ಐಪಿಎಲ್‌ಗೆ ಕರೊನಾ ಕರಿಛಾಯೆ..

wankhade stadium for web
Published on

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಗೆ ಅಂತಿಮ ಸಿದ್ಧತೆ ಕೈಗೊಳ್ಳುತ್ತಿದೆ. 8 ಫ್ರಾಂಚೈಸಿಗಳು ತಮ್ಮದೇ ಬಯೋ ಬಬಲ್ ವಾತಾವರಣ ನಿರ್ಮಿಸಿಕೊಂಡು ಪ್ರತಿಷ್ಠಿತ ಲೀಗ್‌ಗೆ ಬರದ ಸಿದ್ಧತೆಯಲ್ಲಿ ತೊಡಗಿವೆ. ಹಂತ ಹಂತವಾಗಿ ಆಟಗಾರರು ತಮ್ಮ ತಂಡಗಳನ್ನು ಕೂಡಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಎರಡನೇ ಕರೊನಾ ಅಲೆ ಬರಸಿಡಿಲದಂತೆ ಅಪ್ಪಳಿಸುತ್ತಿದೆ. ಈ ಕರಿಛಾಯೆ ಇದೀಗ ಐಪಿಎಲ್‌ಗೂ ತಟ್ಟಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನ 10 ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಕ್ಷರ್ ಪಟೇಲ್, ಸಿಎಸ್‌ಕೆ ತಂಡದ ಸಿಬ್ಬಂದಿಗೆ ವೈರಸ್ ಕಾಣಿಸಿಕೊಂಡಿದ್ದು, ಕ್ರಿಕೆಟ್ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಲೀಗ್‌ನ ಮೊದಲ ಚರಣವಾಗಿ ಏಪ್ರಿಲ್ 10 ರಿಂದ 25 ರವರೆಗೆ ಮುಂಬೈನಲ್ಲಿ 10 ಲೀಗ್ ಪಂದ್ಯಗಳು ನಿಗದಿಯಾಗಿವೆ.

* ಮುಂಬೈನಲ್ಲೇ ಐಪಿಎಲ್ ಪಂದ್ಯಗಳು?

ಐಪಿಎಲ್ ಸಿದ್ಧತೆಯಲ್ಲಿ ತೊಡಗಿದ್ದ ವಾಂಖೆಡೆ ಸ್ಟೇಡಿಯಂನ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿದೆ. ಅಲ್ಲದೆ, ಲೀಗ್‌ನ ಇವೆಂಟ್ ಮ್ಯಾನೇಜ್ಮೆಂಟ್‌ನ 6 ಸಿಬ್ಬಂದಿಗೂ ಕರೊನಾ ವೈರಸ್ ದೃಢಪಟ್ಟಿದ್ದು, ಮನೆಯಲ್ಲೇ ಐಸೋಲೇಷನ್‌ಗೆ ಒಳಗಾಗಿದ್ದಾರೆ. ‘ಶುಕ್ರವಾರ 8 ಮಂದಿ, ಶನಿವಾರ ಇಬ್ಬರಿಗೆ ಕರೊನಾ ವೈರಸ್ ದೃಢಪಟ್ಟಿದೆ. ಎಲ್ಲರೂ ಮನೆಯಲ್ಲೇ ಐಸೋಲೇಷನ್‌ಗೆ ಒಳಗಾಗಿದ್ದಾರೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ಮೂಲಗಳು ತಿಳಿಸಿವೆ. ಮೈದಾನದ ಸಿದ್ಧತೆಗೆ ಬೇರೆ ಸಿಬ್ಬಂದಿ ವರ್ಗದವರನ್ನು ಕರೆತಂದಿದ್ದು, ಕಂಡಿವಾಲಿಯಲ್ಲಿರುವ ಮುಂಬೈ ಕ್ರಿಕೆಟ್ ಸಂಸ್ಥೆಯ ಮತ್ತೊಂದು ಮೈದಾನದ ಸಿಬ್ಬಂದಿ ಮೈದಾನದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯುತ್ತಿರುವುದರಿಂದ ಯಾವುದೇ ಅಡ್ಡಿ ಆತಂಕವಿಲ್ಲ ಎಂದು ಎಂಸಿಎ ಮೂಲಗಳು ತಿಳಿಸಿವೆ. ಮುಂಬೈನಲ್ಲೇ ಪಂದ್ಯಗಳು ನಡೆಯಲಿದ್ದು, ಯಾವುದೇ ಕಾರಣಕ್ಕೂ ಸ್ಥಳಾಂತರಿಸುವ ಅವಕಾಶವಿಲ್ಲ ಎಂದು ಎಂಸಿಎ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 10 ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗಲಿವೆ.

