

ನವದೆಹಲಿ: ಕೋಲ್ಕತಗೆ ತೆರಳುವ ವೇಳೆ ಮಹಿಳಾ ಬಾಕ್ಸರ್ಗೆ ರೈಲಿನಲ್ಲೇ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. 19 ವರ್ಷದ ಬಾಕ್ಸರ್ ಖಾಸಗಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಗೆ ಕೋಲ್ಕತದ ತೆರಳಿದ್ದ ವೇಳೆ ಈ ಘಟನೆ ಜರುಗಿದೆ.
ಕೋಲ್ಕತಗೆ ತೆರಳುತ್ತಿದ್ದ ವೇಳೆ ಬಾಕ್ಸರ್ಗೆ ಪದೆಪದೇ ಲೈಂಗಿಕ ಕಿರುಕುಳ ನೀಡಲಾಗಿತ್ತು. ದೆಹಲಿಯಲ್ಲಿ ರೈಲಿನಲ್ಲಿಯೇ ಕಿರುಕುಳ ನೀಡಿದ್ದರೆ, ಕೋಲ್ಕತದಲ್ಲಿ ತಂಗಿದ್ದ ಸ್ಥಳದಲ್ಲೇ ಇಂಥ ಕೃತ್ಯ ಎಸಗಿದ್ದರು ಎಂದು ವರದಿಯಾಗಿದೆ. ಫೆಬ್ರವರಿ ಕೊನೇ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಈ ಕೃತ್ಯ ನಡೆದಿದೆ. ಆರೋಪಿ 28 ವರ್ಷದ ಕೋಚ್ ಸಂದೀಪ್ ಮಲಿಕ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಆರೋಪಿ ತನ್ನ ಹೆಸರಿನಲ್ಲೇ ಹರಿಯಾಣದ ಸೋನಿಪತ್ನಲ್ಲಿ ಬಾಕ್ಸಿಂಗ್ ಅಕಾಡೆಮಿ ನಡೆಸುತ್ತಿದ್ದು, ಕೋಲ್ಕತದ ಟೂರ್ನಿಗೆ ಕರೆದೊಯ್ಯುವ ವೇಳೆ ಈ ಕೃತ್ಯ ಎಸಗಿದ್ದಾನೆ’ ಎಂದು ದೆಹಲಿಯ ರೈಲ್ವೆ ವಿಭಾಗದ ಉಪ ಪೊಲೀಸ್ ಆಯುಕ್ತ ಹರೇಂದ್ರ ಸಿಂಗ್ ತಿಳಿಸಿದ್ದಾರೆ. ಸುಮಾರು 12 ವಿದ್ಯಾರ್ಥಿಗಳು ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸಂದೀಪ್ ಮಲಿಕ್ ವಿದ್ಯಾರ್ಥಿಗಳು ರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಹರಿಯಾಣ ಪ್ರತಿನಿಧಿಸುತ್ತಿದ್ದು, ಫೆ.29ರಿಂದ ಮಾರ್ಚ್ 3ರವರೆಗೆ ಕೋಲ್ಕತದಲ್ಲಿ ನಡೆದ ಬಂಗಾಳ ಬಾಕ್ಸಿಂಗ್ ಕ್ಲಾಸಿಕ್-2020 ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು’ ಎಂದು ಡಿಸಿಪಿ ತಿಳಿಸಿದ್ದಾರೆ.
ದೆಹಲಿಯಿಂದ ಕೋಲ್ಕತಗೆ ದುರಂತೋ ಎಕ್ಸ್ ಪ್ರೆಸ್ನಲ್ಲಿ ಪ್ರಯಾಣ ಬೆಳೆಸಿದ್ದು, ರೈಲಿನಲ್ಲೂ ಹಾಗೂ ಕೋಲ್ಕತದಲ್ಲಿ ಸತತ 4 ದಿನಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ಕೋಲ್ಕತದಿಂದ ವಾಪಸಾದ ಬಳಿಕ ಸಂತ್ರಸ್ತೆ ಸ್ಥಳೀಯ ಪೋಲಿಸರಿಗೆ ದೂರು ನೀಡಿದ್ದಾರೆ. ಬಳಿಕ ಪ್ರಕರಣ ರೈಲ್ವೆ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಮಾಹಿತಿ ಸಂಗ್ರಹಿಸಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ ಎಂದು ಡಿಸಿಪಿ ತಿಳಿಸಿದರು. ಆರೋಪಿ ಕೋಚ್ಗೆ ಮದುವೆಯಾಗಿದ್ದು, 2 ಮಕ್ಕಳಿವೆ.