

ಚೆನ್ನೈ: ಐಪಿಎಲ್ 18ನೇ ಆವೃತ್ತಿಯಲ್ಲಿ ಸತತ 2 ಗೆಲುವಿನೊಂದಿಗೆ ಬೀಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆಪಾಕ್ ಮೈದಾನದಲ್ಲಿ ಶನಿವಾರ ಆತಿಥೇಯ ಚೆನ್ನೈ ಸೂಪರ್‌ಕಿಂಗ್ಸ್ ಎದುರು ಕಣಕ್ಕಿಳಿಯಲಿದೆ. ನಾಯಕ ಋತುರಾಜ್ ಗಾಯಕ್ವಾಡ್ ಆಡುವುದು ಅನುಮಾನ ಎನಿಸಿದ್ದು, ಎಂಎಸ್ ಧೋನಿ ಹಂಗಾಮಿಯಾಗಿ ಸಾರಥ್ಯ ವಹಿಸುವ ಸಾಧ್ಯತೆಗಳಿವೆ.
ಪವರ್ ಪ್ಲೇಯಲ್ಲಿ ಪವರ್ ಕಳೆದುಕೊಳ್ಳುತ್ತಿರುವ ಸಿಎಸ್‌ಕೆ ಟೂರ್ನಿಯಲ್ಲಿ ಇದುವರೆಗೆ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಜತೆಗೆ ತವರಿನ ಅಂಗಣದಲ್ಲಿ ಆರ್‌ಸಿಬಿ ಎದುರು 17 ವರ್ಷಗಳ ಬಳಕ ಮುಗ್ಗರಿಸಿದ್ದು ಮತ್ತಷ್ಟು ಹಿನ್ನಡೆ ಎನಿಸಿದೆ. ಮನೆ ಅಂಗಣದಲ್ಲಿ ಕಂಬ್ಯಾಕ್‌ನ ತವಕ ತಂಡದ್ದಾಗಿದೆ. ನೂತನ ನಾಯಕ ಅಕ್ಷರ್ ಪಟೇಲ್ ಮುಂದಾಳತ್ವದಲ್ಲಿ ಹೊಸ ಜೋಶ್‌ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಅಗ್ರ 4ರಲ್ಲಿ ಸ್ಥಾನ ಗಟ್ಟಿಗೊಳಿಸುವ ತವಕದಲ್ಲಿದೆ. ಹಿಂದೆ ಸಿಎಸ್‌ಕೆ ತಂಡದಲ್ಲಿ ಆಡಿದ್ದ 40 ವರ್ಷದ ಾಪ್ ಡು ಪ್ಲೆಸಿಸ್ ಅನುಭವ ತಂಡಕ್ಕೆ ಹೆಚ್ಚಿನ ನೆರವು ಒದಗಿಸಲಿದೆ.
ಚೆಪಾಕ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಒದಗಿಸುವುದರಿಂದ ಪ್ರಮುಖವಾಗಿ ಕುಲದೀಪ್ ಯಾದವ್ ಹಾಗೂ ನೂರ್ ಅಹ್ಮದ್ ಸ್ಪಿನ್ ಸ್ಪರ್ಧೆಗೆ ಪಂದ್ಯ ಸಾಕ್ಷಿಯಾಗಲಿದೆ. ಸಿಎಸ್‌ಕೆ ಹಾಗೂ ಡೆಲ್ಲಿಯ 4 ಸ್ಪಿನ್ನರ್‌ಗಳಲ್ಲಿ 5.25ರ ಸರಾಸರಿ ಹೊಂದಿರುವ ಕುಲದೀಪ್ ಅಗ್ರಸ್ಥಾನಲ್ಲಿದ್ದಾರೆ. ನೂರ್ ಅಹ್ಮದ್ ಹಾಲಿ ಸೀಸನ್‌ನಲ್ಲಿ 9 ವಿಕೆಟ್ ಪಡೆದು ಮೊದಲ ಸ್ಥಾನಲ್ಲಿದ್ದಾರೆ. ವಿಶಾಖಪಟ್ಟಣದಲ್ಲಿ ಸರಾಗವಾಗಿ ರನ್‌ಗಳಿಸಿದ್ದ ಡೆಲ್ಲಿ ಬ್ಯಾಟರ್‌ಗಳಿಗೆ ಸಿಎಸ್‌ಕೆ ಸ್ಪಿನ್ನರ್‌ಗಳ ಎದುರು ಸತ್ವಪರೀಕ್ಷೆ ಎದುರಾಗುವ ಸಾಧ್ಯತೆಗಳಿವೆ. ಹಿಂದಿನ ಪಂದ್ಯದಲ್ಲಿ ಕೆಎಲ್ ರಾಹುಲ್ 300 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ ಮಧ್ಯಮ ಕ್ರಮಾಂಕದ ಬಲ ಹಿಗ್ಗಿಸಿದ್ದಾರೆ.
ಗಾಯಕ್ವಾಡ್‌ಗೆ ಗಾಯ, ಧೋನಿ ಕ್ಯಾಪ್ಟನ್!
