ಆಪರೇಷನ್ ಸಿಂಧೂರ: ಭಾರತೀಯ ಸಶಸ್ತ್ರ ಪಡೆಗಳಿಗೆ ಕ್ರೀಡಾ ತಾರೆಯರ ಬೆಂಬಲ!

New Project (1)
Published on

ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಹಾಗೂ ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯ ತಾಣಗಳ ಮೇಲಿನ ದಾಳಿ ನಡೆಸಿದ ಭಾರತದ ಸಶಸ್ತ್ರ ಪಡೆಗಳ ಕಾರ್ಯಕ್ಕೆ ಕ್ರೀಡಾ ತಾರೆಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ನೀರಜ್ ಚೋಪ್ರಾ, ಪಿವಿ ಸಿಂಧು, ಶಿಖರ್ ಧವನ್, ಸೆಹ್ವಾಗ್, ಸೂರ್ಯ ಕುಮಾರ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮಿಥಾಲಿ ರಾಜ್, ಕೆಎಲ್ ರಾಹುಲ್ ಸೇರಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಬೆಂಬಲವಾಗಿ ಭಾರತದ ಸಶಸ ಪಡೆಗಳು ನಮ್ಮ ರಾಷ್ಟ್ರದ ಆತ್ಮ ಎಂದು ಶ್ಲಾಘಿಸಿದ್ದಾರೆ.

ನಮ್ಮ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಗಳ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ. ಯೋಧರು ನಮ್ಮ ರಾಷ್ಟ್ರದ ಹೆಮ್ಮೆಗಾಗಿ ಎದ್ದು ನಿಂತಿದ್ದಾರೆ. ಪ್ರತಿಯೊಬ್ಬ ಭಾರತೀಯನು ಜವಾಬ್ದಾರಿಯುತವಾಗಿರುವುದು ಮತ್ತು ಯಾವುದೇ ಸುಳ್ಳು ಸುದ್ದಿಗಳನ್ನು ಹರಡುವುದು ಅಥವಾ ನಂಬುವುದರಿಂದ ದೂರವಿರುವುದು ಮುಖ್ಯ.ಎಲ್ಲರೂ ಸುರಕ್ಷಿತವಾಗಿರಿ! ಆಪರೇಷನ್ ಸಿಂಧೂರ್ ಜೈಹಿಂದ್ ಎಂದು ಭಾರತ ಏಕದಿನ ತಂಡದ ನಾಯಕ ರೋಹಿತ್ ಎಕ್ಸ್ ಖಾತೆಯಲ್ಲಿ ಬೆಂಬಲ ಸೂಚಿಸಿದ್ದಾರೆ.

ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ, ‘ಈ ಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ರಕ್ಷಿಸಿದ್ದಕ್ಕಾಗಿ ನಮ್ಮ ಸಶಸ್ತ್ರ ಪಡೆಗಳೊಂದಿಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ ಮತ್ತು ಅವರಿಗೆ ನಮಸ್ಕರಿಸುತ್ತೇವೆ. ನಮ್ಮ ವೀರರ ಅಚಲ ಧೈರ್ಯ ಮತ್ತು ಅವರ ಕುಟುಂಬಗಳು ನಮ್ಮ ಮಹಾನ್ ರಾಷ್ಟ್ರಕ್ಕಾಗಿ ಮಾಡುವ ತ್ಯಾಗಗಳಿಗೆ ಎಂದೆಂದಿಗೂ ಋಣಿಯಾಗಿದ್ದೇವೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರೆ.

‘‘ಭಯೋತ್ಪಾದನೆಯ ವಿರುದ್ಧ ನಮ್ಮ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ನಮ್ಮ ಧೈರ್ಯಶಾಲಿ ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಈ ಸಮಯದಲ್ಲಿ ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಪಾತ್ರವನ್ನು ನಿರ್ವಹಿಸೋಣ ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳೋಣ ಎಂದು ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಪಟು ನೀರಜ್ ಚೋಪ್ರಾ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಕೂಡ ಭಾರತೀಯ ಸಶಸ್ತ್ರ ಪಡೆಗಳ ಧೈರ್ಯಕ್ಕೆ ಗೌರವ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net