ಸಾನಿಯಾ ಮಿರ್ಜಾ ಫಾರ್ಮ್‌ಹೌಸ್‌ನಲ್ಲಿ ಗೋಹತ್ಯೆ ಆರೋಪ, ಟೆನಿಸ್ ತಾರೆ ನಿರಾಕರಣೆ

sania web
Published on

ಹೈದರಾಬಾದ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಸೇರಿದ ಫಾರ್ಮ್‌ಹೌಸ್‌ನಲ್ಲಿ ಕೆಲ ದಿನಗಳ ಹಿಂದೆ ಗೋಹತ್ಯೆ ಮಾಡಲಾಗಿದೆ ಎಂದು ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಗುರುವಾರ ಪ್ರಕಟಣೆಯೊಂದನ್ನು ಹೊರಡಿಸಿರುವ ಸಾನಿಯಾ, ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.

ಕಳೆದ ಅಕ್ಟೋಬರ್ 23ರಂದು ವಿಕಾರಬಾದ್‌ನ ಪರಿಗಿಯಲ್ಲಿ ಹಸು ಮತ್ತು ಕರುವೊಂದು ಗುಂಡೇಟಿಗೆ ಬಲಿಯಾಗಿದ್ದು ಪತ್ತೆಯಾಗಿತ್ತು. ಈ ಸಂಬಂಧ ಸಮೀಪದ ಫಾರ್ಮ್‌ಹೌಸ್‌ನ ವಾಚ್‌ಮನ್ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಫಾರ್ಮ್‌ಹೌಸ್ ಸಾನಿಯಾ ಮಿರ್ಜಾ ಅವರಿಗೆ ಸೇರಿದ್ದಾಗಿದ್ದು, ಗೋಹತ್ಯೆ ನಡೆದ ಸಮಯದಲ್ಲಿ ಸಾನಿಯಾ ಮಿರ್ಜಾ ಕೂಡ ಅಲ್ಲಿ ಹಾಜರಿದ್ದರು ಎಂದು ರಾಜಾ ಸಿಂಗ್ ಬುಧವಾರ ಆರೋಪಿಸಿದ್ದರು. ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕೆಂದೂ ಆಗ್ರಹಿಸಿದ್ದರು.

ಆದರೆ ಸಾನಿಯಾ ಮಿರ್ಜಾ ಗುರುವಾರ ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ್ದು, ಆ ಫಾರ್ಮ್‌ಹೌಸ್ ತಮಗೆ ಸೇರಿದಲ್ಲ ಎಂದು ಹೇಳಿದ್ದಾರೆ. ‘ಕೆಲ ಸುಳ್ಳು ಮತ್ತು ಅಸಂಬದ್ಧ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ ವಿಕಾರಬಾದ್‌ನ ಪರಿಗಿಯಲ್ಲಿ ನಾನು ಯಾವುದೇ ಫಾರ್ಮ್‌ಹೌಸ್ ಹೊಂದಿಲ್ಲ. ಗೋಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ವ್ಯಕ್ತಿಗಳು ನನ್ನ ಕೆಲಸದ ಆಳುಗಳಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಕಳೆದ ಸೆಪ್ಟೆಂಬರ್ ಆರಂಭದಿಂದಲೂ ಭಾರತದಿಂದ ಹೊರಗಿದ್ದೇನೆ. ಇಂಥ ಆಧಾರರಹಿತ ಸುದ್ದಿಗಳ ಜತೆಗೆ ನನ್ನ ಹೆಸರನ್ನು ಸೇರಿಸಬೇಡಿ’ ಎಂದು ಸಾನಿಯಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net