ಡಕ್ವರ್ತ್​-ಲೂಯಿಸ್​ ನಿಯಮಾವಳಿ ರೂಪಿಸಿದ್ದ ಡಕ್ವರ್ತ್​ ಇನ್ನಿಲ್ಲ

web dekverth
Published on

ಲಂಡನ್: ಕ್ರಿಕೆಟ್​ ಪಂದ್ಯಗಳಲ್ಲಿ ಮಳೆಯಿಂದಾಗಿ ಅಡಚಣೆಯಾದಾಗ ಫಲಿತಾಂಶ ನಿರ್ಧರಿಸಲು ಅಥವಾ ಪರಿಷ್ಕೃತ ಗುರಿ ನೀಡಲು ಬಳಸಲಾಗುವ ಡಕ್ವರ್ತ್​-ಲೂಯಿಸ್​-ಸ್ಟರ್ನ್​ (ಡಿಎಲ್​ಎಸ್​) ನಿಯಮಾವಳಿ ರೂಪಿಸಿದವರಲ್ಲಿ ಒಬ್ಬರಾದ ಇಂಗ್ಲೆಂಡ್​ನ ಸಂಖ್ಯಾಶಾಸ್ತ್ರಜ್ಞ ಫ್ರಾಂಕ್​ ಡಕ್ವರ್ತ್​ (83 ವರ್ಷ) ಕಳೆದ ಶುಕ್ರವಾರ ನಿಧನ ಹೊಂದಿದ್ದಾರೆ. ಇಎಸ್​ಪಿಎನ್​ ಕ್ರಿಕ್​ಇನ್ಫೋ ಡಾಟ್​ ಕಾಮ್​ ವೆಬ್​ಸೈಟ್​ ಈ ಬಗ್ಗೆ ತಡವಾಗಿ ವರದಿ ಮಾಡಿದೆ.

ಸಹ ಸಂಖ್ಯಾಶಾಸ್ತ್ರಜ್ಞ ಟೋನಿ ಲೂಯಿಸ್​ ಜತೆಗೂಡಿ ಡಕ್ವರ್ತ್​ ರೂಪಿಸಿದ್ದ ನಿಯಮ 1997ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮೊದಲ ಬಾರಿ ಬಳಕೆಯಾಗಿತ್ತು. 2001ರಿಂದ ಅಧಿಕೃತವಾಗಿ ಜಾರಿಯಲ್ಲಿದೆ. ಬಳಿಕ ಆಸ್ಟ್ರೆಲಿಯಾದ ಸಂಖ್ಯಾಶಾಸ್ತ್ರಜ್ಞ ಸ್ಟೀವನ್​ ಸ್ಟರ್ನ್​ 2014ರಲ್ಲಿ ಈ ನಿಯಮಾವಳಿಯಲ್ಲಿ ಕೆಲ ತಿದ್ದುಪಡಿಗಳನ್ನು ಮಾಡಿದ ಬಳಿಕ ಇದಕ್ಕೆ ಅವರ ಹೆಸರೂ ಸೇರ್ಪಡೆಗೊಂಡಿದೆ.

2010ರಲ್ಲಿ ಡಕ್ವರ್ತ್​-ಲೂಯಿಸ್​ ಇಬ್ಬರಿಗೂ ಬ್ರಿಟನ್​ನ ಪ್ರತಿಷ್ಠಿತ ಎಂಬಿಇ ಗೌರವ ಲಭಿಸಿತ್ತು. ಟೋನಿ ಲೂಯಿಸ್​ 2020ರಲ್ಲಿ 78ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು. 1992ರ ಏಕದಿನ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಆಗಿನ ವಿವಾದಾತ್ಮಕ ಮಳೆ ನಿಯಮದಲ್ಲಿನ ದೋಷದಿಂದಾಗಿ ಸೋಲು ಕಂಡ ಬಳಿಕ ಡಕ್ವರ್ತ್​-ಲೂಯಿಸ್​ ಹೊಸ ನಿಯಮಾವಳಿಯನ್ನು ರೂಪಿಸಿ ಐಸಿಸಿಗೆ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net