ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್: ಆತಿಥೇಯ ಕರ್ನಾಟಕ ತಂಡ ದಿಟ್ಟ ಉತ್ತರ

cricket
Published on

ಮೈಸೂರು: ಕೆ.ವಿ.ಅನೀಶ್(89* ರನ್, 148 ಎಸೆತ, 7 ಬೌಂಡರಿ) ಹಾಗೂ ಉಪ ನಾಯಕ ಅನೀಶ್ವರ್ ಗೌತಮ್(70* ರನ್, 140 ಎಸೆತ, 7 ಬೌಂಡರಿ, 2 ಸಿಕ್ಸರ್ ) ಜೋಡಿಯ ಅಜೇಯ ಅರ್ಧ ಶತಕದ ಜತೆಯಾಟದ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ(23 ವಯೋಮಿತಿಯೊಳಗಿನವರ ಕ್ರಿಕೆಟ್) ಹೈದರಾಬಾದ್ ತಂಡದ ವಿರುದ್ಧ ಇನಿಂಗ್ಸ್ ಮುನ್ನಡೆ ಕಾಯ್ದುಕೊಳ್ಳಲು ಹೋರಾಟ ನಡೆಸುತ್ತಿದೆ.

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಸೋಮವಾರ 6 ವಿಕೆಟ್‌ಗೆ 223 ರನ್‌ಗಳಿಂದ ಆಟ ಮುಂದುವರಿಸಿದ ಹೈದರಾಬಾದ್ ತಂಡ 107.3 ಓವರ್‌ಗಳಲ್ಲಿ 294 ರನ್‌ಗಳಿಗೆ ಸರ್ವಪತನ ಕಂಡಿತು.

ಪ್ರತಿಯಾಗಿ ದಿಟ್ಟ ಉತ್ತರ ನೀಡಲಾರಂಭಿಸಿದ ಕರ್ನಾಟಕ ತಂಡ 56 ಓವರ್‌ಗಳಲ್ಲಿ 3 ವಿಕೆಟ್‌ಗೆ 182 ರನ್ ದಾಖಲಿಸಿದೆ. ಆತಿಥೇಯ ಕರ್ನಾಟಕ ತಂಡ ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 113 ರನ್ ಗಳಿಸಬೇಕಿದೆ.

52 ರನ್‌ಗೆ ಆರಂಭಿಕ ರೋಹನ್ ಎ.ಪಾಟೀಲ್(1), ವಿಶಾಲ್ ಓಣತ್ (7) ಹಾಗೂ ನಾಯಕ ಆರ್.ಸ್ಮರಣ್(6) ವಿಕೆಟ್ ಕಳೆದುಕೊಂಡು ಆರಂಭಿಕ ಹಿನ್ನಡೆ ಎದುರಿಸಿದ ಕರ್ನಾಟಕ ತಂಡಕ್ಕೆ ಕೆ.ವಿ.ಅನೀಶ್ ಹಾಗೂ ಅನೀಶ್ವರ್ ಗೌತಮ್ ಅಜೇಯ ಅರ್ಧ ಶತಕ ಸಿಡಿಸಿ ನೆರವಾದರು. 4ನೇ ವಿಕೆಟ್‌ಗೆ ಜತೆಯಾದ ಈ ಜೋಡಿ 237 ಎಸೆತಗಳಲ್ಲಿ 130 ದಾಖಲಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಹೈದರಾಬಾದ್‌ನ ಎನ್.ನಿತಿನ್ ಸಾಯಿ ಯಾದವ್(2) ಹಾಗೂ ಭುವಂಗಗಿರಿ ಪುನ್ನಯ್ಯ(1) ವಿಕೆಟ್ ಪಡೆದರು.

ಇಲ್ಯಾನ್ ಸತಾನಿ ಶತಕ: ಮೊದಲ ದಿನ 94 ರನ್‌ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಹೈದರಾಬಾದ್ ತಂಡ ಇಲ್ಯಾನ್ ಸತಾನಿ(124) ಶತಕ ಸಿಡಿಸಿದರು. ಎರಡನೇ ದಿನವೂ 4 ಬೌಂಡರಿ ಸೇರಿದಂತೆ 26 ರನ್ ಪೇರಿಸಿದರು. ಸಿಟಿಎಲ್ ರಕ್ಷನ್(44), ಎನ್.ನಿತಿನ್ ಸಾಯಿ ಯಾದವ್(15), ಭುವಂಗಗಿರಿ ಪುನ್ನಯ್ಯ(*6) ರನ್ ಗಳಿಸಿದರು.

ಮೊದಲ ದಿನ ಮೂರು ವಿಕೆಟ್ ಕಬಳಿಸಿದ್ದ ಎಲ್.ಮನ್ವಂತ್‌ಕುಮಾರ್ ಸೋಮವಾರ ಇಲ್ಯಾನ್ ಸತಾನಿ ಹಾಗೂ ವರುಣ್(10) ವಿಕೆಟ್ ಕಬಳಿಸಿ ಐದು ವಿಕೆಟ್ ಸಾಧನೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net