

ಚೆನ್ನೈ: ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಚೆನ್ನೈ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಅವರು ಎಟಿಪಿ ರ್ಯಾಂಕಿಂಗ್ನಲ್ಲಿ ಅಗ್ರ 100ರೊಳಗೆ ಸ್ಥಾನ ಪಡೆಯುವ ಸನಿಹ ತಲುಪಿದ್ದಾರೆ.
ಸದ್ಯ 121ನೇ ರ್ಯಾಂಕ್ನಲ್ಲಿರುವ ಸುಮಿತ್ ಫೈನಲ್ನಲ್ಲೂ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರೆ ವೃತ್ತೀಜಿವನದಲ್ಲಿ ಮೊಟ್ಟಮೊದಲ ಬಾರಿಗೆ ಅಗ್ರ 100ರೊಳಗೆ ಪ್ರವೇಶಿಸಲಿದ್ದಾರೆ. ಸೋಮ್ದೇವ್ ದೇವವರ್ಮನ್ ಈ ಸಾಧನೆ ಮಾಡಿರುವ ಕೊನೇ ಭಾರತೀಯರಾಗಿದ್ದಾರೆ.
26 ವರ್ಷದ ಸುಮಿತ್ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಡಲಿಬೋರ್ ಸ್ವಿಸಿನಾ ಎದುರು 6-3, 6-4 ನೇರಸೆಟ್ಗಳಿಂದ ಜಯಿಸಿದರು. ಅವರು ಭಾನುವಾರ ಫೈನಲ್ನಲ್ಲಿ ಇಟಲಿಯ ಲುಕಾ ನಾರ್ಡಿ ವಿರುದ್ಧ ಸೆಣಸಲಿದ್ದಾರೆ.