

ಬೆಂಗಳೂರು: ಕ್ರಿಕೆಟ್ ಆಟವನ್ನು ಧರ್ಮದಂತೆ ಪ್ರೀತಿಸುವ ದೇಶ ಭಾರತ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಏಪ್ರಿಲ್-ಮೇನಲ್ಲಿ ಐಪಿಎಲ್ 13ನೇ ಆವೃತ್ತಿಯ 60 ಟಿ20 ಪಂದ್ಯಗಳನ್ನು ಸವಿದು ಇಷ್ಟೊತ್ತಿಗೆ ಹೊಸ ಚಾಂಪಿಯನ್ ತಂಡದೊಂದಿಗೆ ಸಂಭ್ರಮಿಸುತ್ತಿರಬೇಕಾಗಿತ್ತು. ಆದರೆ ಮಾರ್ಚ್ನಲ್ಲಿ ಶುರುವಾದ ಕರೊನಾ ಹಾವಳಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಲಾಕ್ಡೌನ್ನಿಂದಾಗಿ ಕ್ರೀಡಾ ಚಟುವಟಿಕೆಗಳೂ ಸಂಪೂರ್ಣ ಸ್ತಬ್ಧಗೊಂಡಿದ್ದವು. ಇದೇ ವೇಳೆ, ಐಪಿಎಲ್ ಹಬ್ಬವನ್ನು ಸಂಭ್ರಮಿಸುತ್ತಿರಬೇಕಾದ 8 ಫ್ರಾಂಚೈಸಿಗಳ ತವರು ನಗರಗಳ ಜನರು ಕರೊನಾ ಮಹಾಮಾರಿಯ ವಿರುದ್ಧ ಹೋರಾಡುವಂತಾಗಿರುವುದು ವಿಪರ್ಯಾಸ.
ಭಾರತದಲ್ಲಿ ಕರೊನಾ ಪ್ರಕರಣಗಳು ಈಗಾಗಲೆ 2 ಲಕ್ಷದ ಗಡಿ ದಾಟಿದ್ದು, 6 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಶೇ. 45 ಪ್ರಕರಣಗಳು ಮತ್ತು ಶೇ. 47ರಷ್ಟು ಸಾವು ಐಪಿಎಲ್ ಪಂದ್ಯಗಳು ನಡೆಯುವ ಪ್ರಮುಖ 8 ನಗರಗಳಲ್ಲೇ ದಾಖಲಾಗಿವೆ. ಅದರಲ್ಲೂ ಐಪಿಎಲ್ ಟೂರ್ನಿಯ ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ಕಿಂಗ್ಸ್ ತಂಡಗಳ ತವರಿನಲ್ಲೇ ಅತ್ಯಧಿಕ ಕರೊನಾ ಪ್ರಕರಣಗಳಿವೆ. ಇದನ್ನೂ ಓದಿ: ಎರಡು ಲಕ್ಷ ಸೋಂಕಿತರಿದ್ದರೂ ಭಾರತ ಭಯಪಡಬೇಕಿಲ್ಲ; ವಿಶ್ವ ಆರೋಗ್ಯ ಸಂಸ್ಥೆಗೆ ಏಕಿಂಥ ವಿಶ್ವಾಸ…?
ಇನ್ನು ಕೋಲ್ಕತ ನೈಟ್ರೈಡರ್ಸ್ ತಂಡದ ತವರಿನಲ್ಲಿ ಅಂಫಾನ್ ಚಂಡಮಾರುತದಿಂದಲೂ ಸಾಕಷ್ಟು ಹಾನಿಯಾಗಿದೆ. ಇದರಿಂದಾಗಿ ಈ ನಗರಗಳಲ್ಲಿ ಕ್ರೀಡಾಂಗಣ ಮತ್ತು ಪಿಚ್ಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಕೂಡ ಕಷ್ಟವಾಗಿದೆ. ರಾಜಸ್ಥಾನದ ಮಟ್ಟಿಗೆ ಜೈಪುರ ಕೂಡ ಕರೊನಾದಿಂದ ಅತ್ಯಧಿಕ ತೊಂದರೆ ಎದುರಿಸಿದ ನಗರವಾಗಿದೆ.
ಬಿಸಿಸಿಐ ಈಗಲೂ ಐಪಿಎಲ್ ಟೂರ್ನಿ ಆಯೋಜನೆ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಆದರೆ ವಿಶ್ವದ ಶ್ರೀಮಂತ ಟೂರ್ನಿಯಲ್ಲಿ ಪಾಲ್ಗೊಳ್ಳುವ 8 ಫ್ರಾಂಚೈಸಿಗಳ ತವರು ನಗರದ ಕರೊನಾ ಹಾವಳಿ ಹೆಚ್ಚಾಗಿರುವ ಕಳವಳಕಾರಿ ಅಂಶವನ್ನು ಗಮನಿಸಿದಾಗ ಸದ್ಯಕ್ಕೆ ಐಪಿಎಲ್ ಟೂರ್ನಿ ಆಯೋಜನೆ ಜಟಿಲವೆನಿಸುತ್ತಿದೆ.
ಐಪಿಎಲ್ನ ಎಲ್ಲ 12 ಆವೃತ್ತಿಗಳಲ್ಲಿ ಆಡಿದರೂ ಒಮ್ಮೆಯೂ ಚಾಂಪಿಯನ್ ಪಟ್ಟವೇರದೆ ಅಸ್ಥಿರ ನಿರ್ವಹಣೆ ತೋರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರು ನಗರ ಕರೊನಾ ವಿರುದ್ಧದ ಹೋರಾಟದಲ್ಲಿ ಉಳಿದೆಲ್ಲ ಮೆಟ್ರೋ ನಗರಗಳಿಗಿಂತ ಮೇಲುಗೈ ಸಾಧಿಸಿದೆ. ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಆರ್ಸಿಬಿಯ ತವರು ನಗರ ಬೆಂಗಳೂರು, 7ನೇ ಸ್ಥಾನದಲ್ಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ನ ತವರು ಚಂಡೀಗಢ ದಲ್ಲಿ (ಮೊಹಾಲಿ) ಬೆಂಗಳೂರಿಗಿಂತ ಕಡಿಮೆ ಪ್ರಕರಣಗಳಿವೆ. ಇದನ್ನೂ ಓದಿ: ವರ್ಕೌಟ್ ಮೂಲಕ ದೇಣಿಗೆ ಸಂಗ್ರಹಿಸುತ್ತಿರುವ ದೀಪಿಕಾ ಪಲ್ಲಿಕಲ್