

ನವದೆಹಲಿ: ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ಅಹರ್ನಿಶಿ ಟೆಸ್ಟ್ ಪಂದ್ಯ ಆಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಯಾವುದೇ ಸ್ಥಳದಲ್ಲಿ ಬೇಕಾದರೂ ಅಹರ್ನಿಶಿ ಟೆಸ್ಟ್ ಆಡಲು ತಂಡ ಸಿದ್ಧವಿರುವುದಾಗಿ ತಿಳಿಸಿದ್ದರು. ‘ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯ ಆಡಲಿದೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ಶೀಘ್ರದಲ್ಲೇ ಮಾಡಲಾಗುವುದು’ ಎಂದು ಗಂಗೂಲಿ ಭಾನುವಾರ ತಿಳಿಸಿದ್ದಾರೆ.
ಕಳೆದ ನವೆಂಬರ್ನಲ್ಲಿ ಕೋಲ್ಕತದ ಈಡನ್ ಗಾರ್ಡನ್ಸ್ನಲ್ಲಿ ಟೀಮ್ ಇಂಡಿಯಾ ತನ್ನ ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯವಾಡಿತ್ತು. ಎದುರಾಳಿ ಬಾಂಗ್ಲಾದೇಶ ತಂಡದಿಂದ ಸಣ್ಣ ಪ್ರತಿರೋಧವನ್ನೂ ಎದುರಿಸದೆ ಭಾರತ ಸರಳವಾಗಿ ಗೆಲುವು ಸಾಧಿಸಿತ್ತು. ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಯಾವುದೇ ಸ್ಥಳದಲ್ಲಿ ಅಹರ್ನಿಶಿ ಪಂದ್ಯವಾಡಲು ಸಿದ್ಧ ಎಂದು ಹೇಳಿದ್ದರು. ‘ಆಸ್ಟ್ರೇಲಿಯಾದಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯದ ಸವಾಲಿಗೆ ಸಿದ್ಧವಾಗಿದ್ದೇವೆ. ಅದು ಗಾಬಾ, ಪರ್ತ್.. ಎಲ್ಲೇ ಆಗಲು ನಮಗೆ ಸಮಸ್ಯೆ ಇಲ್ಲ. ಇದು ಟೆಸ್ಟ್ ಸರಣಿಯ ವಿಶೇಷ ಪಂದ್ಯ. ಆಸೀಸ್ ನೆಲದಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯವಾಡಲು ನಾವು ಮುಕ್ತವಾಗಿದ್ದೇವೆ’ ಎಂದು ಕೊಹ್ಲಿ ಹೇಳಿದ್ದರು.
2018-19ರ ಪ್ರವಾಸದ ವೇಳೆ ಅಡಿಲೇಡ್ನಲ್ಲಿ ಅಹರ್ನಿಶಿ ಪಂದ್ಯವಾಡಲು ಆಸೀಸ್ ಕ್ರಿಕೆಟ್ ಮಂಡಳಿ ಪ್ರಸ್ತಾಪವಿಟ್ಟಿದ್ದಾಗ ಭಾರತ ತಿರಸ್ಕರಿಸಿತ್ತು. ಅಹರ್ನಿಶಿ ಪಂದ್ಯವಾಡಿದ ಅನುಭವ ಇಲ್ಲದ ಕಾರಣ ಆಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
2021ರಲ್ಲಿ ಇಂಗ್ಲೆಂಡ್ ವಿರುದ್ಧ ಮೊಟೆರಾದಲ್ಲಿ ಡೇ-ನೈಟ್ ಟೆಸ್ಟ್
2021ರ ಜನವರಿ-ಫೆಬ್ರವರಿಯಲ್ಲಿ ತವರಿನ ಇಂಗ್ಲೆಂಡ್ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಪಂದ್ಯ ಅಹರ್ನಿಶಿಯಾಗಿರಲಿದೆ ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ. ಈ ಅಹರ್ನಿಶಿ ಪಂದ್ಯ ಅಹ್ಮದಾಬಾದ್ನ ಮೊಟೆರಾದಲ್ಲಿ ನಿರ್ಮಾಣ ಗೊಂಡಿರುವ ವಿಶ್ವದ ಅತಿದೊಡ್ಡ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ. ತವರಿನ ಪ್ರತಿ ಸರಣಿಯಲ್ಲೂ ತಲಾ ಒಂದು ಅಹರ್ನಿಶಿ ಟೆಸ್ಟ್ ಆಡಲು ಮಂಡಳಿ ಪ್ರಯತ್ನಿಸಲಿದೆ ಎಂದು ಗಂಗೂಲಿ ತಿಳಿಸಿದ್ದಾರೆ.
ಐಪಿಎಲ್ ಬಳಿಕ ಲಂಕಾ ಸವಾಲು
ಐಪಿಎಲ್ ಟೂರ್ನಿಯ ಬಳಿಕ ಭಾರತ ತಂಡ ಶ್ರೀಲಂಕಾ ಪ್ರವಾಸ ಮಾಡಲಿದ್ದು, 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಅಡಿಲೇಡ್/ಪರ್ತ್ನಲ್ಲಿ ಪಂದ್ಯ?
ಟೆಸ್ಟ್ ಕ್ರಿಕೆಟ್ನ ಪ್ರಸ್ತುತತೆ ಉಳಿಸಿಕೊಳ್ಳುವ ಮಾರ್ಗವಾಗಿ ಅಹರ್ನಿಶಿ ಟೆಸ್ಟ್ ಪಂದ್ಯ ಕಂಡಿದೆ. ಜನವರಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಮಾಡಿದ್ದ ವೇಳೆ ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕಾರಿಗಳು ಹಾಗೂ ಬಿಸಿಸಿಐ ಅಧಿಕಾರಿಗಳ ನಡುವೆ ಅಹರ್ನಿಶಿ ಟೆಸ್ಟ್ ಕುರಿತಾಗಿ ಮಾತುಕತೆ ನಡೆದಿತ್ತು. ಅಡಿಲೇಡ್ ಅಥವಾ ಪರ್ತ್ನಲ್ಲಿ ಭಾರತ-ಆಸೀಸ್ ತಂಡಗಳು ಅಹರ್ನಿಶಿ ಪಂದ್ಯವಾಡುವ ಸಾಧ್ಯತೆ ಇದೆ. ಇವೆರಡು ಸ್ಥಳಗಳಲ್ಲಿ ಡೇ-ನೈಟ್ ಪಂದ್ಯ ನಡೆಸುವ ಸಮಯ ಭಾರತದ ಟಿವಿ ವೀಕ್ಷಕರಿಗೆ ಅನುಕೂಲಕರವೆನಿಸಲಿದೆ.