* ಹೈದರಾಬಾದ್ ಬದಲಿ ತಾಣ?

ಮುಂಬೈ ಬದಲಿಗೆ ಇಂದೋರ್ ಹಾಗೂ ಹೈದರಾಬಾದ್ ನಗರಗಳನ್ನು ಬದಲಿ ತಾಣಗಳನ್ನಾಗಿ ಆಯ್ಕೆಮಾಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಮುಂಬೈನಿಂದ ಪಂದ್ಯಗಳನ್ನು ಸ್ಥಳಾಂತರಿಸುವುದು ಕಷ್ಟಕರ. ಈ ಕಡಿಮೆ ಅವಧಿಯಲ್ಲೇ ಪ್ರತ್ಯೇಕ ಬಯೋ ಬಬಲ್ ವಾತಾವರಣ ನಿರ್ಮಿಸಬೇಕು. ಈಗಾಗಲೇ ಆಟಗಾರರು ಬಯೋಬಬಲ್‌ನಲ್ಲಿ ಇರುವುದರಿಂದ ಮುಂಬೈನಿಂದ ಹೈದರಾಬಾದ್‌ಗೆ ಸ್ಥಳಾಂತರಿಸುವುದು ಕಷ್ಟಕರ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ವಾಂಖೆಡೆ ಸ್ಟೇಡಿಯಂನಲ್ಲಿ ಯಾವುದೇ ತಂಡಗಳು ಅಭ್ಯಾಸ ನಡೆಸುತ್ತಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಬ್ರಬೋರ್ನ್ ಸ್ಟೇಡಿಯಂ ಹಾಗೂ ಬಾಂದ್ರ ಕುರ್ಲಾ ಮೈದಾನದಲ್ಲಿ, ಕೆಕೆಆರ್ ತಂಡ ನವಿ ಮುಂಬೈನಲ್ಲಿ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿವೆ. ಬಳಿಕ ಮೊದಲ ಚರಣದ ಪಂದ್ಯಗಳಲ್ಲಿ ಆಡಲು ಚೆನ್ನೈಗೆ ತೆರಳಲಿವೆ.

* ಕಠಿಣ ನಿಯಮಕ್ಕೂ ಸೂಚನೆ

ಮುಂಬೈನಲ್ಲಿ ಕರೊನಾ ಪ್ರಕರಣಗಳು ಉಲ್ಭಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಲೀಗ್ ಆಯೋಜನೆ ಹೊಣೆ ಹೊತ್ತಿರುವ 6 ಕ್ರಿಕೆಟ್ ಸಂಸ್ಥೆಗಳಿಗೆ ಕಠಿಣ ನಿಯಮ ಜಾರಿಗೊಳಿಸುವಂತೆ ಬಿಸಿಸಿಐ ಸೂಚಿಸಿದೆ. ಕೋವಿಡ್-19 ಮಾರ್ಗಸೂಚಿಗಳನ್ನು ಮತ್ತಷ್ಟು ಬಿಗಿಗೊಳಿಸಿ, ಕೇವಲ ಆಯ್ದ ಸದಸ್ಯರಿಗಷ್ಟೇ ಪ್ರವೇಶ ನೀಡಲು ಸೂಚಿಸಲಾಗಿದೆ.

