

ನವದೆಹಲಿ: ಕಳೆದ ಎರಡು ಆಸ್ಟ್ರೆಲಿಯಾ ಪ್ರವಾಸದ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಭಾರತದ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಈ ಬಾರಿ ಮತ್ತೆ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ! ಆದರೆ ಈ ಬಾರಿ ಅವರು ಆಟಗಾರರಾಗಿ ಅಲ್ಲ, ಬದಲಾಗಿ ವೀಕ್ಷಕ ವಿವರಣೆಕಾರರಾಗಿ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಭಾಗವಹಿಸಲಿದ್ದಾರೆ.
ಭಾರತ-ಆಸೀಸ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಗೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಹಿಂದಿ ಕಾಮೆಂಟರಿ ಪ್ಯಾನೆಲ್ನಲ್ಲಿ ಪೂಜಾರ ಕೂಡ ಸ್ಥಾನ ಪಡೆದಿದ್ದಾರೆ. ಭಾರತ ಪರ 100ಕ್ಕೂ ಅಧಿಕ ಟೆಸ್ಟ್ ಆಡಿರುವ 36 ವರ್ಷದ ಪೂಜಾರ 19 ಶತಕಗಳ ಸಹಿತ 7 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ಆದರೆ 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಬಳಿಕ ಅವರು ಭಾರತ ಪರ ಯಾವುದೇ ಪಂದ್ಯ ಆಡಿಲ್ಲ.