ರಣಜಿಯಲ್ಲಿ 25ನೇ ಶತಕ ಸಿಡಿಸಿ ಹಲವು ದಾಖಲೆ ಬರೆದ ಚೇತೇಶ್ವರ ಪೂಜಾರ!

web pujara
Published on

ರಾಜ್​ಕೋಟ್: ಅನುಭವಿ ಬ್ಯಾಟರ್​ ಚೇತೇಶ್ವರ ಪೂಜಾರ ರಣಜಿ ಟ್ರೋಫಿಯಲ್ಲಿ 25ನೇ, ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 66ನೇ ಮತ್ತು ಹಾಲಿ ವರ್ಷದ 6ನೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೆ ಈ ಶತಕವನ್ನು ವೃತ್ತೀಜಿವನದ 18ನೇ ದ್ವಿಶತಕವಾಗಿಯೂ ಪರಿವರ್ತಿಸಿಕೊಂಡರು.

36 ವರ್ಷದ ಪೂಜಾರ ಛತ್ತೀಸ್​ಗಢ ವಿರುದ್ಧ ನಡೆದ ಪಂದ್ಯದಲ್ಲಿ ಸೌರಾಷ್ಟ್ರ ಪರ 383 ಎಸೆತಗಳಲ್ಲಿ 25 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 234 ರನ್​ ಸಿಡಿಸಿದರು. ಈ ಮೂಲಕ ಛತ್ತೀಸ್​ಗಢದ 578/7 ಡಿಕ್ಲೇರ್​ ಮೊತ್ತಕ್ಕೆ ಪ್ರತಿಯಾಗಿ 8 ವಿಕೆಟ್​ಗೆ 278 ರನ್​ ಗಳಿಸಿತು. 4 ದಿನಗಳಲ್ಲಿ ಉಭಯ ತಂಡಗಳ ಮೊದಲ ಇನಿಂಗ್ಸ್​ ಪೂರ್ಣಗೊಳ್ಳದ ಕಾರಣ ತಲಾ 1 ಅಂಕಕ್ಕೆ ತೃಪ್ತಿಪಟ್ಟವು. ಪೂಜಾರ ಈಗ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 66 ಶತಕ ಸಿಡಿಸಿರುವ ವೆಸ್ಟ್​ ಇಂಡೀಸ್​ನ ಬ್ರಿಯಾನ್​ ಲಾರಾ ಸಾಧನೆ ಸರಿಗಟ್ಟಿದ್ದಾರೆ. ಭಾರತೀಯ ಸಾಧಕರಲ್ಲಿ ಅವರು ಸಚಿನ್​ ತೆಂಡುಲ್ಕರ್​, ಸುನೀಲ್​ ಗಾವಸ್ಕರ್​ (ತಲಾ 81) ಮತ್ತು ರಾಹುಲ್​ ದ್ರಾವಿಡ್​ (68) ನಂತರದಲ್ಲಿದ್ದಾರೆ.

ಇದೇ ವೇಳೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 21 ಸಾವಿರ ರನ್​ ಪೂರೈಸಿದ 4ನೇ ಭಾರತೀಯರೆಂಬ ಹೆಗ್ಗಳಿಕೆಗೂ ಪೂಜಾರ ಪಾತ್ರರಾಗಿದ್ದಾರೆ. ಪೂಜಾರ ಈ ಸಾಧನೆಯೊಂದಿಗೆ ಆಸ್ಟ್ರೆಲಿಯಾ ಪ್ರವಾಸದ ಬಾರ್ಡರ್​&ಗಾವಸ್ಕರ್​ ಟ್ರೋಫಿಗೆ ಮುನ್ನ ಆಯ್ಕೆಗಾರರ ಗಮನವನ್ನೂ ಸೆಳೆದಿದ್ದಾರೆ. 2023ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಬಳಿಕ ಪೂಜಾರ ಭಾರತ ಪರ ಯಾವುದೇ ಪಂದ್ಯ ಆಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net