

ಜೊಹಾನ್ಸ್ಬರ್ಗ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ "ಬಾಕ್ಸಿಂಗ್ ಡೇ'ಯಂದು (ಡಿಸೆಂಬರ್ 26) ಶುರುವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಆಡುವ 11ರ ಬಳಗದ ಸಂಯೋಜನೆ ಭಾರತಕ್ಕೆ ತಲೆನೋವಾಗಿದೆ. ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಮಾನಸಿಕ ಆಯಾಸ ಮತ್ತು ವೇಗಿ ಮೊಹಮದ್ ಶಮಿ ಗಾಯದಿಂದಾಗಿ ಸರಣಿಗೆ ಅಲಭ್ಯರಾಗಿರುವುದು ಭಾರತಕ್ಕೆ ಹಿನ್ನಡೆ ತಂದಿದೆ. ಕಿಶನ್ ಗೈರಿನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಟೆಸ್ಟ್ನಲ್ಲೂ ವಿಕೆಟ್ ಕೀಪಿಂಗ್ ನಿರ್ವಹಿಸುವ ಸಾಧ್ಯತೆ ಇದ್ದರೆ, ಶಮಿ ಸ್ಥಾನವನ್ನು ತುಂಬಲು ಕನ್ನಡಿಗ ಪ್ರಸಿದ್ಧಕೃಷ್ಣ ಮತ್ತು ಮುಕೇಶ್ ಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಕೆಎಲ್ ರಾಹುಲ್ ಈಗಾಗಲೆ ಏಕದಿನ ವಿಶ್ವಕಪ್ನಲ್ಲಿ ವಿಕೆಟ್ ಕೀಪರ್ ಆಗಿ ಉತ್ತಮ ಯಶಸ್ಸು ಕಂಡಿದ್ದಾರೆ. ಇದರಿಂದಾಗಿ ದಕ್ಷಿಣ ಆಫ್ರಿಕಾದ ಸವಾಲಿನ ಪಿಚ್ನಲ್ಲೂ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಲು ನಾಯಕ ರೋಹಿತ್ ಶರ್ಮ ಮತ್ತು ಕೋಚ್ ರಾಹುಲ್ ದ್ರಾವಿಡ್ ಮುಂದಾಗಿದ್ದಾರೆ. ಕಿಶನ್ ಬದಲಿಗೆ ಕೆಎಸ್ ಭರತ್ ಕೀಪರ್ ಆಗಿ ಟೆಸ್ಟ್ ತಂಡ ಸೇರಿದ್ದಾರೆ. ಆದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಸಹಿತ ಕಳೆದ 5 ಟೆಸ್ಟ್ ಪಂದ್ಯಗಳಲ್ಲಿ ಒಂದೂ ಅರ್ಧಶತಕ ಬಾರಿಸದೆ ಭರತ್ ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಬ್ಯಾಟಿಂಗ್ನಲ್ಲೂ ಉಪಯುಕ್ತರಾಗಬಹುದಾದ ರಾಹುಲ್ಗೆ ಕೀಪಿಂಗ್ ವಹಿಸುವುದು ಉತ್ತಮ ಆಯ್ಕೆ ಎನಿಸಿದೆ.
ಸೆಂಚುರಿಯನ್ ಪಿಚ್ ವೇಗದ ಬೌಲರ್ಗಳ ಸ್ವರ್ಗವೆನಿಸಿದೆ. ಕಳೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಮುಕೇಶ್ ಕುಮಾರ್, ದಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ನಿರೀತ ನಿರ್ವಹಣೆ ತೋರಿಲ್ಲ. ಹೀಗಾಗಿ ದಣ ಆಫ್ರಿಕಾದಲ್ಲಿ ಭಾರತ ಎ ತಂಡದ ಪರ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮತ್ತು ಭಾರತ ತಂಡದೊಳಗಿನ ತ್ರಿದಿನ ಅಭ್ಯಾಸ ಪಂದ್ಯದಲ್ಲೂ ಮಿಂಚಿರುವ ಪ್ರಸಿದ್ಧಕೃಷ್ಣರನ್ನು ಕಣಕ್ಕಿಳಿಸುವ ಚಿಂತನೆಯೂ ನಡೆದಿದೆ.
ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್ ಅಗ್ರ ಇಬ್ಬರು ವೇಗಿಗಳಾಗಿದ್ದರೆ, ಬ್ಯಾಟಿಂಗ್ ಸಾಮರ್ಥ್ಯದಿಂದಾಗಿ ಶಾರ್ದೂಲ್ ಠಾಕೂರ್ 4ನೇ ವೇಗಿಯಾಗಿ ಆಡಬಹುದು.
ಸಂಭಾವ್ಯ 11ರ ಬಳಗ: ರೋಹಿತ್ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮದ್ ಸಿರಾಜ್, ಮುಕೇಶ್ ಕುಮಾರ್/ಪ್ರಸಿದ್ಧ ಕೃಷ್ಣ, ಜಸ್ಪ್ರೀತ್ ಬುಮ್ರಾ.
ಅಶ್ವಿನ್ಗೆ ಮತ್ತೆ ನಿರಾಸೆ?
ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಫೈನಲ್ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದ ಅನುಭವಿ ಸ್ಪಿನ್ನರ್ ಹಾಗೂ ವಿಶ್ವ ನಂ. 1 ಟೆಸ್ಟ್ ಬೌಲರ್ ಆರ್. ಅಶ್ವಿನ್, ದ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಿಂದಲೂ ಹೊರಗುಳಿಯುವ ಸಾಧ್ಯತೆಗಳಿವೆ. ಸೆಂಚುರಿಯನ್ ಪಿಚ್ ಸ್ಪಿನ್ನರ್ಗಳಿಗೆ ನೆರವು ನೀಡುವ ನಿರೀಕ್ಷೆ ಇಲ್ಲ. ಹೀಗಾಗಿ ರವೀಂದ್ರ ಜಡೇಜಾ ಒಬ್ಬರೇ ಸ್ಪಿನ್ನರ್ ಆಗಿ ಕಣಕ್ಕಿಳಿಯಬಹುದು. ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪೂರೈಸಲು 11 ವಿಕೆಟ್ ಕೊರತೆ ಎದುರಿಸುತ್ತಿರುವ ಅಶ್ವಿನ್, ಇದನ್ನು ಸಾಧಿಸಲು ಮುಂದಿನ ವರ್ಷ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯವರೆಗೆ ಕಾಯಬೇಕಾಗಬಹುದು.
ಮೊದಲ ಟೆಸ್ಟ್ಗೆ ಮಳೆ ಭೀತಿ
ಸೆಂಚುರಿಯನ್ನ ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡಚಣೆ ತರುವ ಭೀತಿ ಹರಡಿದೆ. ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಕಾಡುವ ಭೀತಿ ಶೇ. 96ರಷ್ಟಿದೆ. 2ನೇ ದಿನಕ್ಕೆ ಮಳೆ ಭೀತಿ ಶೇ. 25ಕ್ಕೆ ತಗ್ಗಲಿದೆ. 3ನೇ ದಿನದಾಟದಲ್ಲಿ ಬೆಳಗ್ಗಿನ ಅವಧಿಗೆ ಮಾತ್ರ ಮಳೆ ಭೀತಿ ಇದೆ. 4 ಮತ್ತು 5ನೇ ದಿನದಾಟಗಳಲ್ಲಿ ಮಳೆ ಕಾಡುವ ಭೀತಿ ಮತ್ತೆ ಶೇ. 60ಕ್ಕೆ ಏರಿಕೆಯಾಗಲಿದೆ.
ಅಭಿಮನ್ಯು ಈಶ್ವರನ್ ಸೇರ್ಪಡೆ
ಕೈಬೆರಳು ಗಾಯದಿಂದಾಗಿ ದ. ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ಆರಂಭಿಕ ಋತುರಾಜ್ ಗಾಯಕ್ವಾಡ್ ಬದಲಿಗೆ ಬಂಗಾಳದ ಅಭಿಮನ್ಯು ಈಶ್ವರನ್ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ ಈಗಾಗಲೆ ದಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಎ ತಂಡದ ನಾಯಕರಾಗಿರುವ ಅಭಿಮನ್ಯು ಈಶ್ವರನ್ ಜನವರಿ 3ರಿಂದ ಕೇಪ್ಟೌನ್ನಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯಕ್ಕೆ ಮಾತ್ರ ಲಭ್ಯರಿರುತ್ತಾರೆ. ಏಕದಿನ ಸರಣಿಯಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಋತುರಾಜ್ ಗಾಯಕ್ವಾಡ್ ಬೆಂಗಳೂರಿನ ಎನ್ಸಿಎಯಲ್ಲಿ ಚಿಕಿತ್ಸೆ-ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ.
ಭಾರತ ಎ ತಂಡದಲ್ಲಿ ಬದಲಾವಣೆ
ದಕ್ಷಿಣ ಆಫ್ರಿಕಾ ಎ ವಿರುದ್ಧ ಡಿಸೆಂಬರ್ 26ರಿಂದ ಬೆನೋನಿಯಲ್ಲಿ ನಡೆಯಲಿರುವ 2ನೇ ಹಾಗೂ ಅಂತಿಮ ಚತುರ್ದಿನ ಟೆಸ್ಟ್ ಪಂದ್ಯಕ್ಕೆ ಭಾರತ ಎ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ವೇಗಿ ಹರ್ಷಿತ್ ರಾಣಾ ಗಾಯದಿಂದಾಗಿ ಪಂದ್ಯದಿಂದ ಹೊರಬಿದ್ದಿದ್ದು, ಕುಲದೀಪ್ ಯಾದವ್ ತಂಡದಿಂದ ರಿಲೀಸ್ ಆಗಿದ್ದಾರೆ. ಸ್ರಾರ್ಜ್ ಖಾನ್ ಜತೆಗೆ ಏಕದಿನ ಸರಣಿಯಲ್ಲಿ ಆಡಿದ್ದ ರಜತ್ ಪಾಟೀದಾರ್, ಆವೇಶ್ ಖಾನ್ ಮತ್ತು ರಿಂಕು ಸಿಂಗ್ ಭಾರತ ಎ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವೇಗಿ ವಿದ್ವತ್ ಕಾವೇರಪ್ಪ ಭಾರತ ಎ ತಂಡದಲ್ಲಿರುವ ಏಕೈಕ ಕನ್ನಡಿಗರಾಗಿದ್ದಾರೆ.