* ಲಸಿಕೆ ನೀಡಿದ ಡಿಡಿಸಿಎ

ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ತನ್ನ ಸಿಬ್ಬಂದಿ ವರ್ಗದವರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಉಚಿತ ಲಸಿಕೆ ನೀಡುತ್ತಿದೆ. ಮೈದಾನದ ಇಡೀ ಸಿಬ್ಬಂದಿಗೆ ಮೊದಲ ಆಧ್ಯತೆ ನೀಡಿದ್ದು, ಇದಕ್ಕಾಗಿ ಸರ್ಕಾರದಿಂದ ವಿಶೇಷ ಅನುಮತಿ ಕೂಡ ಪಡೆಯಲಾಗಿದೆ ಎಂದು ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ತಿಳಿಸಿದ್ದಾರೆ. ಡಿಡಿಸಿಎ ನೌಕರರು, ಪದಾಧಿಕಾರಿಗಳು ಹಾಗೂ ಮೈದಾನದ ಸಿಬ್ಬಂದಿಗೆ ಉಚಿತ ಲಸಿಕೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಮುಂದಿನ ಎರಡು ತಿಂಗಳು ಕಾಲ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಕೂಡ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಬಿಸಿಸಿಐ ಸೂಚನೆ ನೀಡಿದೆ.

* ವೈದ್ಯಕೀಯ ತಂಡದಿಂದ ಪರಿಶೀಲನೆ

ಬಿಸಿಸಿಐ ವೈದ್ಯಕೀಯ ತಂಡ ಸದ್ಯ ಪರಿಸ್ಥಿತಿ ಅವಲೋಕಿಸುತ್ತಿದ್ದು, ಟೆಸ್ಟ್ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಐಪಿಎಲ್‌ನ ಆರಂಭಿಕ ಆವೃತ್ತಿಗಳಿಂದಲೂ ಲಂಡನ್ ಮೂಲದ ಐಎಂಜಿ ತಂಡ ಇವೆಂಟ್ ಮ್ಯಾನೇಜ್ಮೆಂಟ್ ವಹಿಸಿದ್ದರೆ, ಈ ಬಾರಿ ಸ್ವತಃ ಬಿಸಿಸಿಐ ಈ ಜವಾಬ್ದಾರಿ ನಿರ್ವಹಿಸುತ್ತಿದೆ. ಮುಂಬೈ ಪರಿಸ್ಥಿತಿ ಬಗ್ಗೆ ಭಯವಿಲ್ಲ. ಬದಲಿಗೆ ಸಿಬ್ಬಂದಿಯನ್ನು ವ್ಯವಸ್ಥೆ ಮಾಡಿಕೊಂಡಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಂಸಿಎ ಅಧಿಕಾರಿಗಳು ತಿಳಿಸಿದ್ದಾರೆ.

* ಸಿಎಸ್‌ಕೆಗೂ ತಟ್ಟಿದ ಕೋವಿಡ್-19 ಬಿಸಿ

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಕೋವಿಡ್-19 ಬಿಸಿ ತಟ್ಟಿದೆ. ತಂಡದ ಮೂಲಗಳ ಪ್ರಕಾರ, ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಇದರಿಂದ ಸುರಕ್ಷಿತವಾಗಿದ್ದು, ಮಾಧ್ಯಮ ಉಸ್ತುವಾರಿ ವಹಿಸಿರುವ ತಂಡದ ಸದಸ್ಯರೊಬ್ಬರಿಗೆ ಕೋವಿಡ್-19 ದೃಢಪಟ್ಟಿದೆ ಎನ್ನಲಾಗಿದೆ. ಸಿಎಸ್‌ಕೆ ತಂಡ ಏಪ್ರಿಲ್ 10 ರಂದು ಮುಂಬೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ತನ್ನ ಮೊದಲ ಪಂದ್ಯವಾಡಲಿದೆ. ಯುಎಇಯಲ್ಲಿ ನಡೆದ ಕಳೆದ ಆವೃತ್ತಿಯಲ್ಲೂ ಸಿಎಸ್‌ಕೆ ತಂಡದ ದೀಪಕ್ ಚಹರ್ ಹಾಗೂ ಋತುರಾಜ್ ಗಾಯಕ್ವಾಡ್‌ಗೆ ಕೋವಿಡ್-19 ಕಾಣಿಸಿಕೊಂಡಿತ್ತು.

