ಉನ್ನತ ಕನಸು ಸಾಕಾರಗೊಳಿಸಲು ನಿರಂತರ ಪರಿಶ್ರಮ ಅವಶ್ಯ

Inter College Tournament
ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಸೆಪಕ್ ಟಕ್ರಾ ಪಂದ್ಯಾವಳಿ, ಕಾರ್ಯಾಗಾರವನ್ನು ಎಂಎಲ್‌ಸಿ ಡಾ. ಧನಂಜಯ ಸರ್ಜಿ ಉದ್ಘಾಟಿಸಿದರು. ಡಾ. ಎನ್.ಡಿ.ವಿರೂಪಾಕ್ಷಪ್ಪ, ಡಾ. ಬಿ.ಜಿ.ಚನ್ನಪ್ಪ, ರೇಖ್ಯಾನಾಯ್ಕ್, ಡಾ. ವಿದ್ಯಾ ಮರಿಯಾ ಜೋಸೆಫ್ ಇತರರಿದ್ದರು.
Published on

ಶಿವಮೊಗ್ಗ: ಕ್ರೀಡೆಗಳು ಮನುಷ್ಯರಲ್ಲಿ ಸ್ಪರ್ಧಾ ಮನೋಭಾವ ವೃದ್ಧಿಸಿ ಆರೋಗ್ಯಕರ ವಾತಾವರಣಕ್ಕೆ ಕಾರಣವಾಗುತ್ತವೆ. ಮನುಷ್ಯನ ಮಿದುಳಿನ ಕ್ರಿಯಾಶಕ್ತಿಗೆ ಮೂಲವಾಗಿದೆ ಎಂದು ಎಂಎಲ್‌ಸಿ ಡಾ. ಧನಂಜಯ ಸರ್ಜಿ ಹೇಳಿದರು.

ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಬಾಪೂಜಿನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕ್ರೀಡಾ ವಿಭಾಗದಿಂದ ಗುರುವಾರ ಏರ್ಪಡಿಸಿದ್ದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಸೆಪಕ್ ಟಕ್ರಾ ಪಂದ್ಯಾವಳಿ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಿದುಳನ್ನು ಹರಿತಗೊಳಿಸುವ ಕೆಲಸವನ್ನು ಕ್ರೀಡೆಗಳು ಮಾಡುತ್ತವೆ. ಮನುಷ್ಯನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಸದುದ್ದೇಶಗಳ ಕಡೆಗೆ ಕೊಂಡೊಯ್ಯಬಲ್ಲ ಚಾಲಕಶಕ್ತಿ ಕ್ರೀಡೆಗಳಿಂದ ಆಗುತ್ತದೆ ಎಂದು ತಿಳಿಸಿದರು.

ಬೆಳೆ ಹಾಳಾದರೆ ಒಂದು ವರ್ಷದ ಅನ್ನ ಹಾಳದಂತೆ, ಅಡುಗೆ ಹಾಳಾದರೆ ಒಂದು ದಿನದ ಊಟ ನಷ್ಟವಾದಂತೆ. ಆದರೆ ಬುದ್ಧಿ ಹಾಳಾದರೆ ಜೀವನವೇ ಹಾಳದಂತೆ. ಕ್ರೀಡೆಯಲ್ಲಿ ಸೋಲುಗೆಲುವು ಮುಖ್ಯವಲ್ಲ, ಭಾಗವಹಿಸುವುದು ಬಹಳ ಮುಖ್ಯ. ನಾವು ನಮ್ಮ ಸಾಮರ್ಥ್ಯ ಹೋಲಿಸಿಕೊಂಡು ಪ್ರಯತ್ನಪಡಬೇಕು. ಆಗ ಗೆಲುವು ಸುಲಭವಾಗುತ್ತ ಹೋಗುತ್ತದೆ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಡಾ. ಎನ್.ಡಿ.ವಿರೂಪಾಕ್ಷಪ್ಪ ಮಾತನಾಡಿ, ಕ್ರೀಡೆಯ ಜತೆಗೆ ಓದು ಬಹಳ ಮುಖ್ಯ. ಶ್ರದ್ಧೆ ಮತ್ತು ಪ್ರಾಮಾಣಿಕತೆ ಮೂಲಕ ಗೆಲುವು ನಿಮ್ಮದಾಗಲಿ ಎಂದರು.

ಪ್ರಾಚಾರ್ಯ ಡಾ. ಬಿ.ಜಿ.ಚನ್ನಪ್ಪ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಉತ್ತಮ ಆರೋಗ್ಯದೊಂದಿಗೆ ಸಮಾಜವನ್ನು ಕಟ್ಟುವ ಹೊಣೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಹೈಜಂಪ್‌ನಲ್ಲಿ ಕಂಚಿನ ಪದಕ ಪಡೆದ ನಗರದ ಡಿವಿಎಸ್ ಕಾಲೇಜಿನ ಸುದೀಪ್ ಅವರನ್ನು ಸನ್ಮಾನಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕಾ, ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ. ವಿದ್ಯಾ ಮರಿಯಾ ಜೋಸೆಫ್, ಗ್ರಂಥಪಾಲಕ ಕೃಷ್ಣನಾಯ್ಕ, ಪಂದ್ಯಾವಳಿ ಸಂಚಾಲಕ ಜಯಕೀರ್ತಿ, ಡಾ. ರಾಜಶ್ರೀ, ಡಾ. ಎಸ್.ಕೆ.ಮೋಹನ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net