

ಪ್ಯಾರಿಸ್: ಯುರೋಪ್ನ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿ ಯುರೋಕಪ್ಗೆ ಇನ್ನು 100 ದಿನಗಳಷ್ಟೇ ಬಾಕಿ ಉಳಿದಿದೆ. ಆದರೆ ಯುರೋಪ್ನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾರಕ ಕರೊನಾ ವೈರಸ್ ಭೀತಿಯಿಂದಾಗಿ ಟೂರ್ನಿ ನಿಗದಿಯಂತೆ ನಡೆಯುವ ಬಗ್ಗೆಯೇ ಈಗ ಅನುಮಾನಗಳು ಹುಟ್ಟಿಕೊಂಡಿವೆ.
24 ತಂಡಗಳ ಟೂರ್ನಿಯ ಆತಿಥ್ಯವನ್ನು ಇದೇ ಮೊದಲ ಬಾರಿಗೆ ಒಂದೆರಡು ದೇಶಗಳಿಗೆ ಸೀಮಿತಗೊಳಿಸದೆ, ಯುರೋಪ್ನ 12 ದೇಶಗಳ 12 ನಗರಗಳಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಜೂನ್ 12ರಿಂದ ಜುಲೈ 12ರವರೆಗೆ ಒಂದು ತಿಂಗಳ ಕಾಲ ನಡೆಯಲಿರುವ ಟೂರ್ನಿಗೆ ಈಗಾಗಲೆ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಟೂರ್ನಿಗೆ ಯಾವುದೇ ರೀತಿಯ ಭದ್ರತಾ ಕಳವಳಗಳೂ ಇಲ್ಲ.
ಆದರೆ ಇದೀಗ ಒಮ್ಮೆಲೆ ಕಾಣಿಸಿಕೊಂಡಿರುವ ಮಹಾಮಾರಿ ಕರೊನಾದಿಂದಾಗಿ ಟೂರ್ನಿಯ ಮೇಲೆ ಕಾಮೋಡ ಆವರಿಸಿದೆ. ಯುರೋಪ್ನಲ್ಲಿ ಕರೊನಾದಿಂದ ಅತಿಹೆಚ್ಚು ತೊಂದರೆ ಎದುರಿಸುತ್ತಿರುವ ಇಟಲಿಯಲ್ಲೂ ಯುರೋ ಕಪ್ ಪಂದ್ಯಗಳು ನಡೆಯಬೇಕಿದೆ. ಕರೊನಾದಿಂದ 52 ಮಂದಿ ಮೃತಪಟ್ಟಿರುವ ಇಟಲಿಯಲ್ಲಿ ಈಗಾಗಲೆ ಸೆರೀ ಎ ಟೂರ್ನಿಯ ಪಂದ್ಯಗಳು ರದ್ದುಗೊಂಡಿವೆ. ನೆರೆಯ ದೇಶ ಸ್ವಿಜರ್ಲೆಂಡ್ನಲ್ಲೂ ಇದುವರೆಗೆ 24 ಕರೊನಾ ಪ್ರಕರಣಗಳು ಪತ್ತೆಯಾಗಿವೆ.
‘ಯಾವುದೇ ಫುಟ್ಬಾಲ್ ಪಂದ್ಯಕ್ಕಿಂತ ಜನರ ಆರೋಗ್ಯ ಅತ್ಯಂತ ಪ್ರಮುಖವಾದುದು’ ಎಂದು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೋ ಕಳೆದ ವಾರಾಂತ್ಯದಲ್ಲಿ ಹೇಳಿಕೆ ನೀಡಿದ್ದರು. ‘ಆರೋಗ್ಯಕ್ಕೆ ಮೊದಲ ಆದ್ಯತೆ. ಕ್ರೀಡೆಗೆ ನಂತರದ ಸ್ಥಾನ’ ಎಂದು ವೇಲ್ಸ್ ಫುಟ್ಬಾಲ್ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೊನಾಥನ್ ಫೋರ್ಡ್ ಹೇಳಿದ್ದಾರೆ. ವೇಲ್ಸ್ ತಂಡ ಯುರೋಕಪ್ನಲ್ಲಿ ಇಟಲಿಯ ರೋಮ್ಲ್ಲೇ ತನ್ನ ಪಂದ್ಯಗಳನ್ನು ಆಡಬೇಕಿರುವುದರಿಂದ ಫೋರ್ಡ್ ಹೇಳಿಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಆಮ್್ಟರ್ಡ್ಯಾಂನಲ್ಲಿ ಸೋಮವಾರ ನಡೆದ ಯುರೋಪಿಯನ್ ಫುಟ್ಬಾಲ್ ಸಂಸ್ಥೆಯ (ಯುಇಎಫ್ಎ) ಆಡಳಿತ ಮಂಡಳಿಯ ಸಭೆಯಲ್ಲಿ ಕರೊನಾ ಭೀತಿಯ ಬಗ್ಗೆ ಚರ್ಚೆಗಳು ನಡೆದಿವೆ. ಆದರೆ ಸದ್ಯಕ್ಕೆ ಕಾದುನೋಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೀಗಾಗಿ ಸದ್ಯಕ್ಕೆ ಹಾಲಿ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಪರಿಸ್ಥಿತಿಯ ಬಗ್ಗೆ ಗಮನವಿಡಲಾಗುವುದು ಎಂದು ಯುಇಎಫ್ಎ ತಿಳಿಸಿದೆ. ಕರೊನಾ ಭೀತಿ ಮುಂದುವರಿದರೆ ಟೂರ್ನಿಯ ಪಂದ್ಯಗಳಿಗೆ ಪ್ರೇಕ್ಷಕರ ಕೊರತೆಯೂ ಕಾಡಲಿದೆ.
ಯುರೋಕಪ್-2020ಗೆ ಆತಿಥ್ಯ ವಹಿಸಲಿರುವ ದೇಶಗಳು: ಅಜರ್ಬೈಜಾನ್, ಬೆಲಾರಸ್, ಬೆಲ್ಜಿಯಂ, ಬಲ್ಗೇರಿಯಾ, ಡೆನ್ಮಾರ್ಕ್, ಇಂಗ್ಲೆಂಡ್, ಜರ್ಮನಿ, ಹಂಗೆರಿ, ಇಸ್ರೇಲ್, ಇಟಲಿ, ಮೆಸೆಡೋನಿಯಾ, ನೆದರ್ಲೆಂಡ್, ಐರ್ಲೆಂಡ್, ರೊಮೇನಿಯಾ, ರಷ್ಯಾ, ಸ್ಕಾಟ್ಲೆಂಡ್, ಸ್ಪೇನ್, ಸ್ವೀಡನ್, ವೇಲ್ಸ್.