ಕ್ರಿಕೆಟ್​ ಪ್ರೇಮಿಗಳಿಗೆ ತಪ್ಪಿತು ಕೊನೇ ಬಾರಿ ಕೊಹ್ಲಿ-ಆಂಡರ್​ಸನ್ ಮುಖಾಮುಖಿ ನೋಡುವ ಅವಕಾಶ!

kohli web
Published on

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ಹಾಗೂ ಮಾಜಿ ನಾಯಕ ವಿರಾಟ್​ ಕೊಹ್ಲಿ ವೈಯಕ್ತಿಕ ಕಾರಣಗಳಿಂದಾಗಿ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಕೊನೇ 3 ಟೆಸ್ಟ್​ ಪಂದ್ಯಗಳಿಂದಲೂ ಹಿಂದೆ ಸರಿದಿದ್ದಾರೆ. ಇದರೊಂದಿಗೆ ಅವರು ಸಂಪೂರ್ಣ ಸರಣಿಯಿಂದಲೇ ಹೊರಗುಳಿದಂತಾಗಿದೆ. ಇದರೊಂದಿಗೆ ಇಂಗ್ಲೆಂಡ್​ನ ಅನುಭವಿ ವೇಗಿ ಜೇಮ್ಸ್​ ಆಂಡರ್​ಸನ್​ ಜತೆಗಿನ ವಿರಾಟ್​ ಕೊಹ್ಲಿ ಅವರ ಬಹುತೇಕ ಕೊನೇ ಮುಖಾಮುಖಿಯೂ ತಪ್ಪಿದಂತಾಗಿದೆ.

41 ವರ್ಷದ ಆಂಡರ್​ಸನ್​ ಮತ್ತು ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಈ ಹಿಂದೆ 36 ಇನಿಂಗ್ಸ್​ಗಳಲ್ಲಿ ಮುಖಾಮುಖಿ ಆಗಿದ್ದಾರೆ. ಆಂಡರ್​ಸನ್​ರ 710 ಎಸೆತ ಎದುರಿಸಿರುವ ಕೊಹ್ಲಿ 305 ರನ್​ ಗಳಿಸಿದ್ದಾರೆ ಮತ್ತು 7 ಬಾರಿ ಅವರಿಗೆ ವಿಕೆಟ್​ ಒಪ್ಪಿಸಿದ್ದಾರೆ. ಈ ಪೈಕಿ 2016ರ ನಂತರದಲ್ಲಿ ಕೊಹ್ಲಿ 2 ಬಾರಿ ಮಾತ್ರ ಆಂಡರ್​ಸನ್​ಗೆ ವಿಕೆಟ್​ ಒಪ್ಪಿಸಿದ್ದರು. ಹೀಗಾಗಿ ಈ ಸಲದ ಮುಖಾಮುಖಿಯ ಬಗ್ಗೆ ಕ್ರಿಕೆಟ್​ ಪ್ರೇಮಿಗಳು ತೀವ್ರ ಕುತೂಹಲವಿಟ್ಟುಕೊಂಡಿದ್ದರು. ಕ್ರಿಕೆಟ್​ ಪ್ರೇಮಿಗಳು ಈಗ ಕೊಹ್ಲಿ ಗೈರಿನಿಂದ ನಿರಾಸೆ ಅನುಭವಿಸುವಂತಾಗಿದೆ.

ವೈಯಕ್ತಿಕ ಕಾರಣ ನೀಡಿ ಸರಣಿಯ ಮೊದಲ 2 ಟೆಸ್ಟ್​ಗಳಿಂದ ಹೊರಗುಳಿದಿದ್ದ ಕೊಹ್ಲಿ, ಸರಣಿಯ ಉಳಿದ ಪಂದ್ಯಗಳಲ್ಲೂ ಆಡುವುದಿಲ್ಲ. ಅವರ ಈ ನಿರ್ಧಾರವನ್ನು ಮಂಡಳಿ ಗೌರವಿಸುತ್ತದೆ ಮತ್ತು ಅವರಿಗೆ ಬೆಂಬಲ ನೀಡುತ್ತದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಕೌಟುಂಬಿಕ ಸಮಸ್ಯೆಯಿಂದಾಗಿ ಕೊಹ್ಲಿ ಸದ್ಯ ವಿದೇಶದಲ್ಲಿದ್ದಾರೆ. ಅವರೊಂದು ಗಂಭೀರ ವೈಯಕ್ತಿಕ ಸಮಸ್ಯೆಯಲ್ಲಿದ್ದಾರೆ ಎನ್ನಲಾಗಿದೆ.

"ಕೊಹ್ಲಿ ಸರಣಿಯಲ್ಲಿ ಆಡಲು ಲಭ್ಯರಾಗುವ ಬಗ್ಗೆ ಆಯ್ಕೆ ಸಮಿತಿ ಮೊದಲೇ ಅನುಮಾನ ಹೊಂದಿತ್ತು. ಅದಕ್ಕೆ ತಕ್ಕಂತೆ ತಂಡ ಸಂಯೋಜನೆಗಳನ್ನು ರೂಪಿಸಿತ್ತು. ಕೊಹ್ಲಿ ಕುಟುಂಬಕ್ಕೆ ಮೊದಲ ಆದ್ಯತೆ ನೀಡಿದ್ದನ್ನು ಮಂಡಳಿ ಕೂಡ ಸಮರ್ಥಿಸುತ್ತದೆ. ಎಲ್ಲ ಸಮಸ್ಯೆಗಳು ಬಗೆಹರಿದ ಬಳಿಕ ಅವರು ಸಂಪೂರ್ಣ ಮುಕ್ತ ಮನಸ್ಸಿನಿಂದ ಮರಳಿ ಕಣಕ್ಕಿಳಿಯಬೇಕೆಂದು ಬಯಸುತ್ತದೆ' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

5 ಪಂದ್ಯಗಳ ಸರಣಿ ಸದ್ಯ 1-1 ಸಮಬಲದಲ್ಲಿದೆ. ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಪ್ರವಾಸಿ ಇಂಗ್ಲೆಂಡ್​ ಗೆದ್ದಿದ್ದರೆ, ವಿಶಾಖಪಟ್ಟಣದಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ಭಾರತ ಗೆದ್ದು ತಿರುಗೇಟು ನೀಡಿದೆ. ಸರಣಿಯ 3ನೇ ಟೆಸ್ಟ್​ನಲ್ಲಿ ಫೆಬ್ರವರಿ 15ರಿಂದ ರಾಜ್​ಕೋಟ್​ನಲ್ಲಿ ನಡೆಯಲಿದ್ದು, ಭಾರತ ತಂಡ ಭಾನುವಾರ ಮರಳಿ ಒಗ್ಗೂಡಲಿದೆ. 4ನೇ ಟೆಸ್ಟ್​ ಪಂದ್ಯ ರಾಂಚಿಯಲ್ಲಿ ಫೆಬ್ರವರಿ 23ರಿಂದ 27ರವರೆಗೆ ನಡೆಯಲಿದ್ದರೆ, 5ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯ ಮಾರ್ಚ್​ 7ರಿಂದ 11ರವರೆಗೆ ಧರ್ಮಶಾಲಾದಲ್ಲಿ ನಿಗದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net