

ನವದೆಹಲಿ: ಮಾರಕ ಕರೊನಾ ವೈರಸ್ ಕಾರಣದಿಂದಾಗಿ ಭಾರತ ತಂಡ ಮುಂದಿನ ತಿಂಗಳು ಸೈಪ್ರಸ್ನಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್ನಿಂದ ಹಿಂದೆ ಸರಿದಿದೆ.
ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಸಂಸ್ಥೆ (ಐಎಸ್ಎಸ್ಎಫ್) ಆಶ್ರಯದಲ್ಲಿ ಸೈಪ್ರಸ್ನ ನಿಕೋಸಿಯಾದಲ್ಲಿ ಮಾರ್ಚ್ 4 ರಿಂದ 13ರವರೆಗೆ ಶಾಟ್ಗನ್ ವಿಶ್ವಕಪ್ ನಡೆಯಲಿದೆ. ಆದರೆ, ಕೇಂದ್ರ ಸರ್ಕಾರದ ಸೂಚನೆಯ ಕಾರಣ, ಟೂರ್ನಿಯಲ್ಲಿ ಭಾರತದ ಯಾವುದೇ ಶೂಟರ್ಗಳು ಸ್ಪರ್ಧೆ ಮಾಡುತ್ತಿಲ್ಲ ಎಂದು ರಾಷ್ಟ್ರೀಯ ರೈಫಲ್ಸ್ ಸಂಸ್ಥೆ (ಎನ್ಆರ್ಎಐ) ತಿಳಿಸಿದೆ. ‘ಕರೊನಾ ವೈರಸ್ನ ಕಾರಣದಿಂದಾಗಿ ನಾವು ಈ ನಿರ್ಧಾರ ಮಾಡಿದ್ದೇವೆ. ಕೇಂದ್ರ ಸರ್ಕಾರದ ಸಂಸ್ಥೆಗಳ ಸೂಚನೆಯ ಅನ್ವಯ ಟೂರ್ನಿಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ’ ಎಂದು ಎನ್ಆರ್ಎಐ ಅಧಿಕಾರಿ ತಿಳಿಸಿದ್ದಾರೆ.
ನಮ್ಮ ಶೂಟರ್ಗಳು, ಸಿಬ್ಬಂದಿ ಹಾಗೂ ಸಹಾಯಕ ಅಧಿಕಾರಿಗಳ ಆರೋಗ್ಯವನ್ನು ಅಪಾಯಕ್ಕೆ ಈಡು ಮಾಡುವ ಗುರಿ ಹೊಂದಿಲ್ಲ ಎಂದು ಹೇಳಿದ್ದಾರೆ. ವಿಶ್ವಕಪ್ಗೆ ತೆರಳುವ ತಂಡದಲ್ಲಿದ್ದ ಇಬ್ಬರು ಶೂಟರ್ಗಳು ಭಾರತ ತಂಡ ಟೂರ್ನಿಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎನ್ನುವ ವಿಷಯ ತಿಳಿದಿದ್ದು, ಅಧಿಕೃತ ಮಾಹಿತಿ ಹೊರಬೀಳಬೇಕಿದೆ ಎಂದು ಹೇಳಿದ್ದಾರೆ. ಭಾರತ ಕೂಡ ಮಾರ್ಚ್ 16ರಿಂದ 26ರವರೆಗೆ ನವದೆಹಲಿಯಲ್ಲಿ ಎಲ್ಲ ವಿಭಾಗದ ಶೂಟಿಂಗ್ ವಿಶ್ವಕಪ್ಅನ್ನು ಆಯೋಜಿಸಲಿದ್ದು, ಇದು ಕೂಡ ರದ್ದಾಗುವ ಭೀತಿಯಲ್ಲಿದೆ. -ಪಿಟಿಐ/ಏಜೆನ್ಸೀಸ್
ಅರ್ಹತಾ ಅವಧಿ ಬದಲಿಲ್ಲ
ನವದೆಹಲಿ: ಕರೊನಾ ವೈರಸ್ನಿಂದಾಗಿ ಒಲಿಂಪಿಕ್ ಅರ್ಹತಾ ಟೂರ್ನಿಗಳ ಮೇಲೆ ಪರಿಣಾಮ ಬೀರಿದ್ದರೂ, ಒಲಿಂಪಿಕ್ಸ್ನ ಅರ್ಹತಾ ಅವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಸಂಸ್ಥೆ ತಿಳಿಸಿದೆ. ವೈರಸ್ನ ಕಾರಣದಿಂದಾಗಿ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ನಾಲ್ಕು ಟೂರ್ನಿಗಳು ಮುಂದೂಡಿಕೆಯಾಗಿವೆ. ಇದರಿಂದಾಗಿ ಭಾರತದ ಪ್ರಮುಖ ಷಟ್ಲರ್ಗಳಾದ ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್ ಮತ್ತು 2 ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಲಿನ್ ಡಾನ್, ಟೋಕಿಯೊ ಒಲಿಂಪಿಕ್ಸ್ ಅರ್ಹತೆಯಿಂದ ವಂಚಿತವಾಗುವ ಭೀತಿಯಲ್ಲಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಆಯೋಜನೆಗೆ ಬದ್ಧ
ಟೋಕಿಯೊ: ಕರೊನಾ ವೈರಸ್ ಭೀತಿಯ ನಡುವೆಯೂ ಟೋಕಿಯೋ ಒಲಿಂಪಿಕ್ಸ್ ಎಂದಿನಂತೆ ನಡೆಯಲಿದೆ ಎಂದು ಅಂತಾ ರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬಚ್ ಹೇಳಿದ್ದಾರೆ. ಜುಲೈ 24ರಂದು ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್ ಅನ್ನು ಯಶಸ್ವಿಯಾಗಿ ಆಯೋಜಿಸಲು ಐಒಸಿ ಬದ್ಧವಾಗಿದೆ ಎಂದು ಸ್ಥಳೀಯ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಪಾನ್ ನಲ್ಲಿ ವೈರಸ್ ಹಬ್ಬುವುದನ್ನು ತಪ್ಪಿಸುವ ಸಲುವಾಗಿ ಮುಂದಿನ ಎರಡು ವಾರಗಳ ಕಾಲ ಯಾವುದೇ ಕ್ರೀಡಾಕೂಟಗಳು, ಸಾರ್ವಜನಿಕ ಸಮಾರಂಭ ಗಳು ನಡೆಯದಂತೆ ಜಪಾನ್ ಸರ್ಕಾರ ಎಚ್ಚರ ವಹಿಸಿದೆ. ವೈರಸ್ನ ಬಗ್ಗೆ ಎಚ್ಚರಿಕೆ ವಹಿಸುವುದ ರೊಂದಿಗೆ ಸದ್ಯದ ಮಟ್ಟಿಗೆ ನಮ್ಮ ಗುರಿ ಇರುವುದು ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳ ಬಗ್ಗೆ ಎಂದು ಥಾಮಸ್ ಬಚ್ ತಿಳಿಸಿದ್ದಾರೆ.