

ಲಂಡನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಡುವ ಹನ್ನೊಂದರ ಬಳಗವನ್ನು ಆರಿಸಲು ಕೃತಕ ಬುದ್ದಿಮತ್ತೆಯನ್ನು (ಎಐ) ಬಳಸುತ್ತಿರುವುದಾಗಿ ಮುಖ್ಯ ಕೋಚ್ ಜಾನ್ ಲೆವಿಸ್ ಬಹಿರಂಗಪಡಿಸಿದ್ದಾರೆ. ತಂತ್ರಜ್ಞಾನವು ಬಲಿಷ್ಠ ತಂಡದ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ನಿರ್ಣಾಯಕ ಅಭಿಪ್ರಾಯಗಳನ್ನು ನೀಡಿತು ಮತ್ತು ಆಸ್ಟ್ರೆಲಿಯಾ ವಿರುದ್ಧದ ಟಿ20 ಸರಣಿಯನ್ನು ಗೆಲ್ಲಲು ಇದು ಸಹಾಯವನ್ನೂ ಮಾಡಿತು ಎಂದು ಅವರು ತಿಳಿಸಿದ್ದಾರೆ.
ಲಂಡನ್ ಮೂಲದ "ಪಿಎಸ್ಐ' ಕಂಪನಿ ತಯಾರಿಸುವ ತಂತ್ರಜ್ಞಾನವನ್ನು ಬಳಸಿಕೊಂಡಿರುವುದಾಗಿ ಲೆವಿಸ್ ತಿಳಿಸಿದ್ದಾರೆ. ಅವರು 2023ರ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಯುಪಿ ವಾರಿಯರ್ಸ್ ತಂಡದ ಕೋಚ್ ಕೂಡ ಆಗಿದ್ದರು. ಉತ್ತಮ ಫಾಮ್ರ್ನಲ್ಲಿರುವ ಇಬ್ಬರು ಆಟಗಾರರ ಪೈಕಿ ಒಬ್ಬರನ್ನು ಮಾತ್ರ ಆರಿಸುವ ಸಂಕಷ್ಟದ ಸಮಯದಲ್ಲಿ ಎಐ ನಮಗೆ ಯಶಸ್ವಿಯಾಗಿ ಸಹಾಯ ಮಾಡಿದೆ ಎಂದು ಲೆವಿಸ್ ಹೇಳಿಕೊಂಡಿದ್ದಾರೆ.
ಇಂಗ್ಲೆಂಡ್ ರಗ್ಬಿ ಯೂನಿಯನ್ ತಂಡದ ಕೋಚ್ ಹಾಗೂ ರಗ್ಬಿ ಲೀಗ್ನಲ್ಲಿ ಆಡುವ ವಿಗಾನ್ ವಾರಿಯರ್ಸ್ ತಂಡದ ಮಾರ್ಗದರ್ಶಕರೂ ಆಗಿರುವ ಸ್ಟೀವ್ ಬೋರ್ತ್ವಿಕ್ ಕೂಡ ತಂಡವನ್ನು ಅಂತಿಮಗೊಳಿಸಲು ಇದೇ ರೀತಿಯ ತಂತ್ರಜ್ಞಾನವನ್ನು ಬಳಸಿರುವುದಾಗಿ ಹೇಳಿಕೊಂಡಿದ್ದಾರೆ.
ಆಟಗಾರ್ತಿಯರ ಸಿದ್ಧತೆಯನ್ನು ಪರಿಶೀಲಿಸಿ ತಂಡವನ್ನು ಆರಿಸುವ ಪ್ರಕ್ರಿಯೆಗೆ ಎಐ ಸಂಪೂರ್ಣವಾಗಿ ಬದಲಿ ವ್ಯವಸ್ಥೆ ಆಗಲಾರದು. ಆದರೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಎಐ ಸಹಾಯವನ್ನಷ್ಟೇ ಮಾಡಬಹುದು ಎಂದೂ ಲೆವಿಸ್ ಸ್ಪಷ್ಟಪಡಿಸಿದ್ದಾರೆ.