

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಚಳಿಗಾಲ ಆರಂಭವಾಗುವುದಕ್ಕೆ ಮುನ್ನ ಏಪ್ರಿಲ್ನಲ್ಲಿ ವೈವಾಹಿಕ ಜೀವನಕ್ಕೆ ಸಿದ್ಧರಾಗಿದ್ದ ಹಲವು ಕ್ರಿಕೆಟಿಗರ ಯೋಜನೆಗೆ ಕರೊನಾ ಸೋಂಕಿನ ಹಾವಳಿ ಅಡ್ಡಿಪಡಿಸಿದೆ.
ಆಸ್ಟ್ರೇಲಿಯಾದ 8 ಅಂತಾರಾಷ್ಟ್ರೀಯ ಕ್ರಿಕೆಟಿಗರ ವಿವಾಹ ಯೋಜನೆ ಈಗ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ವೇಗಿ ಪ್ಯಾಟ್ ಕಮ್ಮಿನ್ಸ್, ಸ್ಪೋಟಕ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ವೆಲ್, ಸ್ಪಿನ್ನರ್ ಆಡಂ ಜಂಪಾ, ವೇಗಿ ಆಂಡ್ರೊ್ಯೕ ಟೈ, ಬ್ಯಾಟ್ಸ್ಮನ್ ಡಾರ್ಸಿ ಶಾರ್ಟ್, ಆಲ್ರೌಂಡರ್ ಜಾಕ್ಸನ್ ಬರ್ಡ್, ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್, ಮಹಿಳಾ ತಂಡದ ಎಡಗೈ ಸ್ಪಿನ್ನರ್ ಜೆಸ್ ಜೊನಾಸೆನ್ ಶೀಘ್ರದಲ್ಲೇ ವಿವಾಹವಾಗುವ ಯೋಜನೆಯಲ್ಲಿದ್ದರು.
ಆಸ್ಟ್ರೇಲಿಯಾದಲ್ಲಿ ಸದ್ಯ ಸಭೆ-ಸಮಾರಂಭಗಳಿಗೆ ನಿರ್ಬಂಧವಿದ್ದರೂ, ವಿವಾಹ ಕಾರ್ಯಕ್ರಮದಲ್ಲಿ ಗರಿಷ್ಠ ಐವರು ಪಾಲ್ಗೊಳ್ಳಲು ಅವಕಾಶವಿದೆ. ಆದರೆ ಇವರೆಲ್ಲರೂ ತಮ್ಮ ಜೀವನದ ವಿಶೇಷ ದಿನ ಕನಸಿನ ಪ್ರಕಾರವೇ ನನಸಾಗಬೇಕೆಂದು ಬಯಸಿದ್ದು, ವಿವಾಹ ಯೋಜನೆಯನ್ನೇ ಮುಂದೂಡಿ ಹಾಲಿ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸುವ ಸಂಕಲ್ಪ ಮಾಡಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ಭಾರತ ಮೂಲದ ವಿನಿ ರಾಮನ್ ಜತೆಗೆ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.