* ಕೈಮೀರಿದ ಮುಂಬೈ ಸ್ಥಿತಿ

ಐಪಿಎಲ್ ನಡೆಯುವ ಇತರ 6 ನಗರಗಳಿಗೆ ಹೋಲಿಸಿದರೆ ಮುಂಬೈ ನಗರಕ್ಕೆ ಹೆಚ್ಚು ಕರೊನಾಘಾತ ತಟ್ಟಿದೆ. ಈಗಾಗಲೇ ಮಹಾರಾಷ್ಟ್ರದ ಕೆಲನಗರಗಳನ್ನು ಮಿನಿ ಲಾಕ್‌ಡೌನ್ ಮಾಡಲಾಗಿದೆ. ಬೆಂಗಳೂರು, ಮುಂಬೈ, ಅಹಮದಾಬಾದ್, ಡೆಲ್ಲಿ, ಚೆನ್ನೈ ಹಾಗೂ ಕೋಲ್ಕತದಲ್ಲಿ ಲೀಗ್ ನಡೆಯಲಿದೆ. ಈ ಪೈಕಿ ಮುಂಬೈ ಹಾಗೂ ಬೆಂಗಳೂರಿನಲ್ಲಿ ಅತಿಹೆಚ್ಚು ಸಕ್ರಿಯ ಪ್ರಕರಣಗಳಿವೆ. ಸದ್ಯ ಮುಂಬೈನಲ್ಲಿ 62,187, ಬೆಂಗಳೂರಿನಲ್ಲಿ 26544, ಅಹಮದಾಬಾದ್‌ನಲ್ಲಿ 2,168, ಡೆಲ್ಲಿ 12,467, ಕೋಲ್ಕತದಲ್ಲಿ 7692 ಹಾಗೂ ಚೆನ್ನೈ ನಗರದಲ್ಲಿ 7164 ಸಕ್ರಿಯ ಪ್ರಕರಣಗಳಿವೆ.

* ಬೆಂಗಳೂರಿಗೆ ಗ್ರೀನ್‌ಸಿಗ್ನಲ್

ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ತಿಳಿಸಿದೆ. ಈ ಕುರಿತು ಕೆಎಸ್‌ಸಿಎಗೆ ಶುಕ್ರವಾರ ಬರೆದಿರುವ ಪತ್ರದಲ್ಲಿ ಪಂದ್ಯಗಳನ್ನು ಆಯೋಜಿಸಲು ಸರ್ಕಾರ ಅನುಮತಿ ನೀಡಿದೆ. ಮೇ.9 ರಿಂದ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿದ್ದು, ಮುನ್ನೆಚ್ಚರಿಕೆ ದೃಷ್ಟಿಯಿಂದ ಮೈದಾನದ ಸಿಬ್ಬಂದಿಯನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಕೆಎಸ್‌ಸಿಎ ಖಜಾಂಚಿ ಹಾಗೂ ವಕ್ತಾರ ವಿನಯ್ ಮೃತ್ಯುಂಜಯ ವಿಜಯವಾಣಿಗೆ ತಿಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ 16 ವಯೋಮಿತಿ ವಲಯಮಿತಿ ದ್ವಿದಿನ ಕ್ರಿಕೆಟ್ ಟೂರ್ನಿಯನ್ನು ರದ್ದುಗೊಳಿಸಲು ಕೆಎಸ್‌ಸಿಎ ನಿರ್ಧರಿಸಿದೆ. ಶನಿವಾರ ಆರಂಭಗೊಂಡ ಪಂದ್ಯಗಳು ಭಾನುವಾರ ಮುಕ್ತಾಯಗೊಳ್ಳಲಿದ್ದು, ಬಳಿಕ ಟೂರ್ನಿಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ಕೆಎಸ್‌ಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net