

ಬೆಂಗಳೂರು: ಕರೊನಾ ವೈರಸ್ ಭೀತಿಯಿಂದಾಗಿ ಕಳೆದ ಮೂರು ವಾರಗಳಿಂದ ಜಾಗತಿಕ ಕ್ರೀಡಾಲೋಕವೇ ಸ್ತಬ್ಧಗೊಂಡಿದೆ. ಕ್ರೀಡೆ ಮೇಲೆ ಹೂಡಿದ್ದ ಲಕ್ಷ ಲಕ್ಷ ಕೋಟಿ ರೂಪಾಯಿ ಬಂಡವಾಳಕ್ಕೂ ಕುತ್ತು ಬಂದಿದೆ. ಇದನ್ನೇ ನಂಬಿದವರ ಜೀವನ ಕೂಡ ಅಷ್ಟೇ ದುಸ್ತರವಾಗಿದೆ. ಕ್ರೀಡೆ ಎಂದರೆ ಕೇವಲ ಕ್ರೀಡಾಪಟುವಿಗಷ್ಟೇ ಮೀಸಲಾಗಿರುವುದಿಲ್ಲ. ಮೈದಾನಗಳ ಪಾತ್ರವೂ ಪ್ರಮುಖ. ಮೈದಾನವನ್ನು ಸೂಕ್ತವಾಗಿ ನಿರ್ವಹಿಸಿದರಷ್ಟೇ ಆಟಗಾರರಿಗೆ ಸ್ಪೂರ್ತಿ. ಇದಕ್ಕಾಗಿ ಮೈದಾನದ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಾರೆ. ಆದರೆ, ಗುತ್ತಿಗೆ, ದಿನಗೂಲಿ ನೌಕರಿ ಮಾದರಿಯಲ್ಲಿ ದುಡಿಯುತ್ತಾರೆ. ಇಂಥ ಸಂದರ್ಭದಲ್ಲಿ ಕೆಲಸವಿಲ್ಲದಿದ್ದರೆ ಅಂಥವರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಕೋವಿಡ್-19 ಹಿನ್ನೆಲೆಯಲ್ಲಿ ಕ್ರೀಡಾ ಚಟುವಟಿಕೆ ಸಂಪೂರ್ಣ ನಿಂತಿದ್ದರೂ ರಾಜ್ಯ ಕ್ರೀಡಾ ಸಂಸ್ಥೆಗಳು ತಮ್ಮ ಸಿಬ್ಬಂದಿ ವರ್ಗಕ್ಕೆ ಬೆನ್ನೆಲುಬಾಗಿ ನಿಂತಿವೆ.
ಸಂಬಳದೊಂದಿಗೆ ರೇಷನ್ ನೀಡಿದ ಕೆಎಸ್ಸಿಎ: ಕ್ರಿಕೆಟ್ನಲ್ಲಿ ಆಟಗಾರನ ನಿರ್ವಹಣೆ ಎಷ್ಟು ಮುಖ್ಯವೋ, ಮೈದಾನದ ನಿರ್ವಹಣೆ ಕೂಡ ಅಷ್ಟೇ ಮುಖ್ಯ. ಅತ್ಯುತ್ತಮವಾಗಿ ನಿರ್ವಹಿಸಿದರಷ್ಟೇ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ನೋಡುವ ಹಾಗೂ ಟಿವಿಯಲ್ಲಿ ವೀಕ್ಷಿಸುವವರಿಗೆ ಮುದ ನೀಡುತ್ತದೆ. ಇದಕ್ಕೆ ಮೈದಾನದ ಸಿಬ್ಬಂದಿಯ ಪರಿಶ್ರಮ ತುಂಬಾ ಮುಖ್ಯ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಡಿ ಬರುವ ಚಿನ್ನಸ್ವಾಮಿ ಸ್ಟೇಡಿಯಂ, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಮೈದಾನಗಳ ನಿರ್ವಹಣೆಗಾಗಿ 100ಕ್ಕೂ ಹೆಚ್ಚು ಗುತ್ತಿಗೆ ಆಧಾರದ ನೌಕಕರಿದ್ದಾರೆ. ಇದರಲ್ಲಿ ಬೆಂಗಳೂರಿನಲ್ಲೇ 74 ಮಂದಿಯಿದ್ದಾರೆ. ಐಪಿಎಲ್ ಮುಂದೂಡಿರುವುದರಿಂದ ಅಕ್ಷಶಃ ನಿರುದ್ಯೋಗಿಗಳಾಗಿದ್ದಾರೆ. ಆದರೆ, ನೌಕರರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಂಡಿರುವ ಕೆಎಸ್ಸಿಎ, ತಿಂಗಳ ಆರಂಭದಲ್ಲೇ ಎಲ್ಲ ನೌಕಕರಿಗೆ ಸಂಬಳದ ಜತೆಗೆ ರೇಷನ್ ವಿತರಿಸಿದೆ. ‘ಕೆಎಸ್ಸಿಎಯಲ್ಲಿ 110 ಗ್ರೌಂಡ್ವುನ್ಗಳಿದ್ದಾರೆ. ಎಲ್ಲರಿಗೂ ಸಂಬಳದ ಜತೆಗೆ ರೇಷನ್ ನೀಡಲಾಗಿದೆ. ಅಕ್ಕಿ, ಬೇಳೆ, ತರಕಾರಿಯಿಂದಲೂ ಪೂರೈಕೆ ಮಾಡಲಾಗಿದೆ. ಮುಂದೆಯೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಕೆಎಸ್ಸಿಎ ಪಿಚ್ ಕ್ಯುರೇಟರ್ ಪ್ರಶಾಂತ್ ರಾವ್ ಹೇಳಿದ್ದಾರೆ.
