ಮುಂಬರುವ ದೇಶೀಯ ಕ್ರಿಕೆಟ್ ಋತುವಿಗೂ ಅಡಚಣೆ? ಕರೊನಾದಿಂದಾಗಿ ಹೆಚ್ಚಾದ ಕಳವಳ; 2020-21ರ ಸಾಲಿನ ಟೂರ್ನಿಗಳು ಆಗಸ್ಟ್​ನಲ್ಲಿ ಆರಂಭವಾಗುವುದು ಡೌಟ್

page 10 6
Published on

ನವದೆಹಲಿ: ಕರೊನಾ ಮಹಾಮಾರಿಯಿಂದಾಗಿ ಕಳೆದ ದೇಶೀಯ ಕ್ರಿಕೆಟ್ ಋತು ಅಕಾಲಿಕವಾಗಿ ಮುಕ್ತಾಯ ಗೊಂಡಿದ್ದರೆ, ಆಗಸ್ಟ್​ನಲ್ಲಿ ಶುರುವಾಗಲಿರುವ ಮುಂಬರುವ ದೇಶೀಯ ಕ್ರಿಕೆಟ್ ಋತುವಿಗೂ ಅಡಚಣೆ ಎದುರಾಗುವ ಭೀತಿ ಇದೆ. 2020-21ರ ದೇಶೀಯ ಕ್ರಿಕೆಟ್ ಋತುವಿಗೆ ಯಾವುದೇ ಮೀಸಲು ಯೋಜನೆಯನ್ನು ಸಿದ್ಧಪಡಿಸಿಲ್ಲ ಎಂದು ಬಿಸಿಸಿಐ ಕ್ರಿಕೆಟ್ ವ್ಯವಹಾರಗಳ ಪ್ರಧಾನ ವ್ಯವಸ್ಥಾಪಕ ಸಾಬಾ ಕರೀಂ ಹೇಳಿದ್ದಾರೆ. ಆದರೆ, ಕರೊನಾ ಭೀತಿಯ ನಡುವೆಯೂ ಮುಂಬರುವ ಋತುವಿನಲ್ಲಿ ಸಾಧ್ಯವಾದಷ್ಟು ಪಂದ್ಯಗಳನ್ನು ನಡೆಸಲು ಪ್ರಯತ್ನಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇಂಗ್ಲೆಂಡ್​ನಲ್ಲಿ ಈಗಾಗಲೆ ಹೊಸ ದೇಶೀಯ ಕ್ರಿಕೆಟ್ ಋತು ಜುಲೈ 1ರವರೆಗೂ ಸ್ಥಗಿತಗೊಂಡಿದೆ. ವಿಶ್ವದ ಎಲ್ಲೆಡೆ ಕ್ರಿಕೆಟ್ ಮಾತ್ರವಲ್ಲದೆ ಎಲ್ಲ ಕ್ರೀಡಾ ಚಟುವಟಿಕೆಗಳು ಈಗಾಗಲೆ ಸ್ತಬ್ಧಗೊಂಡಿವೆ. ‘ಮುಂದಿನ ದೇಶೀಯ ಕ್ರಿಕೆಟ್ ಋತು ಆರಂಭವಾಗಲಿರುವ ಆಗಸ್ಟ್​ವರೆಗೆ ನಮಗಿನ್ನೂ ಸಾಕಷ್ಟು ಸಮಯವಿದೆ. ಪ್ರತಿ ತಿಂಗಳಿನಿಂದ ತಿಂಗಳಿಗೆ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ’ ಎಂದು ಸಾಬಾ ಕರೀಂ ತಿಳಿಸಿದ್ದಾರೆ. ಕಳೆದ 2019-20ರ ಋತು ಆಗಸ್ಟ್ ನಲ್ಲಿ ದುಲೀಪ್ ಟ್ರೋಫಿಯೊಂದಿಗೆ ಶುರುವಾಗಿತ್ತು. ಮಾರ್ಚ್​ನಲ್ಲಿ ರಣಜಿ ಟ್ರೋಫಿಯೊಂದಿಗೆ ಋತುವಿಗೆ ಅಕಾಲಿಕ ತೆರೆ ಬಿದ್ದಿತ್ತು. ರಣಜಿ ಬಳಿಕ ನಡೆಯಬೇಕಾಗಿದ್ದ ಇರಾನಿ ಕಪ್ ಪಂದ್ಯ ರದ್ದುಗೊಂಡಿತ್ತು. ಭಾರತದಲ್ಲಿ ಕರೊನಾ ಭೀತಿ ಆಗಷ್ಟೇ ಶುರುವಾಗಿದ್ದ ನಡುವೆ ರಣಜಿ

