ಬಿಸಿಸಿಐ 51 ಕೋಟಿ ರೂ., ಸುರೇಶ್ ರೈನಾ 52 ಲಕ್ಷ ರೂ. ದೇಣಿಗೆ

Suresh Raina
Published on

ನವದೆಹಲಿ: ಕರೊನಾ ಸೋಂಕಿನ ಭೀತಿಯಿಂದ ಕ್ರೀಡಾ ಜಗತ್ತು ಈಗಾಗಲೆ ಸ್ತಬ್ಧಗೊಂಡಿದ್ದು, ಈ ಮಹಾಮಾರಿಯ ವಿರುದ್ಧ ಹೋರಾಟಕ್ಕೆ ಕ್ರೀಡಾಪಟುಗಳು ದೇಣಿಗೆಗಳನ್ನು ನೀಡುವ ಮೂಲಕ ನೆರವಾಗುತ್ತಿದ್ದಾರೆ. ಸ್ಟಾರ್ ಕ್ರೀಡಾಪಟುಗಳು ಮತ್ತು ಶ್ರೀಮಂತ ಕ್ರೀಡಾ ಸಂಸ್ಥೆಗಳು ದೊಡ್ಡ ದೊಡ್ಡ ಕೊಡುಗೆಗಳನ್ನು ಘೋಷಿಸುತ್ತಿದ್ದರೆ, ಇತರರೂ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ 51 ಕೋಟಿ ರೂ. ದೇಣಿಗೆ ಘೋಷಿಸುವ ಮೂಲಕ ಕರೊನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸೇರಿ ಈ ಮೊತ್ತವನ್ನು ಪ್ರಧಾನಿ ತುರ್ತು ಪರಿಹಾರ ನಿಧಿಗೆ ನೀಡಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

ತಿಂಗಳ ವೇತನ ನೀಡಿದ ಈಡನ್ ಕ್ಯುರೇಟರ್: ಕೋಲ್ಕತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಕ್ಯುರೇಟರ್ ಸುಜನ್ ಮುಖರ್ಜಿ ತಮ್ಮ ಒಂದು ತಿಂಗಳ ವೇತನವನ್ನು ಪಶ್ಚಿಮ ಬಂಗಾಳ ರಾಜ್ಯ ಪರಿಹಾರ ನಿಧಿಗೆ ನೀಡುವುದಾಗಿ ಘೊಷಿಸಿದ್ದಾರೆ. ಈಗಾಗಲೇ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) 25 ಲಕ್ಷ ರೂ ಹಾಗೂ ಸಿಎಬಿ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ ವೈಯಕ್ತಿಕ 5 ಲಕ್ಷ ರೂಪಾಯಿ ಘೊಷಿಸಿದ್ದಾರೆ. ಜತೆಗೆ ಈಡನ್ ಗಾರ್ಡನ್ ಮೈದಾನದ ಸಿಬ್ಬಂದಿಗೆ ಉಚಿತ ಆಹಾರದ ವ್ಯವಸ್ಥೆಯನ್ನೂ ಮುಖರ್ಜಿ ಮಾಡಿದ್ದಾರೆ. ಒಂದು ತಿಂಗಳ ವೇತನವನ್ನು ರಾಜ್ಯ ಪರಿಹಾರ ನಿಧಿಗೆ ನೀಡಬೇಕೆಂದು ಮುಖರ್ಜಿ ಮನವಿ ಮಾಡಿದ್ದಾರೆ ಎಂದು ಸಿಎಬಿ ತಿಳಿಸಿದೆ. ಇದಕ್ಕೂ ಮೊದಲು ಗುವಾಹಟಿಯ ಬರ್ಸಾಪುರ ಮೈದಾನದ ಕ್ಯುರೇಟರ್ ಗೌತಮ್ ಸುರ್ 50 ಸಾವಿರ ರೂ. ಹಾಗೂ ಬಂಗಾಳದ ವೇಗಿ ಶಿಬ್ ಶಂಕರ್ ಪೌಲ್ 25 ಸಾವಿರ ರೂಪಾಯಿ ನೀಡಿದ್ದರು. ಅಲ್ಲದೆ, ಬಂಗಾಳದ ಸ್ಥಳೀಯ ಕ್ರಿಕೆಟ್ ಕ್ಲಬ್​ಗಳೂ ಕೂಡ ನೆರವಿಗೆ ಮುಂದಾಗಿವೆ.

