ಕ್ರಿಕೆಟ್-ಕಾಲ್ಚೆಂಡಿನಲ್ಲಿ ಮಿಂಚಿದ್ದ ಚುನಿ ಕಣ್ಮರೆ, ಭಾರತೀಯ ಫುಟ್​ಬಾಲ್ ಸ್ವರ್ಣಯುಗದ ತಾರೆ; ಏಷ್ಯಾಡ್ ಸ್ವರ್ಣ ಪದಕ ವಿಜೇತ

page 10 2
Published on

ಕೋಲ್ಕತ: 1962ರ ಏಷ್ಯಾಡ್ ಸ್ವರ್ಣ ಪದಕ ವಿಜೇತ ಭಾರತ ಫುಟ್​ಬಾಲ್ ತಂಡದ ನಾಯಕ ಸುಬಿಮಲ್ ಚುನಿ ಗೋಸ್ವಾಮಿ ಹೃದಯಾಘಾತದಿಂದ ಗುರುವಾರ ನಿಧನ ಹೊಂದಿದರು. ಭಾರತೀಯ ಫುಟ್​ಬಾಲ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಚುನಿ, ಪ್ರಥಮ ದರ್ಜೆ ಕ್ರಿಕೆಟ್​ನಲ್ಲೂ ಬಂಗಾಳ ತಂಡವನ್ನು ಮುನ್ನಡೆಸಿದ್ದರು. ದೇಶೀಯ ಕ್ರೀಡಾ ವಲಯದಲ್ಲಿ ಏಕಕಾಲದಲ್ಲಿ ಫುಟ್​ಬಾಲ್ ಹಾಗೂ ಕ್ರಿಕೆಟ್ ಆಡಿದ ಅಪರೂಪದ ಕ್ರೀಡಾಪಟುವಾಗಿದ್ದರು. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಚುನಿ ಅವರಿಗೆ 82 ವರ್ಷ ವಯಸ್ಸಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಸಂಜೆ 5ರ ವೇಳೆಗೆ ಚುನಿ ಅಸುನೀಗಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪತ್ನಿ ಬಸಂತಿ ಹಾಗೂ ಪುತ್ರ ಸುದಿಪ್ತೊ ಅವರನ್ನು ಅಗಲಿದ್ದಾರೆ.

ಫುಟ್​ಬಾಲ್-ಕ್ರಿಕೆಟ್ ಪ್ರಿಯ!: ದೇಶ ವಿಭಜನೆಗೆ ಮುನ್ನ ಬಾಂಗ್ಲಾದೇಶದ ಕಿಶೋರ್​ಗಢದಲ್ಲಿ ಜನಿಸಿದ ಚುನಿ, ಏಕಕಾಲದಲ್ಲಿ ಫುಟ್​ಬಾಲ್ ಹಾಗೂ ಕ್ರಿಕೆಟ್​ನಲ್ಲಿ ಸ್ಪರ್ಧಾತ್ಮಕವಾಗಿ ತೊಡಗಿಕೊಳ್ಳುವ ಮೂಲಕ ಎಲ್ಲರ ಕೇಂದ್ರಬಿಂದುವಾಗಿದ್ದರು. ಫುಟ್​ಬಾಲ್​ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದರೆ, ಕ್ರಿಕೆಟ್​ನಲ್ಲಿ ದೇಶೀಯ ಟೂರ್ನಿಗಳಲ್ಲಿ ಬಂಗಾಳ ತಂಡವನ್ನು ಮುನ್ನಡೆಸಿದ್ದರು. 1960ರ ರೋಮ್ ಒಲಿಂಪಿಕ್ಸ್ ಸೇರಿದಂತೆ 1956ರಿಂದ 1964ರವರೆಗೆ ಭಾರತದ ಪರ ಸ್ಟ್ರೈಕರ್ ಆಗಿ 50 ಫುಟ್​ಬಾಲ್ ಪಂದ್ಯಗಳನ್ನಾಡಿ 9 ಗೋಲು ಸಿಡಿಸಿದ್ದರು. 1962ರಿಂದ 1973ರವರೆಗೆ ಬಂಗಾಳ ಪರ 46 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 1,592 ರನ್ ಮತ್ತು 47 ವಿಕೆಟ್ ಗಳಿಸಿದ್ದರು. ಕಾಲೇಜು ದಿನಗಳಲ್ಲಿ ಕೋಲ್ಕತ ವಿವಿ ಫುಟ್​ಬಾಲ್ ಹಾಗೂ ಕ್ರಿಕೆಟ್ ತಂಡಗಳಿಗೆ ನಾಯಕತ್ವ ವಹಿಸಿದ್ದರು.