ಫೈನಲ್​ನ ಕೊನೆಯ ದಿನದಾಟ ಪ್ರೇಕ್ಷಕರಿಲ್ಲದೆ ನಡೆದಿತ್ತು. 4 ದಿನಗಳ ಬಳಿಕ ರಣಜಿ ಚಾಂಪಿಯನ್ ಸೌರಾಷ್ಟ್ರ ಮತ್ತು ಶೇಷ ಭಾರತ ತಂಡಗಳ ನಡುವೆ ಈ ಪಂದ್ಯ ನಡೆಯಬೇಕಾಗಿತ್ತು. ಏಪ್ರಿಲ್-ಮೇನಲ್ಲಿ ನಡೆಯ

ಬೇಕಾಗಿದ್ದ ಐಪಿಎಲ್ 13ನೇ ಆವೃತ್ತಿ ಸದ್ಯ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದ್ದು, ಸೆಪ್ಟೆಂಬರ್​ನಲ್ಲಿ ಮರುನಿಗದಿಯಾಗುವ ಸಾಧ್ಯತೆ ಇದೆ. ಇದರಿಂದ ದೇಶೀಯ ಋತು ಮುಂದೂಡಿಕೆಯಾಗುವುದು ನಿಶ್ಚಿತ ವೆನಿಸಿದೆ. ಯಾಕೆಂದರೆ ಐಪಿಎಲ್ ಸಮಯದಲ್ಲಿ ಯಾವುದೇ ದೇಶೀಯ ಟೂರ್ನಿಗಳಿರಬಾರದು ಎಂಬುದು ಬಿಸಿಸಿಐ ರೂಪಿಸಿಕೊಂಡಿರುವ ನಿಯಮವಾಗಿದೆ.

ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಬಿಸಿಸಿಐ, ಪುರುಷರ ಮತ್ತು ಮಹಿಳಾ ವಿಭಾಗದ ಎಲ್ಲ ವಯೋಮಿತಿ ವಿಭಾಗಗಳಿಂದ ಒಟ್ಟು 2,035 ಪಂದ್ಯಗಳನ್ನು ಆಯೋಜಿಸಿತ್ತು. ಈ ಪೈಕಿ 470 ಪಂದ್ಯಗಳು ಸೀನಿಯರ್ ಪುರುಷರ ವಿಭಾಗದ್ದಾಗಿದೆ. 2018ರಲ್ಲಿ 9 ಹೊಸ ತಂಡಗಳ ಸೇರ್ಪಡೆಯಾಗಿದ್ದರಿಂದ ಪಂದ್ಯಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಂಡಿದೆ.

ಸಾಮಾನ್ಯವಾಗಿ ದೇಶೀಯ ಕ್ರಿಕೆಟ್ ಋತುವಿಗೆ ಮಳೆ ಮುಂತಾದ ವಾತಾವರಣದ ಸವಾಲುಗಳು ಎದುರಾಗುತ್ತಿದ್ದವು. ಈ ಬಾರಿ ಕರೊನಾದಿಂದಾಗಿ ಹೊಸ ರೀತಿಯ ಸವಾಲು ಎದುರಾಗಿದ್ದು, ದೇಶೀಯ ಕ್ರಿಕೆಟ್ ಋತುವನ್ನು ವಿಸ್ತರಿಸುವುದು ಸೇರಿದಂತೆ ಎಲ್ಲ ರೀತಿಯ ಬದಲಾವಣೆಗಳಿಗೂ ಸಜ್ಜಾಗಿದ್ದೇವೆ ಎಂದು ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಕರೀಂ ತಿಳಿಸಿದ್ದಾರೆ.

ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ ಟೂರ್ನಿಗಳ ಸಂಘರ್ಷದ ಬಗ್ಗೆ ಈಗಲೇ ಏನನ್ನೂ ಹೇಳಲಾಗದು. ಈ ಪರಿಸ್ಥಿತಿಯಿಂದ ಎಷ್ಟು ಬೇಗ ಮೇಲೆದ್ದು ಬರಲಿದ್ದೇವೆ ಎಂಬುದು ಎಲ್ಲವನ್ನೂ ಅವಲಂಬಿಸಿದೆ. ಈಗ ಎಲ್ಲರೂ ಸುರಕ್ಷಿತವಾಗಿ ಇರುವುದೇ ಮುಖ್ಯ. ಕ್ರಮೇಣವಾಗಿ ಎಲ್ಲವೂ ಪುನರಾರಂಭವಾಗಲಿದೆ ಎಂಬ ಆಶಾವಾದವಿದೆ. | ಸಾಬಾ ಕರೀಂ ಬಿಸಿಸಿಐ ಪ್ರಧಾನ ವ್ಯವಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net