ಮೋಹನ್ ಬಗಾನ್​ನಿಂದ 20 ಲಕ್ಷ ರೂ: ಐ-ಲೀಗ್ ಫುಟ್​ಬಾಲ್ ಚಾಂಪಿಯನ್ ಮೋಹನ್ ಬಗಾನ್ ಕ್ಲಬ್ ಕರೊನಾ ವಿರುದ್ಧದ ಹೋರಾಟಕ್ಕೆ 20 ಲಕ್ಷ ರೂ. ನೆರವು ನೀಡಿದೆ. ಪಶ್ಚಿಮ ಬಂಗಾಳ ರಾಜ್ಯ ತುರ್ತು ಪರಿಹಾರ ನಿಧಿಗೆ ಈ ಮೊತ್ತವನ್ನು ನೀಡಲಾಗಿದೆ ಎಂದು ಕ್ಲಬ್​ನ ಫೇಸ್​ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ.

ಎಂಪಿಎಲ್ ಟೀಮ್ ಮಾಲೀಕರಿಂದ 8 ಲಕ್ಷ ರೂ: ಮುಂಬೈ ಪ್ರೀಮಿಯರ್ ಲೀಗ್ (ಎಂಪಿಎಲ್) ಟಿ20 ಟೂರ್ನಿಯ 8 ತಂಡಗಳ ಮಾಲೀಕರು ತಲಾ 1 ಲಕ್ಷ ರೂ.ನಂತೆ ಒಟ್ಟು 8 ಲಕ್ಷ ರೂ.ಗಳನ್ನು ಮುಂಬೈ ಮೈದಾನದ ಗ್ರೌಂಡ್ಸ್​ಮನ್​ಗಳಿಗೆ ನೀಡಿದ್ದಾರೆ. ಈ ಮೂಲಕ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ಗ್ರೌಂಡ್ಸ್ ಮನ್​ಗಳಿಗೆ ನೆರವಾಗಿದ್ದಾರೆ.

52 ಲಕ್ಷ ರೂಪಾಯಿ ಘೋಷಿಸಿದ ರೈನಾ

ಭಾರತದ ಎಡಗೈ ಬ್ಯಾಟ್ಸ್​ಮನ್ ಸುರೇಶ್ ರೈನಾ ಕರೊನಾ ವಿರುದ್ಧದ ಹೋರಾಟಕ್ಕೆ 52 ಲಕ್ಷ ರೂ. ದೇಣಿಗೆ ಘೋಷಿಸಿದ್ದಾರೆ. ‘ಕೋವಿಡ್-19ಅನ್ನು ಮಣಿಸಲು ನಾವೆಲ್ಲರೂ ಕೈಲಾದ ನೆರವು ನೀಡಬೇಕಾದ ಸಮಯವಿದು. ನಾನು ಒಟ್ಟು 52 ಲಕ್ಷ ರೂ. ನೀಡುತ್ತಿದ್ದು, ಈ ಪೈಕಿ 31 ಲಕ್ಷ ರೂ. ಪ್ರಧಾನಿ ಪರಿಹಾರ ನಿಧಿ, 21 ಲಕ್ಷ ರೂ. ಉತ್ತರ ಪ್ರದೇಶ ಸಿಎಂ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ನೀವೂ ನಿಮ್ಮ ಕೈಲಾದ ನೆರವು ನೀಡಿ, ಜೈ ಹಿಂದ್’ ಎಂದು ರೈನಾ ಟ್ವೀಟಿಸಿದ್ದಾರೆ. ಇದಕ್ಕೆ ಮುನ್ನ ದಿಗ್ಗಜ ಸಚಿನ್ ತೆಂಡುಲ್ಕರ್ 50 ಲಕ್ಷ ರೂ. ಘೋಷಿಸಿದ್ದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಷ್ಟೇ ಮೌಲ್ಯದ ಅಕ್ಕಿಯನ್ನು ಬಡವರಿಗೆ ಹಂಚಿದ್ದರು. ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್ ಗಂಭೀರ್ ಕೂಡ 50 ಲಕ್ಷ ರೂ. ಮೊತ್ತದ ವೈದ್ಯಕೀಯ ಪರಿಕರ ಖರೀದಿಗೆ ದೆಹಲಿ ಸರ್ಕಾರಕ್ಕೆ ನೆರವಾಗಿದ್ದರು. ರೈನಾ ಈ ಮೂವರನ್ನೂ ಮೀರಿಸಿದ್ದಾರೆ.

