

ಟೋಕಿಯೊ: ಕರೊನಾ ಮಹಾಮಾರಿಯಿಂದಾಗಿ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡಿಕೆ ಮಾಡಿರುವುದರಿಂದ ಸಾವಿರಾರು ಕೋಟಿ ರೂಪಾಯಿ ಹೆಚ್ಚುವರಿ ಖರ್ಚು ಮಾಡಬೇಕಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬಾಷ್ ಹೇಳಿದ್ದಾರೆ.
ಈ ವರ್ಷದ ಜುಲೈ-ಆಗಸ್ಟ್ನಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ಅನ್ನು ಮುಂದಿನ ವರ್ಷದ ಜುಲೈ- ಆಗಸ್ಟ್ಗೆ ಮುಂದೂಡಿಕೆ ಮಾಡಿರುವುದರಿಂದ ಒಟ್ಟು 45ಸಾವಿರ ಕೋಟಿ ರೂ. ಹೆಚ್ಚುವರಿ ಖರ್ಚಾಗಲಿದೆ. ಈ ಪೈಕಿ 15 ಸಾವಿರ ಕೋಟಿ ರೂ.ಗಳನ್ನು ಆತಿಥೇಯ ಜಪಾನ್ ಭರಿಸಲಿದ್ದರೆ, ಉಳಿದ ಹೆಚ್ಚುವರಿ ಹೊರೆಯನ್ನು ಐಒಸಿ ನಿಭಾಯಿಸಬೇಕಿದೆ. 2013ರಲ್ಲಿ ಜಪಾನ್ಗೆ ಟೋಕಿಯೊ ಗೇಮ್್ಸ ಆತಿಥ್ಯದ ಹಕ್ಕು ನೀಡುವಾಗ ಇಂಥದ್ದೊಂದು ಒಪ್ಪಂದಕ್ಕೆ ಜಪಾನ್ ಸರ್ಕಾರ ಮತ್ತು ಐಒಸಿ ಸಹಿ ಹಾಕಿತ್ತು. ಇದರಂತೆ ಜಪಾನ್ ಸರ್ಕಾರ ಮತ್ತು ಐಒಸಿ ಹೆಚ್ಚುವರಿ ಖರ್ಚಿನ ಹೊರೆಯನ್ನು ಹಂಚಿಕೊಳ್ಳಲಿವೆ ಎಂದು ಬಾಷ್ ಜರ್ಮನಿ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. 7 ವರ್ಷಗಳ ಹಿಂದೆ ಟೋಕಿಯೊ ಗೇಮ್್ಸ ಆತಿಥ್ಯದ ಹಕ್ಕನ್ನು ಪಡೆದಾಗ ಸಂಘಟಕರು 55 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಯೋಜಿಸುವ ಯೋಜನೆ ಹಾಕಿಕೊಂಡಿದ್ದರು. ಆದರೆ, ಸಂಘಟಕರ ಹಾಲಿ ಲೆಕ್ಕಾಚಾರದ ಪ್ರಕಾರ ಗೇಮ್್ಸ ಆಯೋಜನೆಗೆ ಈಗಾಗಲೆ 96 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. 2019ರ ಜಪಾನ್ ಸರ್ಕಾರದ ಲೆಕ್ಕಪತ್ರ ಪರಿಶೋಧಕರ ವರದಿಯ ಪ್ರಕಾರ ಇದಕ್ಕಿಂತ ದ್ವಿಗುಣ ಖರ್ಚು ಮಾಡಲಾಗಿದೆ. ತೆರಿಗೆದಾರರ ಹಣದಿಂದ 42 ಸಾವಿರ ಕೋಟಿ ರೂ. ಬಳಸಿಕೊಳ್ಳಲಾಗಿದೆ ಎಂದೂ ಹೇಳಲಾಗಿದೆ.
ಮತ್ತೆ ಮುಂದೂಡಿಕೆ ಇಲ್ಲ, ರದ್ದು!
ಟೋಕಿಯೊ ಗೇಮ್್ಸ ಸಂಘಟನಾ ಸಮಿತಿಯ ಸಿಇಒ ಟೊಶಿರೊ ಮುಟೊ ಇತ್ತೀಚೆಗೆ ನೀಡಿರುವ ಹೇಳಿಕೆಯ ಪ್ರಕಾರ, ಮುಂದಿನ ವರ್ಷವೂ ಟೋಕಿಯೊ ಒಲಿಂಪಿಕ್ಸ್ ಆಯೋಜನೆಗೊಳ್ಳುವುದು ಅನುಮಾನವೆನಿಸಿದೆ. ಈ ಬಗ್ಗೆ ಥಾಮಸ್ ಬಾಷ್ ನೇರವಾಗಿ ಪ್ರತಿಕ್ರಿಯೆ ನೀಡದಿದ್ದರೂ, ‘ಮುಂದಿನ ವರ್ಷ ಒಲಿಂಪಿಕ್ಸ್ ಆಯೋಜನೆಗೊಳ್ಳದಿದ್ದರೆ ಮತ್ತಷ್ಟು ಮುಂದೂಡಿಕೆ ಮಾಡಿದರೆ ಅದನ್ನು ನಿಭಾಯಿಸುವ ಶಕ್ತಿ ತಮಗಿಲ್ಲ ಎಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಸಂಘಟನಾ ಸಮಿತಿಯವರು ತಿಳಿಸಿದ್ದಾರೆ’ ಎಂದಿದ್ದಾರೆ.