

ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2025 ರ ಫೈನಲ್ ಪಂದ್ಯಕ್ಕಾಗಿ ಯುನೈಟೆಡ್ ಕಿಂಗ್‌ಡಮ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಆರ್ಸಿಬಿಗೆ ಶುಭ ಹಾರೈಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನಾನು ಬೆಂಗಳೂರಿನ ಕುಟುಂಬದೊಂದಿಗೆ ಮದುವೆಯಾಗಿದ್ದೇನೆ. ಹೀಗಾಗಿ ಆರ್‌ಸಿಬಿ ನನ್ನ ತಂಡ ಎಂದು ಹೇಳಿದ್ದಾರೆ. ಇದೇ ವೇಳೆ ಪತ್ನಿ ಅಕ್ಷತಾ ಮೂರ್ತಿಗೆ ಕನ್ನಡದಲ್ಲಿ ಪ್ರಪೋಸ್ ಮಾಡಿದ್ದನ್ನು ನೆನಪಿಸಿಕೊಂಡಿದ್ದು, ಆ ಸಮಯದಲ್ಲಿ ಭಾಷೆಯನ್ನು ಚೆನ್ನಾಗಿ ಕಲಿತಿರಲಿಲ್ಲ ಮಾಡಿಕೊಂಡಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ನಾನು ಮದುವೆಯಾದ ಸಂದರ್ಭದಲ್ಲಿ ನನ್ನ ಅತ್ತೆ ಸುಧಾಮೂರ್ತಿ ಅವರು ಆರ್‌ಸಿಬಿ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಅಂದಿನಿಂದ ತಂಡವನ್ನು ಗಮನಿಸುತ್ತಿದ್ದೇನೆ, ಕಳೆದ ವರ್ಷದ ಪಂದ್ಯಗಳು ಕೂಡ ರೋಮಾಂಚನಕಾರಿಯಾಗಿದ್ದವು, ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ ಎಂದು ರಿಷಿ ಸುನಕ್ ಹೇಳಿದ್ದಾರೆ.
ಸತತ 18 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿ ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಜಯಸಲು ಎದುರು ನೋಡುತ್ತಿರುವ ಸಂದರ್ಭದಲ್ಲಿ, ಸುನಕ್ ತಂಡದ ಬಗ್ಗೆ ವಿಶೇಷವಾಗಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿದ್ದಾಗ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ನೀಡಿದ್ದ ಕೊಹ್ಲಿ ಸಹಿ ಮಾಡಿದ್ದ ಬ್ಯಾಟ್ ಹಿಡಿದು ‘ಕೊಹ್ಲಿ ಅವರೊಬ್ಬ ಲೆಜೆಂಡ್’ ಎಂದು ಹೇಳಿದ್ದರು.