ಆಸ್ಟ್ರೇಲಿಯಾದಲ್ಲಿ ಒಳಾಂಗಣ ಟೆಸ್ಟ್​ ಕ್ರಿಕೆಟ್​ ಸ್ಟೇಡಿಯಂ ನಿರ್ಮಾಣ! 51 ಮೀಟರ್​ ಎತ್ತರದ ಪಾರದರ್ಶಕ ಮೇಲ್ಛಾವಣಿ!

web inore test
Published on

ಹೋಬರ್ಟ್​: ಆಸ್ಟ್ರೆಲಿಯನ್​ ಫುಟ್​ಬಾಲ್​ ಲೀಗ್​ಗೆ (ಎಎ್​ಎಲ್​) ಸೇರ್ಪಡೆಯಾಗಲಿರುವ ಟಾಸ್ಮೇನಿಯನ್​ ತಂಡ ಹೋರ್ಬಟ್​ನಲ್ಲಿ ನೂತನ ಒಳಾಂಗಣ ಕ್ರೀಡಾಂಗಣವೊಂದನ್ನು ನಿರ್ಮಿಸಲು ರೂಪುರೇಷೆ ಸಿದ್ಧಪಡಿಸಿದೆ. ವಿವಿಧೋದ್ದೇಶಗಳಿಗೆ ಬಳಕೆಯಾಗಬಲ್ಲ 23 ಸಾವಿರ ಆಸನ ವ್ಯವಸ್ಥೆಯ ಈ ಸ್ಟೇಡಿಯಂನಲ್ಲಿ ಒಳಾಂಗಣ ಟೆಸ್ಟ್​ ಪಂದ್ಯಗಳನ್ನೂ ಆಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂಬುದು ವಿಶೇಷ.

ಟಾಸ್ಮೇನಿಯನ್​ ಡೆವಿಲ್ಸ್​ ತಂಡ 2028ರಲ್ಲಿ ಎಎ್​ಎಲ್​ಗೆ 19ನೇ ತಂಡವಾಗಿ ಸೇರ್ಪಡೆಯಾಗಲಿದ್ದು, ಆ ವೇಳೆ "ಮ್ಯಾಕ್​ ಪಾಯಿಂಟ್​ ಮಲ್ಟಿಪರ್ಪಸ್​ ಸ್ಟೇಡಿಯಂ' ಹೆಸರಿನ ಹೊಸ ಕ್ರೀಡಾಂಗಣ ಮ್ಯಾಕ್ವಾರಿ ಪಾಯಿಂಟ್​ನಲ್ಲಿ ಸಿದ್ಧವಾಗುವ ನಿರೀಕ್ಷೆ ಇದೆ. ಇದು ಪಾರದರ್ಶಕ ಮೇಲ್ಛಾವಣಿ ಹೊಂದಿರಲಿದೆ. ಇದರಿಂದ ನೆರಳಿನಿಂದ ಸಮಸ್ಯೆಯಾಗುವುದನ್ನೂ ತಪ್ಪಿಸಲಾಗುವುದು.

ಎಲ್ಲ ಕಾಲದಲ್ಲೂ ರೆಡ್​ಬಾಲ್​ ಕ್ರಿಕೆಟ್​ ಆಡುವಂತೆ ಸ್ಟೇಡಿಯಂ ರಚಿಸುವುದು ನಮ್ಮ ಗುರಿ. ಇದೇ ಧ್ಯೇಯದೊಂದಿಗೆ ಸ್ಟೇಡಿಯಂ ವಿನ್ಯಾಸಗೊಳಿಸಲಾಗಿದೆ. ಆದರೆ ಸ್ಟೇಡಿಯಂ ಸಿದ್ಧವಾಗುವವರೆಗೂ ಐಸಿಸಿ ಮಾನ್ಯತೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಕ್ರಿಕೆಟ್​ ಆಸ್ಟ್ರೆಲಿಯಾದ ಜತೆಗೂಡಿ ಸ್ಟೇಡಿಯಂ ವಿನ್ಯಾಸ ರೂಪಿಸಿದ್ದೇವೆ ಎಂದು ಮ್ಯಾಕ್ವಾರಿ ಪಾಯಿಂಟ್​ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಆನ್ನೆ ಬೀಚ್​ ತಿಳಿಸಿದ್ದಾರೆ.

ಒಳಾಂಗಣದಲ್ಲಿ ಕ್ರಿಕೆಟ್​ ಆಡಬೇಕಾದರೆ ಮೇಲ್ಛಾವಣಿ ಸಾಕಷ್ಟು ಎತ್ತರದಲ್ಲಿರಬೇಕು. ಚೆಂಡು ಮೇಲ್ಛಾವಣಿಗೆ ಬಡಿಯುತ್ತದೆ ಎಂಬ ಕಾರಣಕ್ಕಾಗಿಯೇ ಮೆಲ್ಬೋರ್ನ್​ನ ಮಾರ್ವೆಲ್​ ಒಳಾಂಗಣ ಕ್ರೀಡಾಂಗಣ ತಿರಸತಗೊಂಡಿದೆ. ಹೀಗಾಗಿ ನಾವು 51 ಮೀಟರ್​ ಎತ್ತರ ಮೇಲ್ಛಾವಣಿ ನಿರ್ಮಿಸಲಿದ್ದೇವೆ. ಬಾಲ್​ ಟ್ರಾ$್ಯಕಿಂಗ್​, ಹಾಕ್​&ಐ ಮುಂತಾದ ತಂತ್ರಜ್ಞಾನಗಳ ಡೇಟಾ ಪರಿಶೀಲನೆಯ ಬಳಿಕ, ಯಾವ ಬ್ಯಾಟರ್​ ಕೂಡ 50 ಮೀಟರ್​ಗಿಂತ ಎತ್ತರಕ್ಕೆ ಚೆಂಡನ್ನು ಬಾರಿಸಿರುವ ದೃಷ್ಟಾಂತ ಕಾಣಿಸಿಲ್ಲ ಎಂದು ಕಾಕ್ಸ್​ ಆರ್ಕಿಟೆಕ್ಚರ್​ ಸಿಇಒ ಅಲಿಸ್ಟೆ$ರ್​ ರಿಚರ್ಡ್​ಸನ್​ ವಿವರಿಸಿದ್ದಾರೆ.

ಮೆಲ್ಬೋರ್ನ್​ನ 48 ಸಾವಿರ ಆಸನ ವ್ಯವಸ್ಥೆಯ ಮಾರ್ವೆಲ್​ ಒಳಾಂಗಣ ಸ್ಟೇಡಿಯಂನಲ್ಲಿ 2000ದಿಂದ 2006ರ ನಡುವೆ 12 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿತ್ತು. ಇಲ್ಲಿ ಕೆಲ ಬಿಗ್​ ಬಾಷ್​ ಲೀಗ್​ ಟಿ20 ಪಂದ್ಯಗಳೂ ನಡೆದಿವೆ. ಆದರೆ ಟೆಸ್ಟ್​ ಪಂದ್ಯವನ್ನು ಯಾವತ್ತೂ ಒಳಾಂಗಣದಲ್ಲಿ ಆಡಿದ ದೃಷ್ಟಾಂತವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net