

ಗುವಾಹಟಿ: ಏಕದಿನ ವಿಶ್ವಕಪ್‌ಗೆ 4ನೇ ಬಾರಿ ಆತಿಥ್ಯ ವಹಿಸುವ ಜತೆಗೆ 12 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ಜಯಿಸುವ ನಿಟ್ಟಿನಲ್ಲಿ ಟೀಮ್ ಇಂಡಿಯಾ ಪೂರ್ವಸಿದ್ಧತೆಯ ಕೊನೇ ಹಂತವಾಗಿ ಶನಿವಾರ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯ ಆಡಲಿದೆ. ಅಸ್ಸಾಂನ ಬರ್ಸಾಪುರದ ಕ್ರೀಡಾಂಗಣದಲ್ಲಿ ಮುಖಾಮುಖಿ ನಡೆಯಲಿದೆ. ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿರದ ಈ ಪಂದ್ಯದಲ್ಲಿ ಎಲ್ಲ 15 ಆಟಗಾರರು (11 ಮಂದಿ ಮಾತ್ರ ಬ್ಯಾಟಿಂಗ್-ಫೀಲ್ಡಿಂಗ್) ಕಣಕ್ಕಿಳಿಯಬಹುದಾಗಿದೆ.
ಏಷ್ಯಾಕಪ್ ಹಾಗೂ ಆಸೀಸ್ ವಿರುದ್ಧ ಸರಣಿ ಗೆದ್ದು, ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಒಲಿಸಿಕೊಂಡಿರುವ ರೋಹಿತ್ ಶರ್ಮ ಬಳಗ, ಆಡುವ 11ರ ಬಳಗ ಅಂತಿಮಗೊಳಿಸುವ ಸಿದ್ಧತೆಯಲ್ಲಿದೆ. 8ನೇ ಕ್ರಮಾಂಕದಲ್ಲಿ ಆಡಲು ಕೊನೇಕ್ಷಣದಲ್ಲಿ ತಂಡ ಸೇರಿದ ಆರ್. ಅಶ್ವಿನ್ ಮತ್ತು ಶಾರ್ದೂಲ್ ಠಾಕೂರ್ ನಡುವೆ ‘ಆಯ್ಕೆ ಟ್ರಯಲ್ಸ್’ ನಡೆಯಲಿದೆ. ಪ್ರಮುಖ ಆಟಗಾರರು ಗಾಯದಿಂದ ಚೇತರಿಸಿಕೊಂಡು ಫಿಟ್ ಆಗಿರುವುದರಿಂದ ಭಾರತ ವಿಶ್ವಕಪ್‌ಗೆ ಬಲಿಷ್ಠ ತಂಡ ಸಂಯೋಜನೆಯನ್ನೇ ಕಂಡುಕೊಂಡಿದೆ.
ಇನ್ನು ಈ ಸಲವೂ ಪ್ರಶಸ್ತಿ ಗೆಲ್ಲುವ ೇವರಿಟ್ ತಂಡಗಳಲ್ಲಿ ಒಂದಾಗಿರುವ ಇಂಗ್ಲೆಂಡ್, ಸತತ 2 ಬಾರಿ ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ (1975, 79), ಆಸ್ಟ್ರೇಲಿಯಾ (1999, 2003, 2007) ಸಾಧನೆ ಸರಿಗಟ್ಟುವ ಉತ್ಸಾಹದಲ್ಲಿದೆ. ಆದರೆ, ಸತತ 38 ಗಂಟೆ ಪ್ರಯಾಣಿಸಿ ಶುಕ್ರವಾರವಷ್ಟೇ ಭಾರತಕ್ಕೆ ಆಗಮಿಸಿರುವ ಆಂಗ್ಲರು, ಬಳಲಿಕೆಯ ನಡುವೆ ಕಣಕ್ಕಿಳಿಯಬೇಕಾದ ಸವಾಲು ಹೊಂದಿದ್ದಾರೆ.
ಆರಂಭ: ಮಧ್ಯಾಹ್ನ 2.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್