

ಸಿಲೇಸಿಯಾ (ಪೋಲೆಂಡ್): ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನದ ಜಾವೆಲಿನ್ ಥ್ರೋ ತಾರೆಯರಾದ ಅವಳಿ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಅರ್ಷದ್ ನದೀಂ ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಮೊದಲ ಬಾರಿ ಮುಖಾಮುಖಿಗೆ ಸಜ್ಜಾಗಿದ್ದಾರೆ. ಆಗಸ್ಟ್ 16ರಂದು ಪೋಲೆಂಡ್ನ ಸಿಲೇಸಿಯಾದಲ್ಲಿ ನಡೆಯಲಿರುವ ಡೈಮಂಡ್ ಲೀಗ್ನಲ್ಲಿ ಇವರಿಬ್ಬರೂ ಕಣಕ್ಕಿಳಿಯಲಿದ್ದಾರೆ.
ಸರಿಸುಮಾರು ಒಂದು ವರ್ಷದ ಬಳಿಕ ನೀರಜ್-ನದೀಂ ಮುಖಾಮುಖಿ ಆಗಲಿದ್ದಾರೆ. ಕಳೆದ ವರ್ಷ ಆಗಸ್ಟ್ 8ರಂದು ಇಬ್ಬರೂ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪಧಿರ್ಸಿದಾಗ ನೀರಜ್ ರಜತ ಪದಕಕ್ಕೆ ತೃಪ್ತಿಪಟ್ಟಿದ್ದರೆ, ಅರ್ಷದ್ ನದೀಂ ಒಲಿಂಪಿಕ್ಸ್ ದಾಖಲೆಯ 92.97 ಮೀ. ಎಸೆತದೊಂದಿಗೆ ಸ್ವರ್ಣ ಪದಕ ಗೆದ್ದಿದ್ದರು. ಅದಕ್ಕೆ ಮುನ್ನ 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ನೀರಜ್ ಚಿನ್ನ ಗೆದ್ದಿದ್ದರೆ, ನದೀಂ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.
ಸಿಲೇಸಿಯಾ ಡೈಮಂಡ್ ಲೀಗ್ ಬಳಿಕ ನೀರಜ್-ನದೀಂ, ಸೆಪ್ಟೆಂಬರ್ನಲ್ಲಿ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಮತ್ತೊಮ್ಮೆ ಮುಖಾಮುಖಿ ಆಗಲಿದ್ದಾರೆ. ಅದರಲ್ಲಿ ನೀರಜ್ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದ್ದಾರೆ.
ಇತ್ತೀಚೆಗೆ 90 ಮೀ. ಗಡಿಯನ್ನೂ ದಾಟಿರುವ 27 ವರ್ಷದ ನೀರಜ್ ಪ್ರಸಕ್ತ ಭರ್ಜರಿ ಫಾರ್ಮ್ನಲ್ಲಿದ್ದರೆ, ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಹೆಚ್ಚಿನ ಕೂಟಗಳಲ್ಲಿ ಸ್ಪಧಿರ್ಸದ 28 ವರ್ಷದ ನದೀಂ ಫಾರ್ಮ್ ನಿಗೂಢವಾಗಿದೆ. ಹೀಗಾಗಿ ಪೋಲೆಂಡ್ ಕೂಟದ ಫಲಿತಾಂಶ ಕುತೂಹಲ ಕೆರಳಿಸಿದೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನ ಕಸಿದಿದ್ದ ನದೀಂ ವಿರುದ್ಧ ಸೇಡು ತೀರಿಸಿಕೊಳ್ಳಲು ನೀರಜ್ಗೆ ಇದು ಉತ್ತಮ ಅವಕಾಶವೂ ಆಗಿದೆ.
ಕೊನೆಯದಾಗಿ ಜುಲೈ 5ರಂದು ಬೆಂಗಳೂರಿನ ನೀರಜ್ ಚೋಪ್ರಾ ಕ್ಲಾಸಿಕ್ನಲ್ಲಿ ಸ್ಪಧಿರ್ಸಿದ್ದ ಭಾರತದ ಚಿನ್ನದ ಹುಡುಗ ಪ್ರಸಕ್ತ ಜರ್ಮನಿಯ ದಿಗ್ಗಜ ಜಾನ್ ಜೆಲೆಜ್ನಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ನದೀಂ ಹಾಲಿ ವರ್ಷ ಒಂದೇ ಕೂಟದಲ್ಲಿ ಸ್ಪಧಿರ್ಸಿದ್ದು, ಅದು ಏಷ್ಯನ್ ಚಾಂಪಿಯನ್ಷಿಪ್ ಆಗಿದೆ. ಇದರಲ್ಲಿ ನದೀಂ ಗರಿಷ್ಠ 86.40 ಮೀ. ಎಸೆದಿದ್ದರು.