

ನವದೆಹಲಿ: ಮಾರಕ ಕರೊನಾ ಸೋಂಕಿನ ಭೀತಿಯಿಂದಾಗಿ ಚೀನಾದ ಷಟ್ಲರ್ಗಳಿಗೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧೆ ನಿರ್ಬಂಧಿಸುವುದಿಲ್ಲ ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ (ಬಿಡಬ್ಲ್ಯುಎಫ್) ತಿಳಿಸಿದೆ.
ಕರೊನಾ ಭೀತಿಯಿಂದಾಗಿ ಈಗಾಗಲೆ ಹಲವು ದೇಶಗಳು ಚೀನಾಗೆ ವಿಮಾನ ಹಾರಾಟವನ್ನು ನಿರ್ಬಂಧಿಸಿವೆ. ಹಲವು ದೇಶಗಳು ಚೀನಾದಿಂದ ಯಾವುದೇ ವ್ಯಕ್ತಿ ತಮ್ಮಲ್ಲಿಗೆ ಬರುವುದನ್ನು ನಿರ್ಬಂಧಿಸಿವೆ. ಈ ಬೆಳವಣಿಗೆಗಳನ್ನು ಗಮನಿಸಿರುವ ಬಿಡಬ್ಲ್ಯುಎಫ್, ಚೀನಾದ ಯಾವುದೇ ಆಟಗಾರ, ಅಧಿಕಾರಿಗಳು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಮತ್ತು ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಭಾಗವಹಿಸದಂತೆ ತಡೆಯುವಂತಿಲ್ಲ ಎಂಬ ಸೂಚನೆ ನೀಡಿದೆ.
ಚೀನಾದಿಂದ ಬರುವ ಸ್ಪರ್ಧಿಗಳನ್ನೂ ಇತರ ದೇಶಗಳ ಸ್ಪರ್ಧಿಗಳಂತೆ ಸಮಾನವಾಗಿ ಕಾಣಬೇಕು. ಸಾಮಾನ್ಯ ರೀತಿಯಲ್ಲಿ ಹಸ್ತಲಾಘವವನ್ನೂ ನಿರಾಕರಿಸುವಂತಿಲ್ಲ. ಚೀನಾ ಆಟಗಾರರು ದೇಶಕ್ಕೆ ಬಂದಿಳಿದಾಗಲೇ ಆರೋಗ್ಯ ಇಲಾಖೆಯ ಮೂಲಕ ಸೂಕ್ತ ತಪಾಸಣೆ ನಡೆಸಬಹುದು ಎಂದು ಬಿಡಬ್ಲ್ಯುಎಫ್ ತಿಳಿಸಿದೆ.
ಫೆ. 25ರಿಂದ ಮಾಚ್ 1ರವರೆಗೆ ಹೈನನ್ನಲ್ಲಿ ನಡೆಯಬೇಕಿದ್ದ ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಮುಂದೂಡಲಾಗಿದೆ. ಇದು ಒಲಿಂಪಿಕ್ಸ್ ಅರ್ಹತಾ ಪ್ರಕ್ರಿಯೆಯ ಕೂಟವಾಗಿದ್ದರೂ, ಕರೊನಾ ಭೀತಿಯಿಂದಾಗಿ ಹಲವು ಆಟಗಾರರು ಹಿಂದೆ ಸರಿದಿದ್ದ ಕಾರಣ ಬಿಡಬ್ಲ್ಯುಎಫ್ ಮುಂದೂಡುವ ನಿರ್ಧಾರ ಕೈಗೊಂಡಿತ್ತು. ಏಪ್ರಿಲ್ 21ರಿಂದ 26ರವರೆಗೆ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಷಿಪ್ಗೆ ಚೀನಾದ ವುಹಾನ್ ಆತಿಥ್ಯ ವಹಿಸಬೇಕಾಗಿದೆ. ಈ ನಗರದಲ್ಲೇ ಕರೊನಾ ಮೊದಲಿಗೆ ಕಾಣಿಸಿಕೊಂಡಿದ್ದ ಕಾರಣ, ಕೂಟದ ಬಗ್ಗೆ ಅನುಮಾನಗಳಿವೆ.