

ಸೌಥಾಂಪ್ಟನ್: ಕರೊನಾ ವೈರಸ್ ಭೀತಿಯ ನಡುವೆ ನಾಡಿನ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಗೆ ಬುಧವಾರ ಏಜಿಯಸ್ ಬೌಲ್ ಮೈದಾನದಲ್ಲಿ ಚಾಲನೆ ಸಿಗಲಿದೆ. ಈ ಮೂಲಕ 117 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭ ಕಾಣಲಿದೆ. ಭಾರತ ಸಹಿತ ವಿಶ್ವದೆಲ್ಲೆಡೆ ಕ್ರಿಕೆಟ್ ಚಟುವಟಿಕೆ ಸ್ತಬ್ಧಗೊಂಡಿರುವ ನಡುವೆ ಕ್ರಿಕೆಟ್ ಜನಕರ ನಾಡು ಆಟಕ್ಕೆ ಸಜ್ಜಾಗಿದೆ. ಇಷ್ಟು ದಿನ ಹಳೆಯ ಪಂದ್ಯಗಳ ಹೈಲೈಟ್ಸ್ ನೋಡಿ ಬೇಸತ್ತಿರುವ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೆ ನೇರಪ್ರಸಾರ ನೋಡುವ ಅವಕಾಶ ಲಭಿಸಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿ ಯನ್ಷಿಪ್ನ ಭಾಗವಾಗಿರುವ 3 ಪಂದ್ಯಗಳ ಟೆಸ್ಟ್ ಸರಣಿ ‘ವಿಸ್ಡನ್ ಟ್ರೋಫಿ’ ಉಭಯ ತಂಡಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಕರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸುವ ಸಲುವಾಗಿ ಈ ಸರಣಿಗೆ ‘ರೈಸ್ ದಿ ಬ್ಯಾಟ್’ ಎಂದೂ ಹೆಸರಿಡಲಾಗಿದೆ. ಅಲ್ಲದೆ ಜನಾಂಗೀಯ ಸಮಾನತೆಯನ್ನು ಬೆಂಬಲಿಸುವ ಸಲುವಾಗಿ ಉಭಯ ತಂಡಗಳ ಆಟಗಾರರು ‘ಬ್ಲಾ್ಯಕ್ ಲೈವ್ಸ್ ಮ್ಯಾಟರ್’ ಲಾಂಛನದ ಜೆರ್ಸಿ ಧರಿಸಿ ಆಡಲಿದ್ದಾರೆ.
ಹೊಸ ನಿಯಮಗಳು ಪ್ರೇಕ್ಷಕರಿಲ್ಲ, ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ಕರೊನಾ ಲಕ್ಷಣವಿರುವ ಆಟಗಾರನಿಗೆ ಬದಲಿ ಆಟಗಾರ ಚೆಂಡಿಗೆ ಎಂಜಲು ಹಚ್ಚಿದರೆ 5 ರನ್ ದಂಡ ತಟಸ್ಥವಲ್ಲ, ಸ್ಥಳೀಯ ಅಂಪೈರ್ ಬಳಕೆ ಪ್ರತಿ ಇನಿಂಗ್ಸ್ಗೆ ಹೆಚ್ಚುವರಿ ಡಿಆರ್ಎಸ್ ಸಾಮಾಜಿಕ ಅಂತರದ ಸಂಭ್ರಮಾಚರಣೆ ಪಂದ್ಯದ ವೇಳೆ ಯಾರೂ ಜೈವಿಕ ಸುರಕ್ಷೆಯಿಂದ ಹೊರಗೆ ಹೋಗುವಂತಿಲ್ಲ,
ವಿಶ್ವದ ಗಮನ ಸೆಳೆಯಲಿರುವ ಸರಣಿ ಇದಾಗಿದ್ದು, ಪ್ರೇಕ್ಷಕ ರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಬರೀ ಆಟಗಾರರಷ್ಟೇ ಅಲ್ಲದೆ, ಅಂಪೈರ್, ರೆಫ್ರಿ ಸಹಿತ ಪಂದ್ಯದ ಅಧಿಕಾರಿಗಳು, ಇತರ ಸಹಾಯಕರು, ಕ್ರೀಡಾಂಗಣದ ಸಿಬ್ಬಂದಿ, ನೇರಪ್ರಸಾರ ವಾಹಿನಿ ಸಿಬ್ಬಂದಿ ಮತ್ತು ಪತ್ರಕರ್ತರು ಜೈವಿಕ ಸುರಕ್ಷಾ ವಾತಾವರಣದಲ್ಲಿದ್ದಾರೆ. ಒಟ್ಟಾರೆ ದಾಖಲೆ ಗಮನಿಸಿದಾಗ ವಿಂಡೀಸ್ ಮೇಲುಗೈ ಸಾಧಿಸಿದ್ದರೂ, ಅದು ಕೆರಿಬಿಯನ್ ಕ್ರಿಕೆಟ್ನ ಗತವೈಭವದ ದಿನಗಳ ಸಾಧನೆಯಾಗಿದೆ. ಇಂಗ್ಲೆಂಡ್ ಪ್ರವಾಸದ ಕಳೆದ 6 ಟೆಸ್ಟ್ ಸರಣಿಗಳಲ್ಲೂ ವಿಂಡೀಸ್ ಸೋಲು ಕಂಡಿದೆ.