ಕ್ರೀಡಾ ಇಲಾಖೆಯಿಂದ ಅಭಯ
ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರದ ಮೈದಾನದ ಸಿಬ್ಬಂದಿಗೆ ತಿಂಗಳ ಆರಂಭದಲ್ಲೇ ಸಂಬಳ ನೀಡಲಾಗಿದೆ. ಜನರಲ್ ತಿಮ್ಮಯ್ಯ ಅಕಾಡೆಮಿ, ಕ್ರೀಡಾ ಹಾಸ್ಟೆಲ್ಗಳು, ಇಲಾಖೆ ವ್ಯಾಪ್ತಿಗೆ ಬರುವ ಗುತ್ತಿಗೆ ನೌಕರರಿಗೆ ವೇತನ ವಿತರಿಸಲಾಗಿದೆ ಎಂದು ಕ್ರೀಡಾ ಇಲಾಖೆ ಉಪ ನಿರ್ದೇಶಕ ಜಿತೇಂದ್ರ ಶೆಟ್ಟಿ ವಿಜಯವಾಣಿಗೆ ತಿಳಿಸಿದರು.
ಕೆಎಸ್ಎಫ್ಎ ಸಾಮಾಜಿಕ ಸೇವೆ
ಎಲ್ಲ ಸಂಸ್ಥೆಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಲಾಕ್ಡೌನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯಹಸ್ತ ಚಾಚಿದೆ. ಮನೆಯಲ್ಲೇ ಲಾಕ್ ಆಗಿರುವವರಿಗೆ ಮೆಡಿಸಿನ್ ತಲುಪಿಸುವುದು ಸೇರಿದಂತೆ ಇನ್ನಿತರ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿದೆ. ಲಾಕ್ಡೌನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆರವಾಗುವುದೇ ನಮ್ಮ ಉದ್ದೇಶ. ಎಂದು ಕೆಎಸ್ಎಫ್ಎ ಕಾರ್ಯದರ್ಶಿ ಸತ್ಯನಾರಾಯಣ ತಿಳಿಸಿದ್ದಾರೆ.
ತಿಂಗಳ ಆರಂಭದಲ್ಲೇ ಸಂಬಳ ನೀಡಲಾಗಿದೆ. ಎಲ್ಲರಿಗೂ ಪ್ರತ್ಯೇಕವಾಗಿ ರೇಷನ್ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಸದ್ಯ ಯಾವುದೇ ಕೆಲಸ ನಡೆಯದಿದ್ದರೂ ಸಂಬಳ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಕರೊನಾ ವೈರಸ್ ಭೀತಿ ಮುಗಿಯುವವರೆಗೂ ಅವರ ಹಿತರಕ್ಷಣೆಗೆ ಕೆಎಸ್ಸಿಎ ಬದ್ಧವಾಗಿದೆ. | ಸಂತೋಷ್ ಮೆನನ್ ಕೆಎಸ್ಸಿಎ ಕಾರ್ಯದರ್ಶಿ ಸುಮಾರು ಅರವತ್ತು ನೌಕರರಿಗೂ ಮಾರ್ಚ್ ತಿಂಗಳ ಸಂಬಳ ನೀಡಿದ್ದೇವೆ. ನೌಕರರ ಹಿತ ಕಾಯಲು ಸಂಪೂರ್ಣ ಬದ್ಧವಾಗಿದ್ದೇವೆ. ಇತರ ವ್ಯವಸ್ಥೆಗಳಿಗಿಂತ, ಅವರಿಗೆ ಸಂಬಳ ನೀಡಿದರೆ ತುಂಬ ಅನುಕೂಲವಾಗುತ್ತದೆ. | ಕಣ್ಣನ್ ಕೃಷ್ಣಮೂರ್ತಿ ಕೆಎಸ್ಎಚ್ಎ ಕಾರ್ಯದರ್ಶಿ
| ರಘುನಾಥ್ ಡಿ.ಪಿ.