1962ರ ಏಷ್ಯಾಡ್ ಹೀರೋ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ 1962ರ ಏಷ್ಯಾಡ್​ನಲ್ಲಿ ಭಾರತ ಫುಟ್​ಬಾಲ್ ತಂಡ ಚುನಿ ನಾಯಕತ್ವದಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿತ್ತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ತಂಡ 2-1ರಿಂದ ಕೊರಿಯಾ ಎದುರು ಗೆಲುವು ದಾಖಲಿಸಿತ್ತು. 1964ರಲ್ಲಿ ನಡೆದ ಏಷ್ಯಾಕಪ್​ನಲ್ಲಿ ಚುನಿ ನೇತೃತ್ವದಲ್ಲಿಯೇ ಭಾರತ ಬೆಳ್ಳಿ ಗೆದ್ದಿತ್ತು. 50ರ ದಶಕದಲ್ಲಿ ರಾಷ್ಟ್ರೀಯ ಫುಟ್​ಬಾಲ್ ತಂಡದ ಸ್ಟಾರ್ ಆಟಗಾರನಾಗಿದ್ದ ಚುನಿ 27ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ವಿದಾಯ ಘೋಷಿಸಿದ್ದರು. ಬಳಿಕ ಕ್ರಿಕೆಟ್​ನತ್ತ ಹೆಚ್ಚು ಒಲವು ಬೆಳೆಸಿಕೊಂಡ ಚುನಿ, ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದರು. 1966ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇಂದ್ರ ಹಾಗೂ ಪೂರ್ವ ವಲಯ ಒಳಗೊಂಡ ತಂಡ ಇನಿಂಗ್ಸ್ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ಚುನಿ 8 ವಿಕೆಟ್ ಕಬಳಿಸಿದ್ದರು. 1971-72ರ ರಣಜಿ ಟ್ರೋಫಿಯಲ್ಲಿ ಚುನಿ ನೇತೃತ್ವದಲ್ಲಿ ಬಂಗಾಳ ತಂಡ ಫೈನಲ್ ಪ್ರವೇಶಿಸಿತ್ತು. ಬ್ರಬೋರ್ನ್​ನಲ್ಲಿ ನಡೆದ ಫೈನಲ್​ನಲ್ಲಿ ಬಂಗಾಳ ಆತಿಥೇಯ ಬಾಂಬೆ ತಂಡಕ್ಕೆ ಶರಣಾಗಿತ್ತು.

ಕಳಚಿದ ಸ್ವರ್ಣಯುಗದ ಕೊಂಡಿ: ಚುನಿ ಗೋಸ್ವಾಮಿ ಅವರ ತಂಡದ ಸಹ-ಆಟಗಾರ ಪಿಕೆ ಬ್ಯಾನರ್ಜಿ ಇತ್ತೀಚೆಗಷ್ಟೇ ನಿಧನ ಹೊಂದಿದ್ದರು. ಇದರೊಂದಿಗೆ 60ರ ದಶಕದ ಭಾರತ ಫುಟ್​ಬಾಲ್​ನ ಸ್ವರ್ಣಯುಗದ ಮತ್ತೊಂದು ಕೊಂಡಿ ಕಳಚಿದಂತಾಗಿದೆ. 1962ರಲ್ಲಿ ಏಷ್ಯಾದ ಅತ್ಯುತ್ತಮ ಸ್ಟ್ರೈಕರ್ ಪ್ರಶಸ್ತಿ ಪಡೆದಿದ್ದ ಚುನಿ, 1963ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ 1983ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದರು. ಕಳೆದ ಜನವರಿಯಲ್ಲಿ 82ನೇ ವರ್ಷಕ್ಕೆ ಕಾಲಿಟ್ಟಿದ್ದ ಚುನಿ ಗೌರವಾರ್ಥ ಭಾರತೀಯ ಅಂಚೆ ಇಲಾಖೆ ಸ್ಟಾ್ಯಂಪ್ ಹೊರ ತಂದಿತ್ತು. ವೃತ್ತಿಜೀವನದುದ್ದಕ್ಕೂ ಪ್ರತಿಷ್ಠಿತ ಮೋಹನ್ ಬಗಾನ್ ತಂಡದ ಪರವೇ ಆಡಿದ್ದ ಚುನಿ 1968ರಲ್ಲಿ ಕ್ಲಬ್​ಗೆ ವಿದಾಯ ಹೇಳಿದ್ದರು. 1960-64ರ ಅವಧಿಯಲ್ಲಿ ಕ್ಲಬ್ ಮುನ್ನಡೆಸಿದ್ದ ಅವರಿಗೆ 2005ರಲ್ಲಿ ಮೋಹನ್ ಬಗಾನ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಚುನಿ ಗೋಸ್ವಾಮಿ ನಿಜವಾದ ರೀತಿಯಲ್ಲಿ ಆಲ್ರೌಂಡರ್ ಆಗಿದ್ದರು. ಅಂತಾರಾಷ್ಟ್ರೀಯ ಫುಟ್​ಬಾಲ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಆಡಿದ್ದ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇವೆ. | ಬಿಸಿಸಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net