

ಅವಿನಾಶ್ ಜೈನಹಳ್ಳಿ ಮೈಸೂರು
ನಾಯಕ ಮಯಾಂಕ್ ಅಗರ್ವಾಲ್ (114 ರನ್, 179 ಎಸೆತ, 10 ಬೌಂಡರಿ)ಸತತ ಎರಡನೇ ಶತಕ ಹಾಗೂ ಯುವ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ (103 ರನ್, 143 ಎಸೆತ, 13 ಬೌಂಡರಿ) ಬಾರಿಸಿದ ಭರ್ಜರಿ ಶತಕದ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಟೂರ್ನಿಯಲ್ಲಿ ಪ್ರವಾಸಿ ಗೋವಾ ತಂಡದ ಎದುರು ಮೇಲುಗೈ ಸಾಧಿಸಿದ್ದು, ಇನಿಂಗ್ಸ್ ಮುನ್ನಡೆಯ ಸನಿಯದಲ್ಲಿದೆ.
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ನಡೆಯುತ್ತಿರುವ "ಸಿ' ಗುಂಪಿನ ಪಂದ್ಯದ ಎರಡನೇ ದಿನವಾದ ಶನಿವಾರ 8 ವಿಕೆಟ್ಗೆ 228 ರನ್ಗಳಿಂದ ದಿನದಾಟ ಆರಂಭಿಸಿದ ಪ್ರವಾಸಿ ಗೋವಾ ತಂಡ 110.1 ಓವರ್ಗಳಲ್ಲಿ 321ರನ್ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು.
ಬಳಿಕ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡ ದಿಟ್ಟ ಉತ್ತರ ನೀಡಿದ್ದು, ದಿನದಾಂತ್ಯಕ್ಕೆ 64 ಓವರ್ಗಳಲ್ಲಿ 4 ವಿಕೆಟ್ಗೆ 253 ರನ್ಗಳಿಸಿದೆ. ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 68 ರನ್ಗಳ ಅವಶ್ಯಕತೆ ಇದ್ದು, ಮೈಸೂರಿನ ಸ್ಥಳಿಯ ಪ್ರತಿಭೆ ನಿಕಿನ್ ಜೋಸ್ (3*) ಮತ್ತು ಶರತ್ ಶ್ರೀನಿವಾಸ್(0*) ಜೋಡಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಗೋವಾ 321. ಕರ್ನಾಟಕ: 64 ಓವರ್ಗಳಲ್ಲಿ 4 ವಿಕೆಟ್ಗೆ 253:(ಡಿ.ನಿಶ್ಚಲ್ 16, ಮಯಾಂಕ್ 114, ಪಡಿಕಲ್ 103, ನಿಕಿನ್ ಜೋಶ್ 3*, ಎ.ಸಿ. ರೋಹಿತ್ 2, ಶರತ್ ಶ್ರೀನಿವಾಸ್ 0 *, ದರ್ಶನ್ ಮಿಸಾಲ್ 68ಕ್ಕೆ 2, ರೋಹಿತ್ 65ಕ್ಕೆ 2)
ಮಯಾಂಕ್&ಪಡಿಕ್ಕಲ್ ಭದ್ರ ಅಡಿಪಾಯ
ಆರಂಭಿಕರಾದ ಡಿ.ನಿಶ್ಚಲ್(16) ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಬೇಗನೇ ಬೇರ್ಪಟ್ಟಿತು. ಈ ಜೋಡಿ 33 ಎಸೆತಗಳಲ್ಲಿ 27 ರನ್ಗಳಿಸಿದ್ದಾಗ ಡಿ.ನಿಶ್ಚಲ್, ಗೋವಾ ತಂಡದ ನಾಯಕ ದರ್ಶನ್ ಮಿಸಾಲ್ ಬೌಲಿಂಗ್ನಲ್ಲಿ ಎಲ್ಬಿಗೆ ಬಲಿಯಾದರು. ಪರಿಣಾಮ ಆತಿಥೇಯ ತಂಡ ಭೋಜನ ವಿರಾಮದ ವೇಳೆಗೆ 5.3 ಓವರ್ಗಳಲ್ಲಿ 27 ರನ್ಗಳಿಗೆ 1 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.
