

ಬೆಂಗಳೂರು: ಭಾರತದ ನಿತೀಶ್ ಕುಮಾರ್ ಸಿನ್ಹಾ ಮತ್ತು ಅಮೆರಿಕದ ನಿಕ್ ಚಾಪೆಲ್ ಜೋಡಿ ಕಲಬುರಗಿ ಓಪನ್ ಪುರುಷರ ಐಟಿಎಫ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೇರಿದೆ. ಶನಿವಾರ ನಡೆಯಲಿರುವ ಪ್ರಶಸ್ತಿ ಹೋರಾಟದಲ್ಲಿ ಅಗ್ರ ಶ್ರೇಯಾಂಕಿತ ರಷ್ಯಾದ ಇಗೋರ್ ಅಗಪೊನೊವ್-ಬೋಗ್ಡನ್ ಬೊಬ್ರೊವ್ ಎದುರು ಸೆಣಸಲಿದೆ. ಸಿಂಗಲ್ಸ್‌ನಲ್ಲಿ ಏಳನೇ ಶ್ರೇಯಾಂಕಿತ ದೇವ್ ಜವಿಯಾ, ಅಗ್ರ ಶ್ರೇಯಾಂಕಿತ ಖುಮೊಯುನ್ ಸುಲ್ತಾನೊವ್, ಅಮೆರಿಕ್ ನಿಕ್ ಚಾಪೆಲ್ ಹಾಗೂ 2ನೇ ಶ್ರೇಯಾಂಕಿತ ಬೋಗ್ಡನ್ ಬೊಬ್ರೊವ್ ಸೆಮಿಫೈನಲ್‌ಗೇರಿದ್ದಾರೆ.
ಕಲಬುರಗಿಯ ಚಂದ್ರಶೇಖರ್ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ನಡೆದ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ ದೇವ್ ಜವಿಯಾ 1-0 ರಿಂದ ಮುನ್ನಡೆಯಲ್ಲಿದ್ದಾಗ ಸಿದ್ದಾರ್ಥ್ ರಾವತ್ ಪಂದ್ಯದಿಂದ ಹಿಂದೆಸರಿದರೆ, ಮತ್ತೊಂದು ಪಂದ್ಯದಲ್ಲಿ ನಿಕ್ ಚಾಪೆಲ್ 7-5, 6-2ರಿಂದ 4ನೇ ಶ್ರೇಯಾಂಕಿತ ಕರಣ್ ಸಿಂಗ್‌ಗೆ ಆಘಾತ ನೀಡಿದರು. ರಷ್ಯಾದ ಬೋಗ್ಡನ್ ಬೊಬ್ರೊವ್ 7-5, 6-3 ರಿಂದ ಆರ್ಯನ್ ಷಾರನ್ನು ಮಣಿಸಿದರೆ, ಖುಮೊಯುನ್ 6-2, 6-3 ರಿಂದ ಮ್ಯಾಕ್ಸಿಮ್ ಝೂಕೊವ್ ವಿರುದ್ಧ ಗೆದ್ದು ಉಪಾಂತ್ಯಕ್ಕೇರಿದರು.