ನಡಾಲ್ -ಠಿ;92 ಕೋಟಿ ಸಂಕಲ್ಪ

ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ -ಠಿ;7.74 ಕೋಟಿ ಮತ್ತು ವಿಶ್ವ ನಂ. 1 ಟೆನಿಸ್ ತಾರೆ ಸೆರ್ಬಿಯಾದ ನೊವಾಕ್ ಜೋಕೊವಿಕ್ -ಠಿ;8.3 ಕೋಟಿ ದೇಣಿಗೆ ನೀಡಿದ್ದರೆ, ಸ್ಪೇನ್​ನ ಕ್ಲೇಕೋರ್ಟ್ ಕಿಂಗ್ ರಾಫೆಲ್ ನಡಾಲ್ ಎನ್​ಬಿಎ ಸ್ಟಾರ್ ಪಾವು ಗಸೊಲ್ ಜತೆಗೂಡಿ ಕರೊನಾ ವಿರುದ್ಧ ಹೋರಾಟಕ್ಕೆ 92 ಕೋಟಿ ರೂ. (1.1 ಕೋಟಿ ಯುರೋ) ಸಂಗ್ರಹಿಸುವ ಅಭಿಯಾನ ಆರಂಭಿಸಿದ್ದಾರೆ. ಸ್ಪೇನ್ ಕ್ರೀಡಾತಾರೆಯರಿಂದ ಈ ಮೊತ್ತ ವನ್ನು ಸಂಗ್ರಹಿಸಲಿದ್ದು, ರೆಡ್​ಕ್ರಾಸ್ ಸಂಸ್ಥೆಗೆ ನೀಡಲಿದ್ದಾರೆ.

ಬೇಸ್​ಬಾಲ್ ಜೆರ್ಸಿಯಿಂದ ಮಾಸ್ಕ್

ನ್ಯೂಯಾರ್ಕ್: ಅಮೆರಿಕದ ಪ್ರಮುಖ ಕ್ರೀಡೆಯಾದ ಬೇಸ್​ಬಾಲ್​ನಲ್ಲಿ ಆಟಗಾರರು ಧರಿಸುವ ಸಮವಸ್ತ್ರದ ಜೆರ್ಸಿಯಿಂದ, ಕರೊನಾ ಪೀಡಿತರಿಗೆ ನೆರವು ನೀಡುತ್ತಿರುವ ಆಸ್ಪತ್ರೆಗಳಿಗೆ ಗೌನ್ ಮತ್ತು ಮಾಸ್ಕ್​ಗಳನ್ನು ತಯಾರಿಸಿ ನೀಡಲಾಗುತ್ತಿದೆ. 10 ಲಕ್ಷ ಮಾಸ್ಕ್ ಮತ್ತು ಗೌನ್​ಗಳನ್ನು ಸಿದ್ಧಪಡಿಸುವ ಸಂಕಲ್ಪ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net