ನಿಶ್ಚಲ್ ಔಟಾದ ಬಳಿಕ ಮಯಾಂಕ್ ಜತೆಗೂಡಿದ ದೇವದತ್ ಪಡಿಕ್ಕಲ್ ಇನಿಂಗ್ಸ್ ಕಟ್ಟಲು ಮುಂದಾದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಪ್ರವಾಸಿ ತಂಡಕ್ಕೆ ದಿಟ್ಟ ಉತ್ತರ ನೀಡಿದ ಈ ಜೋಡಿ 2ನೇ ವಿಕೆಟ್ಗೆ 298 ಎಸೆತಗಳಲ್ಲಿ 209 ರನ್ ಪೇರಿಸಿ ಕರ್ನಾಟಕಕ್ಕೆ ಭದ್ರ ಅಡಿಪಾಯ ಒದಗಿಸಿತು. ಗೋವಾ ಬೌಲರ್ಗಳನ್ನು ದಂಡಿಸಿದ ಇವರಿಬ್ಬರು ಭೋಜನಾ ವಿರಾಮದಿಂದ ಚಹಾ ವಿರಾಮದ ನಡುವಿನ 30 ಓವರ್ ಸರಾಗವಾಗಿ ಬ್ಯಾಟಿಂಗ್ ನಡೆಸಿ 122 ರನ್ ಪೇರಿಸಿದರು. ಅರ್ಜುನ್ ತೆಂಡುಲ್ಕರ್ ಎಸೆದ ಇನಿಂಗ್ಸ್ನ 52ನೇ ಓವರ್ನಲ್ಲಿ ಪಡಿಕಲ್ ಬೌಂಡರಿ ಸೇರಿ 6 ರನ್ ಕಸಿದು ಶತಕ ಪೂರೈಸಿದರೆ, ಮರು ಓವರ್ನಲ್ಲಿ ನಾಯಕ ಮಯಾಂಕ್ ಬೌಂಡರಿಯೊಂದಿಗೆ ಶತಕ ಸಿಡಿಸಿದರು. ಶತಕಗಳಿಸಿದ ಬೆನ್ನಲೇ ಪಡಿಕಲ್&ಮಯಾಂಕ್ ಜೋಡಿ ಬೇರ್ಪಟ್ಟಿತು.
ಗಮನ ಸೆಳೆದ ಅರ್ಜುನ್ ತೆಂಡುಲ್ಕರ್: ಆತಿಥೇಯ ಕರ್ನಾಟಕ ತಂಡ ಉತ್ತಮ ಬೌಲಿಂಗ್ ನಿರ್ವಹಣೆಯ ನೆರವಿನಿಂದ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದ ಗೋವಾ ತಂಡಕ್ಕೆ ಟೀಮ್ ಇಂಡಿಯಾ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್(52 ರನ್,112 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಹೆರಾಂಬ್ ಪರಬ್(53 ರನ್, 81 ಎಸೆತ,8 ಬೌಂಡರಿ, 1 ಸಿಕ್ಸರ್) ಜೋಡಿ ಸಮಯೋಚಿತ ಬ್ಯಾಟಿಂಗ್ ಮಾಡುವ ಮೂಲಕ ನೆರವಾಯಿತು. ಈ ಜೋಡಿ 9ನೇ ವಿಕೆಟ್ಗೆ 93 ಪೇರಿಸಿ ತಂಡಕ್ಕೆ ಚೇತರಿಕೆ ನೀಡಿತು. ಸ್ಥಳಿಯ ಪ್ರತಿಭೆ ಎಂ.ವೆಂಕಟೇಶ್, ಹೆರಾಂಬ್ ಪರಬ್ ಹಾಗೂ ಅರ್ಜುನ್ ತೆಂಡುಲ್ಕರ್ ವಿಕೆಟ್ ಪಡೆದು ಮಿಂಚಿದರು.