ಹಿಂದಿನ ಪಂದ್ಯದಲ್ಲಿ ಮೊಣಕೈಗೆ ಪೆಟ್ಟು ತಿಂದಿರುವ ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ಡೆಲ್ಲಿ ವಿರುದ್ಧ ಆಡುವುದು ಅನುಮಾನ ಎನ್ನಲಾಗಿದೆ. ಗಾಯಕ್ವಾಡ್ ಗೈರಾದರೆ ಮಾಜಿ ನಾಯಕ ಎಂಎಸ್ ಧೋನಿ ಹಂಗಾಮಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಆಗ ಗಾಯಕ್ವಾಡ್ ಸ್ಥಾನದಲ್ಲಿ ಯುವ ಆಟಗಾರ ಶೇಕ್ ರಶೀದ್ ಅಥವಾ ವಿಕೆಟ್ ಕೀಪರ್-ಬ್ಯಾಟರ್ ವಂಶ್ ಬೇಡಿ ಪದಾರ್ಪಣೆ ಅವಕಾಶ ಪಡೆಯಬಹುದು. ‘ನೆಟ್ಸ್ ಅಭ್ಯಾಸ ಹಾಗೂ ಪಂದ್ಯದ ವೇಳೆಗೆ ಗಾಯಕ್ವಾಡ್ ಎಷ್ಟು ಚೇತರಿಸಿಕೊಂಡಿದ್ದಾರೆ ಎಂಬುದರ ಮೇಲೆ ಕಣಕ್ಕಿಳಿಯುವುದರ ಬಗ್ಗೆ ನಿರ್ಧರಿಸಲಾಗುವುದು. ಅವರು ಆಡದಿದ್ದರೆ ಯಾರು ಮುನ್ನಡೆಸುತ್ತಾರೆಂದು ಖಚಿತವಿಲ್ಲ. ಆದರೆ ಯುವ ವಿಕೆಟ್‌ಕೀಪರ್ (ಧೋನಿ) ತಂಡವನ್ನು ಮುನ್ನಡೆಸುವ ನಿರೀಕ್ಷೆ ಇದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸೆ ತಿಳಿಸಿದ್ದಾರೆ.
ಬಿಗ್ ಹಿಟ್ಟರ್‌ಗಳ ಕೊರತೆ: ಅನುಭವಿ ಆಟಗಾರರಿಗೆ ಹೆಚ್ಚಿನ ಮಣೆ ಹಾಕಲಿರುವ ಸಿಎಸ್‌ಕೆ ಈ ಬಾರಿ ಇದು ದುಬಾರಿಯಾಗಿ ಪರಿಣಮಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಬಿಗ್ ಹಿಟ್ಟರ್‌ಗಳ ಕೊರತೆ ತಂಡಕ್ಕೆ ಕಾಡುತ್ತಿದೆ. ಪವರ್ ಪ್ಲೇಯಲ್ಲಿ ಸಿಎಸ್‌ಕೆ ಅತ್ಯಂತ ಕಳಪೆ ಎನಿಸಿದೆ. ಮಹಾರಾಷ್ಟ್ರ ತಂಡದಲ್ಲಿ ಸಹ ಆಟಗಾರನಾಗಿರುವ ರಾಹುಲ್ ತ್ರಿಪಾಠಿಗೆ ಆರಂಭಿಕ ಸ್ಥಾನ ಬಿಟ್ಟುಕೊಟ್ಟಿರುವ ಋತುರಾಜ್ ಯಶಸ್ಸು ಕಂಡಿಲ್ಲ. ಮೂರನೇ ಕ್ರಮಾಂಕದಲ್ಲಿ ಆಡುವುದು ಋತುರಾಜ್ ನಿರ್ಧಾರ ಎನ್ನಲಾಗಿದೆ. ರಚಿನ್ ರವೀಂದ್ರ ಕೇವಲ ಬ್ಯಾಟಿಂಗ್‌ಗೆ ಸೀಮಿತವಾಗಿದ್ದು, ವಿಜಯ್ ಶಂಕರ್, ದೀಪಕ್ ಹೂಡಾ ಾರ್ಮ್ ಸಿಎಸ್‌ಕೆಗೆ ಕಳವಳಕಾರಿ ಎನಿಸಿದೆ. ಧೋನಿ ಬ್ಯಾಟಿಂಗ್‌ನಲ್ಲಿ ಈ ಬಾರಿ ಹೆಚ್ಚಿನ ಬಲ ಇಲ್ಲದಿರುವುದು ಸಿಎಸ್‌ಕೆಗೆ ಮಧ್ಯ ಕ್ರಮಾಂಕದಲ್ಲಿ ದೊಡ್ಡ ಹೊಡೆತಗಳನ್ನು ಆಡಬಲ್ಲ ಆಟಗಾರರ ಕೊರತೆ ಎದುರಾಗಿದೆ. ಶಿವಂ ದುಬೆ ಸ್ಪಿನ್ನರ್‌ಗಳ ಎದುರು ಮಿಂಚಿದರೂ ನೆಚ್ಚಿಕೊಳ್ಳುವಂತಿಲ್ಲ.
ಮುಖಾಮುಖಿ: 30
ಡೆಲ್ಲಿ: 11
ಸಿಎಸ್‌ಕೆ: 19
ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್