ಖೇಲ್​ರತ್ನ ಪ್ರಶಸ್ತಿ ಸ್ವೀಕರಿಸಲು ಚಿರಾಗ್ ಶೆಟ್ಟಿ-ಸಾತ್ವಿಕ್​ ಸಾಯಿರಾಜ್ ಜೋಡಿ ಗೈರಾಗಿದ್ದೇಕೆ? ಇಲ್ಲಿದೆ ಕಾರಣ...

chirag satwik web
Published on

ನವದೆಹಲಿ: ತವರಿನ ಏಕದಿನ ವಿಶ್ವಕಪ್​ನಲ್ಲಿ ಸರ್ವಾದಿಕ ವಿಕೆಟ್​ ಕಬಳಿಸಿ ಮಿಂಚಿದ್ದ ಟೀಮ್​ ಇಂಡಿಯಾ ವೇಗಿ ಮೊಹಮದ್​ ಶಮಿ, ಹಾಂಗ್​ರೆೌ ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಅವಳಿ ಸ್ವರ್ಣ ಪದಕ ಗೆದ್ದು ಬೀಗಿದ್ದ ಎರಡೂ ಕೈಗಳಿಲ್ಲದ ಬಿಲ್ಗಾರ್ತಿ ಶೀತಲ್​ ದೇವಿ ಸಹಿತ 25 ಕ್ರೀಡಾಪಟುಗಳಿಗೆ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುಮುರ್ ಅವರು ಅರ್ಜುನ ಪ್ರಶಸ್ತಿ ಪ್ರದಾನ ಮಾಡಿದರು. ಆದರೆ, ಏಷ್ಯನ್​ ಗೇಮ್ಸ್​ ಸ್ವರ್ಣ ಪದಕ ವಿಜೇತ ಹಾಗೂ ಮಾಜಿ ವಿಶ್ವ ನಂ. 1 ಬ್ಯಾಡ್ಮಿಂಟನ್​ ಡಬಲ್ಸ್​ ತಾರೆಯರಾದ ಚಿರಾಗ್​ ಶೆಟ್ಟಿ ಮತ್ತು ಸಾತ್ವಿಕ್​ ಸಾಯಿರಾಜ್​ ದೇಶದ ಅತ್ಯುನ್ನತ ಮೇಜರ್​ ಧ್ಯಾನ್​ಚಂದ್​ ಖೇಲ್​ರತ್ನ ಪ್ರಶಸ್ತಿಗೆ ಪಾತ್ರರಾಗಿದ್ದರೂ, ಗೌರವ ಸ್ವೀಕಾರಕ್ಕೆ ಗೈರಾಗಿದ್ದರು.

ಚಿರಾಗ್​ ಶೆಟ್ಟಿ ಮತ್ತು ಸಾತ್ವಿಕ್​ ಸಾಯಿರಾಜ್​ ಜೋಡಿ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಆಡಲು ಕೌಲಾಲಂಪುರಕ್ಕೆ ತೆರಳಿರುವ ಕಾರಣದಿಂದಾಗಿ ಅನಿವಾರ್ಯವಾಗಿ, ಖೇಲ್​ರತ್ನದಂಥ ಮಹಾಪ್ರಶಸ್ತಿಯನ್ನು ರಾಷ್ಟ್ರಪತಿಯಿಂದ ಸ್ವೀಕರಿಸುವ ಸುವರ್ಣಾವಕಾಶದಿಂದ ವಂಚಿತರಾದರು. ಇದೇ ರೀತಿ, ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದ 26 ಕ್ರೀಡಾಪಟುಗಳ ಪೈಕಿ ಯುವ ಶೂಟರ್​ ಇಶಾ ಸಿಂಗ್​ ಮಾತ್ರ ಗೈರಾಗಿದ್ದರು. 19 ವರ್ಷದ ಇಶಾ ಜಕಾರ್ತದಲ್ಲಿ ಏಷ್ಯನ್​ ಒಲಿಂಪಿಕ್ಸ್​ ಅರ್ಹತಾ ಕೂಟದಲ್ಲಿ ಪಾಲ್ಗೊಂಡಿರುವ ಕಾರಣದಿಂದಾಗಿ ಸಮಾರಂಭದಲ್ಲಿ ಹಾಜರಿರಲಿಲ್ಲ. ಸೋಮವಾರವಷ್ಟೇ ಅವರು 10 ಮೀ. ಏರ್​ ಪಿಸ್ತೂಲ್​ ವಿಭಾಗದಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ ಅರ್ಹತೆಯನ್ನೂ ಗಿಟ್ಟಿಸಿಕೊಂಡಿದ್ದರು.

ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ತಪ್ಪಿಸಿಕೊಂಡಿರುವ ಕ್ರೀಡಾಪಟುಗಳು ಇನ್ನು ತಮಗೆ ಬಿಡುವಾದ ಸಮಯದಲ್ಲಿ ನವದೆಹಲಿಯ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಭೇಟಿ ನೀಡಿ, ಕ್ರೀಡಾ ಸಚಿವರಿಂದ ಪ್ರಶಸ್ತಿಯನ್ನು ಸ್ವೀಕರಿಸಬಹುದಾಗಿದೆ. ಈ ಹಿಂದೆಲ್ಲ ಕ್ರೀಡಾಪಟುಗಳು ಕ್ರೀಡಾಕೂಟಗಳ ಕಾರಣದಿಂದಾಗಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರಾದಾಗ ಅವರ ಪಾಲಕರು ಅಥವಾ ಅವರ ಪರವಾಗಿ ಬೇರೆಯವರು ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ರಾಷ್ಟ್ರಪತಿಯವರು ಕ್ರೀಡಾಪಟುಗಳು ಖುದ್ದಾಗಿ ಹಾಜರಿದ್ದರೆ ಮಾತ್ರ ಅವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ. ಅವರ ಪರವಾಗಿ ಬೇರೆಯವರು ಪ್ರಶಸ್ತಿ ಸ್ವೀಕರಿಸಲು ಅವಕಾಶವಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net