರುದ್ಯೋಗಿಗಳಾಗಿದ್ದಾರೆ. ಬೆಂಗಳೂರಿನಲ್ಲಿ ಜೀವನ ಕಂಡುಕೊಳ್ಳಲು ಸಾಧ್ಯವಾಗದೇ ಮೂಲ ಊರುಗಳಿಗೆ ವಾಪಸಾಗಿ ಜೀವನ ಸಾಗಿಸುತ್ತಿದ್ದಾರೆ.

ಬೆಂಗಳೂರಿನಲ್ಲಿದ್ದು ಏನು ಮಾಡೋದು?: ಅಂಪೈರ್​ಗಳ ಸ್ಥಿತಿಗತಿ ಕುರಿತು ‘ವಿಜಯವಾಣಿ’ ಯೊಂದಿಗೆ ಮಾತನಾಡಿದ, ಹೆಸರು ಹೇಳಲಿಚ್ಚಿಸದ ಕೆಲ ಅಂಪೈರ್​ಗಳು, ಲಾಕ್​ಡೌನ್ ಘೊಷಿಸಿದ ದಿನವೇ ರಾತ್ರೋರಾತ್ರಿ ಬೆಂಗಳೂರಿನಿಂದ ತವರಿಗೆ ವಾಪಸಾದೆವು. ಮುಂದಿನ ಜೀವನ ಏನು ಎಂದು ತಿಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡರು.

100ಕ್ಕೂ ಹೆಚ್ಚು ಅಂಪೈರ್​ಗಳು, ಸ್ಕೋರರ್​ಗಳ ಸ್ಥಿತಿ ಚಿಂತಾಜನಕವಾಗಿದೆ. ಬೆಂಗಳೂರಿನಲ್ಲಿದ್ದರೆ ದೈನಂದಿನ ಖರ್ಚಿಗೆ ಸಾವಿರಾರು ರೂ. ಬೇಕಾಗುತ್ತದೆ. ಸಂಪಾದನೆ ಇಲ್ಲ ಎಂದ ಮೇಲೆ ಬೆಂಗಳೂರಿನಲ್ಲಿದ್ದು ಏನು ಪ್ರಯೋಜನ ಎಂದು ಮತ್ತೊಬ್ಬ ಅಂಪೈರ್ ಹೇಳಿಕೊಂಡರು.

ಪಂದ್ಯಕ್ಕೆ ಅಂಪೈರ್ಸ್ ಸಂಭಾವನೆ: ಕೆಎಸ್​ಸಿಎ ಲೀಗ್ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸುವ ಅಂಪೈರ್​ಗಳಿಗೆ ಪ್ರತಿ ಪಂದ್ಯಕ್ಕೆ 1,500 ರೂ. ನೀಡಿದರೆ, ಸ್ಕೋರರ್​ಗೆ 1,000 ರೂಪಾಯಿ ನಿಗದಿಪಡಿಸಲಾಗಿದೆ. ಕೆಎಸ್​ಸಿಎ ವಿವಿಧ ಡಿವಿಷನ್​ನಿಂದ ಋತು ಒಂದರಲ್ಲೇ 2 ಸಾವಿರಕ್ಕೂ ಅಧಿಕ ಪಂದ್ಯಗಳು ನಡೆಯುತ್ತವೆ. ಅಂಪೈರ್ ಒಬ್ಬರೂ ತಿಂಗಳಲ್ಲಿ ಕನಿಷ್ಠ 15 ದಿನಗಳ ಕಾರ್ಯ ನಿರ್ವಹಿಸುವ ಅವಕಾಶ ಲಭಿಸುತ್ತದೆ. ಇದರಿಂದ ಪ್ರತಿ ಅಂಪೈರ್ ಹಾಗೂ ಸ್ಕೋರರ್​ಗೆ ತಿಂಗಳಿಗೆ 15ರಿಂದ 23 ಸಾವಿರ ರೂ.ವರೆಗೆ ಸಂಪಾದನೆ ಇರುತ್ತದೆ. ಇದಲ್ಲದೆ, ಕೆಲ ಖಾಸಗಿ ವಲಯ ಮಟ್ಟದಲ್ಲಿ ನಡೆಯಲಿರುವ ಪಂದ್ಯಗಳಿಗೂ ಕೆಲ ಅಂಪೈರ್​ಗಳಿಗೆ ಆಹ್ವಾನ ಇರುತ್ತದೆ. ಆದರೆ, ಈ ಬಾರಿ ಅದೆಲ್ಲದಕ್ಕೂ ಕೋವಿಡ್-19 ಕುತ್ತು ತಂದಿದೆ.

ಬಂತು ಕೋವಿಡ್ ನಿಲ್ತು ಸಂಪಾದನೆ! ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕೆಎಸ್​ಸಿಎ ವತಿಯಿಂದ ಲೀಗ್ ಪಂದ್ಯಗಳು ಹೆಚ್ಚಾಗಿ ಇಲ್ಲದಿದ್ದರೂ ಖಾಸಗಿಯಾಗಿ ಕೋಚಿಂಗ್, ಕಾರ್ಪೇರೇಟ್ ಟೂರ್ನಿಗಳು, ತರಬೇತಿ ಶಿಬಿರಗಳು ಕಾಯಂ ಆಗಿರುತ್ತಿದ್ದವು, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಕನಿಷ್ಠ 1 ಲಕ್ಷ ರೂ. ಸಂಪಾದಿ ಸುವ ಅವಕಾಶವಿರುತ್ತದೆ. ಜತೆಗೆ ಕೆಲ ಅಂಪೈರ್​ಗಳು ಐಪಿಎಲ್​ನಲ್ಲೂ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಎಲ್ಲ ಸ್ತಬ್ಧ ಆಗಿರುವುದರಿಂದ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಶಾಲಾ ಶುಲ್ಕ ಕಟ್ಟುವುದು ಕಷ್ಟವಾಗಿದೆ.

| ಡಿ.ಪಿ. ರಘುನಾಥ್​

ಕರೊನಾದಿಂದಾಗಿ ತಿಂಗಳ ಸಭೆ ಕೂಡ ಆಗಿಲ್ಲ. ಸದಸ್ಯರೆಲ್ಲರೂ ರ್ಚಚಿಸಿದ ಬಳಿಕ ಒಂದು ಡ್ರಾಫ್ಟ್ ರಚಿಸಿ, ಕೆಎಸ್​ಸಿಎಗೆ ಮನವಿ ಸಲ್ಲಿಸುವ ಯೋಚನೆ ಯಿದೆ. ಲೋನ್ ಮಾದರಿಯಲ್ಲಿ ಕಷ್ಟದಲ್ಲಿರುವ ಅಂಪೈರ್​ಗಳಿಗೆ ಹಣ ನೀಡುವ ಯೋಚನೆ ಇದೆ. | ವಿವೇಕಾನಂದ ಕಿಣಿ ಅಧ್ಯಕ್ಷರು, ಕರ್ನಾಟಕ ಕ್ರಿಕೆಟ್ ಅಂಪೈರ್ಸ್ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net