ಇಂಗ್ಲೆಂಡ್ಗೆ ಹೊಸ ನಾಯಕ: ನಾಯಕ ಜೋ ರೂಟ್ 2ನೇ ಮಗುವಿನ ನಿರೀಕ್ಷೆಯಲ್ಲಿ ಬಿಡುವು ಪಡೆದಿರುವುದರಿಂದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ಇಂಗ್ಲೆಂಡ್ನ 81ನೇ ಟೆಸ್ಟ್ ನಾಯಕರೆನಿಸಿದ್ದಾರೆ. ವಿಂಡೀಸ್ ಯುವ ತಂಡವನ್ನು ಜೇಸನ್ ಹೋಲ್ಡರ್ ಮುನ್ನಡೆಸಲಿದ್ದಾರೆ.
ಏನಿದು ಜೈವಿಕ-ಸುರಕ್ಷಾ ವಾತಾವರಣ?: ಕ್ರಿಕೆಟ್ ಪುನರಾರಂಭದ ಸುದ್ದಿ ಕೇಳಿದಾಗ ಕ್ರಿಕೆಟ್ ಜನಕರ ನಾಡಿನಲ್ಲಿ ಕರೊನಾ ಸೋಂಕು ನಿವಾರಣೆಯಾಯಿತೇ ಎಂಬ ಪ್ರಶ್ನೆ ಸಹಜ. ಬ್ರಿಟನ್ನಲ್ಲಿ 3 ಲಕ್ಷದ ಸನಿಹ ಮತ್ತು ಇಂಗ್ಲೆಂಡ್ನಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಕರೊನಾ ಪ್ರಕರಣಗಳಿರುವ ನಡುವೆಯೂ ಈ ಕ್ರಿಕೆಟ್ ಸರಣಿಗೆ ವೇದಿಕೆಯಾಗಿರುವುದು ಜೈವಿಕ-ಸುರಕ್ಷಾ ವಾತಾವರಣ. ಕರೊನಾದಂಥ ಮಹಾಮಾರಿ ಸೋಂಕು ಅಂಟಿಕೊಳ್ಳುವುದು ಅಥವಾ ಹರಡುವುದನ್ನು ತಡೆಗಟ್ಟಲು ಕೈಗೊಳ್ಳುವ ಸೂಕ್ತ ಕ್ರಮವೇ ಜೈವಿಕ-ಸುರಕ್ಷೆ. ಸೋಂಕು ಹರಡುವ ಅಪಾಯವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡುವುದೇ ಇದರ ಉದ್ದೇಶ. ಇದಕ್ಕಾಗಿ ಟೆಸ್ಟ್ ಸರಣಿಗೆ ಸಂಬಂಧಿತ ಎಲ್ಲ ವ್ಯಕ್ತಿಗಳನ್ನೂ ನಿರ್ದಿಷ್ಟ ಸ್ಥಳದಲ್ಲಿ ನಿರ್ಬಂಧಿಸಲಾಗಿದ್ದು, ಕರೊನಾ ಪರೀಕ್ಷೆಗಳನ್ನೂ ನಡೆಸಲಾಗಿದೆ. ಇನ್ನು ಪಂದ್ಯ-ಸರಣಿ ಮುಗಿಯುವವರೆಗೆ ಯಾರೂ ಹೊರಹೋಗುವಂತಿಲ್ಲ. ಹೊರಗಿನಿಂದ ಯಾರೂ ಒಳಬರುವಂತಿಲ್ಲ. ಎಲ್ಲರ ಚಟುವಟಿಕೆ ನಿರ್ಬಂಧಿಸಲ್ಪಟ್ಟಿವೆ.
ಕ್ರಿಕೆಟ್ಗೆ ಬ್ರೇಕ್ ಮೊದಲಲ್ಲ: ಮಾರ್ಚ್ 13ರಂದು ಸಿಡ್ನಿಯಲ್ಲಿ ನಡೆದ ಆಸೀಸ್-ಕಿವೀಸ್ ಏಕದಿನ ಪಂದ್ಯದ 117 ದಿನಗಳ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯಲಿದೆ. ಆದರೆ ಇದು ಕ್ರಿಕೆಟ್ಗೆ ಬಿದ್ದಿರುವ ಸುದೀರ್ಘ ಬ್ರೇಕ್ ಅಲ್ಲ. ಹಿಂದೆ ಮಹಾಯುದ್ಧದ ದಿನಗಳಲ್ಲಿ ವರ್ಷಗಳ ಕಾಲ ಕ್ರಿಕೆಟ್ಗೆ ಕಡಿವಾಣ ಬಿದ್ದಿತ್ತು. ಮೊದಲ ಮಹಾಯುದ್ಧದಿಂದಾಗಿ 1914ರಿಂದ 1920ರವರೆಗೆ 6 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಪೂರ್ಣ ಸ್ಥಗಿತಗೊಂಡಿತ್ತು. ನಂತರ 2ನೇ ಮಹಾಯುದ್ಧದ ಸಮಯದಲ್ಲಿ 1939ರ ಆಗಸ್ಟ್ನಿಂದ 1946ರ ಮಾರ್ಚ್ವರೆಗೆ ಸುಮಾರು 7 ವರ್ಷಗಳ ಕಾಲ ಕ್ರಿಕೆಟ್ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿತ್ತು.